ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಕೊರಗ ಅಭಿವೃದ್ಧಿ ಸಮಿತಿ ಸಭೆ ಬಂಟ್ವಾಳ ತಾಲೂಕು ಪಂಚಾಯತ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
ತಾಲೂಕಿನ ವಿವಿಧ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯ ಮನೆಗಳಿಗೆ ಬಾವಿ ಸಹಿತ ಆವರಣ ಗೋಡೆ ನಿರ್ಮಿಸಿ ಕೊಡಲಾಗಿದ್ದು, ನಮ್ಮ ಕಾಲನಿಗೂ ಆವರಣಗೋಡೆ ನಿರ್ಮಾಣ ಮಾಡುವಂತೆ ಕೊರಗ ಸಮುದಾಯ ಸಭೆಯಲ್ಲಿ ಮನವಿ ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ವೈಯಕ್ತಿಕವಾಗಿ ಮನೆಗಳಿಗೆ ಆವರಣಗೋಡೆ ನಿರ್ಮಿಸಲು ಅನುದಾನ ಒದಗಿಸಲು ಅವಕಾಶವಿಲ್ಲ. ಮನೆ ದುರಸ್ಥಿ, ಕೃಷಿ, ಶೌಚಾಲಯ, ರಸ್ತೆ ಇವುಗಳಿಗೆ ಆದ್ಯತೆ ಮೇರೆಗೆ ಹಾಗೂ ಸಾರ್ವಜನಿಕ ಹಿತಾಸಕ್ತಿಯಡಿ ಅನುದಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಹಂತದಲ್ಲಿ ಕೊರಗ ಜನಾಂಗ ಪ್ರಮುಖರು, ತಾಲೂಕಿನ ಇರಾ, ನರಿಂಗಾನ ಕೊರಗ ಜನಾಂಗದ ಕಾಲನಿಯಲ್ಲಿ ಸ್ಥಳೀಯ ಪಂಚಾಯತ್‌ನಿಂದ ಆವರಣ ಗೋಡೆ ನಿರ್ಮಿಸಲಾಗಿದೆ. ಈ ಬಗ್ಗೆ ತಾವು ಪರಿಶೀಲಿಸಬಹುದು ಸಭೆಯ ಗಮನ ಸೆಳೆದರು.
ತಾಲೂಕಿನಲ್ಲಿ ೪೮ ಎಕರೆ ಡಿಸಿ ಮನ್ನಾ ಜಾಗವಿದ್ದು, ಇದಕ್ಕಾಗಿ ಸುಮಾರು ೭೦೦ ಅರ್ಜಿಗಳು ಬಂದಿವೆ. ಈ ಪೈಕಿ ೫೦೦ ಅರ್ಜಿಗಳು ಪ್ರಕ್ರಿಯೆ ಹಂತದಲ್ಲಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್. ಆರ್. ಸಭೆಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊರಗ ಜನಾಂಗದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಪಂನ ಪಿಡಿಒಗಳ ಕೂಡಾ ಈ ಸಭೆಗೆ ಕರೆಸಬೇಕು ಎಂದು ಕೊರಗ ಜನಾಂಗದ ಪ್ರಮುಖರು ಸಭೆಗೆ ಒತ್ತಾಯಿಸಿದಾಗ ಇದೇ ತಿಂಗಳ ಅಂತ್ಯದೊಳಗೆ ಎಲ್ಲ ಪಿಡಿಒ-ಕೊರಗ ಜನಾಂಗದ ಪ್ರಮುಖರ ಜಂಟಿ ಸಭೆಯೊಂದನ್ನು ಆಯೋಜಿಸುವುದಾಗಿ ಇಒ ಸಭೆಗೆ ತಿಳಿಸಿದರು.
ನಿವೇಶನ ಮಂಜೂರಾದ ಕೆಲವು ಕಡೆಗಳಲ್ಲಿ ಪಹಣಿಗೆ ಸಂಬಂಧಿಸಿ ಸಮಸ್ಯೆಗಳಿವೆ ಎಂದು ಕೊರಗ ಜನಾಂಗದ ಪ್ರಮುಖರು ಸಭೆಗೆ ತಿಳಿಸಿದಾಗ, ಈ ಬಗ್ಗೆ ಲಿಖಿತ ಅರ್ಜಿಗಳ ಮೂಲಕ ದೂರು ನೀಡುವಂತೆ ತಹಶೀಲ್ದಾರ್ ತಿಳಿಸಿದ್ದಾರೆ.
ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here