Saturday, October 21, 2023

ಭಜನೆಯಿಂದ ಪ್ರೀತಿ-ವಿಶ್ವಾಸದೊಂದಿಗೆ ಸಮಾಜದ ಸಂಘಟನೆ- ಸುಪ್ರಿಯಾ ಹರ್ಷೇಂದ್ರ ಕುಮಾರ್

Must read

ಉಜಿರೆ: ಭಜನೆಯಿಂದ ಮಾನಸಿಕ ಏಕಾಗ್ರತೆ ಹೆಚ್ಚಾಗುತ್ತದೆ. ಕೂಡು ಕುಟುಂಬದಂತೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಾಮಾಜಿಕ ಸಂಘಟನೆಯಾಗುತ್ತದೆ ಎಂದು ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಹೇಳಿದರು. ಬೆಳ್ತಂಗಡಿಯ ಎಸ್.ಡಿ.ಎಂ.ಕಲಾ ಭವನದಲ್ಲಿ ಬೆಳ್ತಂಗಡಿ ಜೈನ್ ಮಿಲನ್ ಪ್ರಾಯೋಜಕತ್ವದಲ್ಲಿ ನಡೆದ ಮಂಗಳೂರು ವಿಭಾಗದ ಜಿನ ಭಜನಾ ಸ್ಪರ್ಧೆಯಲ್ಲಿ ಅವರು ಸಮಾರೋಪ ಭಾಷಣ ಮಾಡಿ ಬಹುಮಾನ ವಿತರಿಸಿದರು.
ಧರ್ಮಸ್ಥಳದಲ್ಲಿ ಪ್ರತಿ ವರ್ಷ ನಡೆಸುವ ಭಜನಾ ತರಬೇತಿ ಕಮ್ಮಟದಿಂದಾಗಿ ಈಗ ಯುವಜನತೆ ಕೂಡಾ ಆಸಕ್ತಿಯಿಂದ ಭಜನೆ ಮಾಡುವುದು ಆಶಾದಾಯಕವಾಗಿದೆ. ಉತ್ತಮ ಸಾಹಿತ್ಯವನ್ನು ಬಳಸಿ ಹೊಸ ಹಾಡುಗಳನ್ನು ರಚಿಸಿ ಸಾಮೂಹಿಕ ಭಜನೆ ಮಾಡಬೇಕು. ಹಿಮ್ಮೇಳ ಇಲ್ಲದೆಯೂ ಭಜನೆ ಹಾಡಬಹುದು ಎಂದು ಅವರು ಹೇಳಿದರು.
ಜನಪದ ಶೈಲಿಯ ಗೀತೆಗಳನ್ನು ಸಂಗ್ರಹಿಸಿ ತಾವು ಬಾಹುಬಲಿ ಗೀತಾಂಜಲಿಯ ಎರಡು ಆವೃತ್ತಿಗಳನ್ನು ಪ್ರಕಟಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿರುವುದರಿಂದ ಮೂರನೆ ಆವೃತ್ತಿಯನ್ನು ಪ್ರಕಟಿಸಲು ಸಿದ್ಧತೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಸ್ಪರ್ಧೆಗಳಲ್ಲಿ ಸೋಲು-ಗೆಲುವು, ಆಶೆ-ನಿರಾಶೆ ಸಹಜವಾದುದು. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಸೋಲು-ಗೆಲುವಿನ ಬಗ್ಗೆ  ಚಿಂತಿಸದೆ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದರು.
ಧರ್ಮಸ್ಥಳದ ಡಿ. ಹರ್ಷೇಂದ್ರಕುಮಾರ್, ಮಂಗಳೂರಿನ ಪುಷ್ಪರಾಜಜೈನ್, ಬೆಳ್ತಂಗಡಿಯ ಪಾರ್ಶ್ವನಾಥ್‌ ಜೈನ್ ಮತ್ತು ಉಡುಪಿಯ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಶುಭಾಶಂಸನೆ ಮಾಡಿ ಪ್ರತಿ ಮನೆಯಲ್ಲಿಯೂ ರಾಗ-ತಾಳ-ಲಯ ಬದ್ಧವಾಗಿ ಸರಾಗವಾಗಿ ಭಜನೆಯ ನಿನಾದ ಕೇಳಿದರೆ ಭಜನಾ ಸ್ಪರ್ಧೆಯ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಭಜನಾ ಸಂಸ್ಕೃತಿ ಉಳಿಸಿ, ಬೆಳೆಸಿದಾಗ ಧರ್ಮ ಪ್ರಭಾವನೆಯಾಗುತ್ತದೆ ಎಂದರು.
ಮಂಗಳೂರು ಜೈನ್ ಮಿಲನ್ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್‌ ವಂದಿಸಿದರು. ಉಜಿರೆ ಎಸ್.ಡಿ.ಎಂ. ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕ ಪ್ರೊ.ಸುವೀರ್‌ ಜೈನ್‌ ಕಾರ್ಯಕ್ರಮ ನಿರೂಸಿದರು.

More articles

Latest article