ಬಂಟ್ವಾಳ: ಶ್ರೀ ಮಧ್ವಾಚಾರ್ಯರಿಂದ ಆರಂಭಗೊಂಡ ಯಕ್ಷಗಾನ ಅವರು ನಡೆದಾಡಿದ, ವಿಶ್ರಮಿಸಿದ ಪುಣ್ಯ ನೆಲವಾದ ಮಧ್ವದ ಮಧ್ವಕಟ್ಟೆಯಲ್ಲಿ ಉದ್ಘಾಟನೆಗೊಂಡ ಯಕ್ಷಗಾನ ಸಂಘದ ಮೂಲಕ ವಿಜೃಂಭಿಸಲಿ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ನುಡಿದರು.
ಶುಕ್ರವಾರ ಕಾರ್ಯ ನಿಮಿತ್ತ ಆಗಮಿಸಿದ ಅವರು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ದಲ್ಲಿ ನೂತನವಾಗಿ ಆರಂಭಗೊಂಡ ಯಕ್ಷಗಾನ ತರಬೇತಿ ಕೇಂದ್ರ ಯಕ್ಷ ಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶ್ರೀ ಮಧ್ವಾಚಾರ್ಯರಿಂದ ಯಕ್ಷಗಾನ ಕಲೆ ಆರಂಭವಾಯಿತೆನ್ನುವ ವಾಡಿಕೆ ಇದ್ದು, ಅವರು ಧಾರಣೆ ಮಾಡಿದ ಚಿಹ್ನೆಗಳನ್ನು ಯಕ್ಷಗಾನ ಪಾತ್ರಗಳ ಮುಖವರ್ಣಿಕೆಗಳಲ್ಲಿ ಬಳಸುತ್ತಾರೆ. ಅವರ ಶಿಷ್ಯ ನರಹರಿ ತೀರ್ಥರೂ ಈ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದ ಅವರು ಯಕ್ಷಗಾನ ಕಲೆ ಶ್ರೇಷ್ಠ ಕಲೆಯಾಗಿದ್ದು ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭಗೊಂಡ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯವಾಗಿದ್ದು, ಯಕ್ಷ ಕೂಟ ಯಶಸ್ವಿಯಾಗಲಿ ಎಂದು ಹೇಳಿದರು.
ಮಧ್ವ ಯಕ್ಷ ಕೂಟ ಸಂಘದ ಸಂಚಾಲಕ ಭಾಸ್ಕರ ಶೆಟ್ಟಿ ಅವರು ಪ್ರಸ್ತಾವಿಸಿ ಮಾತನಾಡಿ, ಶ್ರೀ ಮಧ್ವಾಚಾರ್ಯರು ವಿಶ್ರಮಿಸಿದ ಮಧ್ವಕಟ್ಟೆಯಿಂದ ಮಧ್ವ ಎಂದೇ ಹೆಸರಾದ ನಮ್ಮೂರಿನಲ್ಲಿ ಶ್ರೀ ಪೇಜಾವರ ಸ್ವಾಮೀಜಿ ಅವರಿಂದ ನಿರ್ಮಿತವಾದ ಮಧ್ವಕಟ್ಟೆಯಲ್ಲಿ ಯಕ್ಷಗಾನ ಆಸಕ್ತರಿಗೆ ಉಚಿತವಾಗಿ ಯಕ್ಷಗಾನ ತರಬೇತಿ ನಡೆಸಲು ಉದ್ದೇಶಿಸಲಾಗಿದೆ ಎಂದರು.
ವಗ್ಗ ಹಾ.ಉ.ಸ.ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ, ಸದಸ್ಯ ಆನಂದ ಮಧ್ವ, ಪ್ರಮುಖರಾದ ಜಯಶಂಕರ ಉಪಾಧ್ಯಾಯ, ರಾಜ್ ಪ್ರಸಾದ್ ಆರಿಗ, ಶ್ರೀಪತಿ ಮುಚ್ಚಿನ್ನಾಯ, ನಾರಾಯಣ ಕೆರ್ಮುನ್ನಾಯ, ತಿಮ್ಮಪ್ಪ ಶೆಟ್ಟಿ ಪಾತಿಲ, ರಾಮಣ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸಂಜೀವ ಕುಲಾಲ್, ಸಂಜೀವ ಶೆಟ್ಟಿ, ಕಿಶೋರ್ ಶೆಟ್ಟಿ ಮೂಡಾಯೂರು, ಭಾಗವತ ಗಣೇಶ್ ಸಾಲ್ಯಾನ್, ನಾರಾಯಣ ಶೆಟ್ಟಿ ಮಧ್ವ, ಗೋಪಾಲಕೃಷ್ಣ ಮಧ್ವ,ಮೋಹನಂದ ಪೂಜಾರಿ, ಸುಜಾತಾ ಭಾಸ್ಕರ ಶೆಟ್ಟಿ, ವನಜಾ ಸಂಜೀವ ಶೆಟ್ಟಿ, ಸಾಕ್ಷಿ ಶೆಟ್ಟಿ ಮತ್ತಿತರರಿದ್ದರು.
ಭಾಸ್ಕರ ಶೆಟ್ಟಿ ಅವರು ಸ್ವಾಗತಿಸಿ,ಯುವರಾಜ ಶೆಟ್ಟಿ ಕಜೆಬಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದುರಾತಿಥ್ಯ ಯಕ್ಷಗಾನ ತಾಳಮದ್ದಳೆ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here