ವಿಟ್ಲ: ತನ್ನನ್ನು ತಾನೇ ಅರಿತುಕೊಳ್ಳುವವನು ವಿಶ್ವಮಾನವತೆಯ ತತ್ವದಲ್ಲಿ ಜೀವನ ನಡೆಸುತ್ತಾನೆ. ತಾನು ಮಾಡಿದ ಸಾಧನೆ ಸಮಾಜಮುಖಿಯಾಗಿ ಬಳಕೆಯಾದಾಗ ಮಾತ್ರ ಸಾರ್ಥಕತೆಯನ್ನು ಪಡೆಯುತ್ತದೆ. ಹೃದಯಕ್ಕೆ ಹತ್ತಿರವಾದವರು ಆತ್ಮೀಯರು. ದೇಶ ಕಾಲ ಸ್ಥಿತಿಯನ್ನು ಅರಿತಲ್ಲಿ ಉತ್ತಮ ಆಡಳಿತ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಬುಧವಾರ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಸಮಾರೋಪದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸರ್ವ ಜಗತ್ತನ್ನೇ ಜಗದ್ಗುರು ಎಂದು ಸ್ವೀಕರಿಸಿದ ಗುರುದತ್ತಾತ್ರೇಯರು ತ್ರೇತಾಯುಗದ ಆದಿ ಗುರುವಾಗಿದ್ದಾರೆ. ಧರ್ಮದ ನಡೆ ಸರಿಯಾಗಿದ್ದರೆ ಪ್ರತಿಯೊಂದು ಸರಿಯಾಗಿಯೇ ನಡೆಯುತ್ತದೆ. ಹೃದಯ ದೃಢತೆ ಹೊಂದಿದ್ದಾಗ ಯಾವುದೇ ಕಾರ್ಯ ಸಾಧಿಸಬಹುದು ಎಂದರು.

ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಹಿಂದೂ ಸಮಾಜದ ಶಕ್ತಿ ಇರುವುದು ಭಾವನೆಯಲ್ಲಿ. ಜಾತಿ ಜಾತಿ ಎನ್ನುವುದಕ್ಕಿಂತ ನೀತಿಯ ಬದುಕು ಮುಖ್ಯ. ನಡೆಯಬೇಕಾದ ಘಟನೆ ಎಂದಿಗೂ ನಡೆಯಲೇಬೇಕು ಆದರೆ ಕ್ಷೇತ್ರದ ಪಾವಿತ್ರತೆಗೆ ಎಂದು ದಕ್ಕೆಯಾಗದು. ಕೆಡುಕಿಗಿಂತ ಒಳ್ಳೆಯದನ್ನೇ ಕಾಣಬೇಕು, ಒಳ್ಳೆಯದನ್ನೇ ಕೇಳಬೇಕು ಮಾಡಬೇಕು. ತಪ್ಪನ್ನು ತಿದ್ದಿಕೊಳ್ಳುವ ಜಾಗವೇ ಕ್ಷೇತ್ರವಾಗಿದೆ. ನಿಷ್ಕಲ್ಮಶ ಭಕ್ತಿಯಲ್ಲಿ ಬಂದವರನ್ನು ಎತ್ತಿ ಹಿಡಿಯುವುದೇ ಒಡಿಯೂರಿನ ಮಹಿಮೆಯಾಗಿದೆ. ಸ್ವಾಮೀಜಿಗಳು ಕೊಡುವ ಮಂತ್ರಾಕ್ಷತೆಗೆ ಅಷ್ಟೇ ಪಾವಿತ್ರ್ಯತೆ ಇದೆ. ಸಮಾಜ ಕೆಡುಕಿನತ್ತ ಸಾಗುತ್ತಿದ್ದು, ಒಳಿತಿನತ್ತ ಸಾಗುವ ಕಾರ್ಯವಾಗಬೇಕು ಎಂದರು.
ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ ಸಾಮೂಹಿಕವಾಗಿ ಮಾಡುವ ಪ್ರತಿಯೊಂದು ಒಳ್ಳೆಯ ಪ್ರಾರ್ಥನೆ, ಬೇಡಿಕೆಗಳಿಗೆ ದೇವರು ಸತ್ಫಲ ನೀಡುತ್ತಾರೆ. ಗುರು ಪರಂಪರೆ ನಮ್ಮದೇ ದೇಶದ ಶ್ರೇಷ್ಠತೆಯಾಗಿದೆ. ಸತ್ಸಂಗ, ಸದ್ವಿಚಾರದೊಂದಿಗೆ ನಾವು ಬದುಕಬೇಕು ಎಂದರು.

ನವಿ ಮುಂಬೈ, ಘನ್ಸೋಲಿ ಶ್ರೀ ಮೂಕಾಂಬಿಕ ದೇವಾಲಯದ ಪ್ರಧಾನ ಅರ್ಚಕರಾದ ಗುರುಪ್ರಸಾದ್ ಭಟ್ ಅವರು ಮಾತನಾಡಿ ಸಾಥ್ವಿಕ ಭಾವದಿಂದ ಸಂಪಾದಿಸಿದ ಸಂಪತ್ತಿನಿಂದಾಗಿ ನೆಮ್ಮದಿ ಸಾಧ್ಯ. ಔಚಿತ್ಯ ಪೂರ್ಣ ಸಮಾಜದಲ್ಲಿ ನಾವು ಒಗ್ಗಟ್ಟಾಗಬೇಕು. ಶ್ರೀಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ಒಂದಾಗಬೇಕು ಎಂದರು.
ಸಮಾರಂಭದಲ್ಲಿ ಮುಂಬಯಿ ಸೇವಾ ಬಳಗದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಮುಂಬಯಿ ಸೇವಾಬಳಗದ ಮುಖ್ಯಸ್ಥರಾದ ವಾಮಯ್ಯ ಶೆಟ್ಟಿ, ರೇವತಿ ಮಾವಯ್ಯ ಶೆಟ್ಟಿ, ದಾಮೋದರ್ ಶೆಟ್ಟಿ, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಸಂಸ್ಥಾನದ ನೂತನ ವರುಷದ ಕ್ಯಾಲೆಂಡರ್ ಅನ್ನು ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಮಹಿಳಾ ವಿಭಾಗದ ಸದಸ್ಯೆಯರಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಮಾತಾನಂದಮಯಿಯವರಿಗೆ ಫಲ ಪುಷ್ಪ ನೀಡಿದರು.

ರೇಣುಕಾ ಎಸ್ ರೈ ಪ್ರಾರ್ಥಿಸಿದರು. ಶ್ರೀ ಒಡಿಯೂರು ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಹಾಗೂ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.

ಶ್ರೀ ಸಂಸ್ಥಾನದಲ್ಲಿ ಬೆಳಗ್ಗೆ ಶ್ರೀದತ್ತಮಾಲಾಧಾರಿಗಳಿಂದ ನಾಮ ಸಂಕೀರ್ತನಾ ಶೋಭಾಯಾತ್ರ, ವೇದ ಪಾರಾಯಣ, ಶ್ರೀಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀ ದತ್ತ ಮಹಾಯಾಗದ ಪೂರ್ಣಾಹುತಿ, ಕಲ್ಪೋಕ್ತ ಪೂಜೆ, ಮಧುಕರಿ ಸೇವೆ, ಮಂತ್ರಕ್ಷತೆ ನಡೆಯಿತು.

 

 

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಬುಧವಾರ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಸಮಾರೋಪದ ಧಾರ್ಮಿಕ ಸಭೆಯಲ್ಲಿ ಶ್ರೀಗುರುದೇವಾನಂದ ಸ್ವಾಮೀಜಿ 2020 ರ ವರ್ಷದ ದಿನದರ್ಶಿಕೆಯನ್ನು ಅನಾವರಣಗೊಳಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here