

ವಿಟ್ಲ: ದ.ಕ ಜಿಲ್ಲಾ ಪಂಚಾಯಿತಿ ವತಿಯಿಂದ ಸೋಮವಾರ ಮಂಗಳೂರು ಕೈಕಂಬ ಪಿಂಗಾರ ಕಲಾ ಸಂಘದ ಕಲಾವಿದರಿಂದ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತ ಜಾಗೃತಿ ಬೀದಿ ನಾಟಕ ಪುಣಚ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪುಣಚ ಪರಿಯಾಲ್ತಡ್ಕದ ಜಂಕ್ಷನ್ನಲ್ಲಿ ನಡೆಯಿತು.
ಪರಿಸರದ ಮೇಲೆ ಪ್ಲಾಸ್ಟಿಕ್ ದುಷ್ಪರಿಣಾಮ, ಹಸಿ ಕಸ ಮತ್ತು ಒಣಕಸವನ್ನು ಬೇರ್ಪಡಿಸಿ ಸಮರ್ಪಕವಾದ ವಿಲೇವಾರಿಯ ಅವಶ್ಯಕತೆಯ ಬಗ್ಗೆ ಕಲಾ ತಂಡದ ನಾಗರಾಜ್ ಬಜಾಲ್, ಪೃತ್ವಿರಾಜ್ ಕೊಕ್ಕಪುಣಿ, ಜೋಸ್ಲಿನ್ ಪಿಂಟೊ ಬರಿಮಾರ್, ರವಿ ಎಂ. ಪೆರ್ಲಂಪಾಡಿ, ಪ್ರತಾಪ್ ಚೆಂಡ್ತಿಮಾರ್, ಸಿದ್ಧಾರ್ಥ ಮೂಲ್ಕಿ ಅಭಿನಯದ ಮೂಲಕ ಜಾಗೃತಿಯ ಸಂದೇಶವನ್ನು ಸಾರಿದರು.
ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ತಾಸೆ ಬಾರಿಸುವುದರ ಮೂಲಕ ಬೀದಿನಾಟಕಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಪಿಡಿಒ ಲಾವಣ್ಯ,ಲಾ ಮುಖ್ಯ ಶಿಕ್ಷಕ ಹರ್ಷಶಾಸ್ತ್ರಿ, ಅಜ್ಜಿನಡ್ಕ ಶಾಲೆಯ ಮುಖ್ಯ ಶಿಕ್ಷಕ ಬಾಬು ನಾಯ್ಕ, ಹಿರಿಯ ಆರೋಗ್ಯ ಸಹಾಯಕಿ ಶಶಿಕಲಾ, ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯ ಉದಯ ಕುಮಾರ್ ದಂಬೆ, ಗ್ರಾಮ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಕೇಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಟಕ ಪ್ರದರ್ಶನಗೊಂಡಿತು.








