

ಬಂಟ್ವಾಳ: ಕುಕ್ಕೇಡಿಯಲ್ಲಿ ’ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ತಾಲೂಕು ಕಾನೂನು ಸೇವೆಗಳ ನಿಮಿತ್ತ ಬೆಳ್ತಂಗಡಿ ಮತ್ತು ವಕೀಲರ ಸಂಘ, ಬೆಳ್ತಂಗಡಿ ಇವರ ಸಂಯುಕ್ತಾಶ್ರಯದಲ್ಲಿ, ವಾಮದಪದವು ಸ.ಪ್ರ.ದ. ಕಾಲೇಜು ಇವರ ಸಹಯೋಗದೊಂದಿಗೆ ದ.ಕ.ಜಿ.ಪ.ಹಿ.ಪ್ರಾ ಶಾಲೆ ಕುಕ್ಕೇಡಿಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ’ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ವಿಶ್ವಏಡ್ಸ್ ದಿನಾಚರಣೆ’ ಹಾಗೂ ‘ವಿಶ್ವ ವಿಕಲ ಚೇತನರ ದಿನಾಚರಣೆ’ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನಾಗೇಶ ಮೂರ್ತಿ ಬಿ.ಕೆ ಅವರು ಅಧ್ಯಕ್ಷೀಯ ನೆಲೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನವ ಹಕ್ಕುಗಳ ಮಹತ್ವ,ವಿಧಗಳ ಉಗಮದ ಬಗ್ಗೆ ಜಾಗೃತಿ ಮೂಡಿಸಿದರು. ಮುಖ್ಯ ಅತಿಥಿಯಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ, ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಮಾಹಿತಿ ನೀಡಿದರು. ಇನ್ನೂರ್ವ ಮುಖ್ಯ ಅತಿಥಿ ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಯಾದ ಕೆ.ಎಂ. ಆನಂದ, ಇವರು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗದ ಪಾತ್ರದ ಬಗ್ಗೆ ಜಾಗೃತಿ ಮೂಡಿಸಿದರು.ಅತಿಥಿಗಳಾದ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ ಅವರು, ಯುವಜನತೆ ಮೊಬೈಲ್ ಮತ್ತು ಫೇಸ್ಬುಕ್ ಬಳಸುವಾಗ ತುಂಬಾ ಜಾಗರೂಕರಾಗಬೇಕು ಇಲ್ಲದೇ ಹೋದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾಗುವುದರಲ್ಲಿ ಸಂದೇಹವಿಲ್ಲ ಎಂದರು. ಅತಿಥಿಗಳಾದ ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಶ್ರೀಕೃಷ್ಣ ಶೆಣೈ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತ್ರಾ ಅವರು, ಎಚ್.ಐ.ವಿ/ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದರು. ಪಡಂಗಡಿ ವೈದ್ಯಾಧಿಕಾರಿ ಡಾ.ಪ್ರತೀತ್ ಗಳು ಅವರು ವಿಕಲ ಚೇತನರ ಬಗ್ಗೆ ಹಾಗೂ ಎಚ್.ಐ.ವಿ/ಏಡ್ಸ್ ನಿಂದ ಹೇಗೆ ದೂರವಿರಬಹುದು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನವ್ಯಾ ಮತ್ತು ತಂಡ ಪ್ರಾರ್ಥಿಸಿದರು, ಭವ್ಯ ಕಾರ್ಯಕ್ರಮ ನಿರೂಪಿಸಿದರು, ಕಾವ್ಯ ವಂದಿಸಿದರು.








