ವಿಟ್ಲ: ಧರ್ಮ ಸಂಸ್ಕೃತಿಯನ್ನು ಬಿಟ್ಟು ಬದುಕು ಇರುವುದಿಲ್ಲ. ಭಾರತ ದೇಶದ ಧರ್ಮವನ್ನು ಬಿಟ್ಟು ನಾವು ಇರಲು ಸಾಧ್ಯವಿಲ್ಲ. ರಾಮ ತತ್ವದೊಳಗೆ ರಾಷ್ಟ್ರ ಸಂರಕ್ಷಣೆ ವಿಚಾರಗಳಿವೆ. ಸಮಾಜಕ್ಕೆ ಧರ್ಮ ಸಂರಕ್ಷಣೆಯ ಭದ್ರತೆಯ ಅವಶ್ಯಕತೆ ಇದೆ. ತಾಯಂದಿರ ಜಾಗೃತಿಯ ಜತೆಗೆ ಸಮಾಜದಲ್ಲಿ ಜ್ಞಾನ ತುಂಬಿಸುವ ಕಾರ್ಯದ ಅಗತ್ಯತೆ ಇದೆ. ಸನಾತನ ಹಿಂದೂ ಧರ್ಮ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ರಾತ್ರಿ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ವಿಹಿಂಪ ಬಜರಂಗದಳದ ಘಟಕದ ಪೆರುವಾಯಿ ಶ್ರೀಕೃಷ್ಣ ಶಾಖೆ ಹಾಗೂ ಪೆರುವಾಯಿ ಹಿಂದೂ ಹೃದಯ ಸಂಗಮ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ಅಗತ್ಯತೆ ಹಿಂದೂ ಸಮಾಜಕ್ಕಿದೆ. ಆಧುನಿಕ ತಂತ್ರಜ್ಞಾನಗಳಿಂದ ಮಕ್ಕಳ ಜ್ಞಾನ ಸಂಪತ್ತು ಸಂಕುಚಿತವಾಗುತ್ತಿದೆ. ಆಚಾರ ವಿಚಾರಗಳು ಬೇರೆ ಇದ್ದರೂ, ಮಾನವ ಧರ್ಮ ಒಂದೇ ಎಂಬುದನ್ನು ತಿಳಿಯುವ ಕಾರ್ಯವಾಗಬೇಕು. ಪ್ರತಿಯೊಬ್ಬರಿಗೂ ಒಳಿತನ್ನು ಬಯಸುವ ಕಾರ್ಯ ಯುವ ಶಕ್ತಿಯಿಂದ ಆಗಬೇಕಾಗಿದೆ. ದೇಶದ ಹಿತ ದೃಷ್ಠಿಯಿಂದ ಕಾನೂನು ವ್ಯವಸ್ಥೆಯನ್ನು ಕಾಲಕಾಲ ಅವಲೋಕಿಸುವ ಅಗತ್ಯವಿದೆ ಎಂದು ತಿಳಿಸಿದರು.
ದಿಕ್ಸೂಚಿ ಭಾಷಣ ಮಾಡಿದ ವಕೀಲರಾದ ಸಹನಾ ಕುಂದರ್ ಸೂಡ ಮಾತನಾಡಿ ಧರ್ಮವನ್ನು ರಾಜಕೀಯವಾಗಿ ಬಳಸುವ ಕಾರ್ಯವಾಗಬಾರದು. ಧರ್ಮವನ್ನು ಇಟ್ಟುಕೊಂಡು ಹಿರೋಯಿಸಮ್ ಸರಿಯಲ್ಲ. ಸಂಘಟನೆಯ ಮೇಲೆ ಸಮಾಜ ಇಟ್ಟಿರುವ ನಂಬಿಕೆಯನ್ನು ಉಳಿಸುವ ಕಾರ್ಯವಾಗಬೇಕು. ಆಧ್ಯಾತ್ಮದ ಕಡೆಗೆ ಒಲವು ಹೊಂದಿರುವ ವ್ಯಕ್ತಿ ತಪ್ಪು ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕ ಸೀತಪ್ಪ ಕೂಡೂರು ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಕುಂಡಡ್ಕ ವಿಷ್ಣು ಮೂರ್ತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಹಿಂದೂ ಹೃದಯ ಸಂಗಮ ಸಮಿತಿ ಗೌರವಾಧ್ಯಕ್ಷ ಆನಂದ ಶೆಟ್ಟಿ ತಾಳಿಪಡ್ಪು, ಶ್ರೀರಾಜರಾಜೇಶ್ವರಿ ಭಜನಾ ಮಂದಿರ ಗೌರವಾಧ್ಯಕ್ಷ ನಾರಾಯಣ ರೈ ಅಡ್ವಾಯಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಪುರಂದರ ನಾಯ್ಕ ಕೊಲ್ಲತ್ತಡ್ಕ, ಭೂಸೇನೆಯ ಚಂದ್ರಶೇಖರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡ ಕರಸೇವಕರಾದ ಅಧೋಕ್ಷಜ ಕುಮಾರ್ ಕನ್ನಡಗುಳಿ, ರಾಧಾಕೃಷ್ಣ ಭಟ್ ಮುಜೂರು, ಗೀತಾನಂದ ಶೆಟ್ಟಿ ಮಾಣಿಲಗುತ್ತು, ರಾಘವ ಆಚಾರ್ಯ ಮಾಣಿಲ, ಆರ್. ಲಕ್ಷ್ಮಣ ಆಚಾರ್ಯ ಪೆರುವಾಯಿ, ಟೀಮ್ ನರೇಂದ್ರದ ಸಂತೋಷ್ ವಾಗ್ಳೆ ಅವರನ್ನು ಗೌರವಿಸಲಾಯಿತು.

ಹಿಂದೂ ಹೃದಯ ಸಂಗಮ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಪೆರುವಾಯಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ನಾಗೇಶ್ ಕೊಲ್ಲತ್ತಡ್ಕ ಪ್ರಸ್ತಾವನೆಗೈದರು. ಅಧ್ಯಕ್ಷ ಯತೀಶ್ ಪೆರುವಾಯಿ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ ಹಾಗೂ ಭವ್ಯ ಭಾರತದ ಸಂಕಲ್ಪಕ್ಕಾಗಿ ಸಾಮೂಹಿಕ ಶ್ರೀರಾಮ ಕಲ್ಪೋಕ್ತ ಪೂಜೆ ನಡೆಯಿತು. ಪುತ್ತೂರು ಜಗದೀಶ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here