ಬಂಟ್ವಾಳ: ಬಂಟ್ವಾಳದ ಬಿಜೆಪಿ ಭೀಷ್ಮ, ಜಿಲ್ಲಾ ಉಪಾಧ್ಯಕ್ಷ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾರ್ಯಕರ್ತರ ಪ್ರೀತಿಯ ಆನಂದಣ್ಣ ಇನ್ನಿಲ್ಲ.


ಅಲ್ಪ ಕಾಲದ ಅಸೌಖ್ಯದ ಕಾರಣ ಅವರು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಬಿಜೆಪಿಯ ಹಿರಿಯ ಕಾರ್ಯಕರ್ತ, ಬಿಜೆಪಿ ಶಕ್ತಿಯಾಗಿದ್ದ ಜಿ‌.ಆನಂದ ಅವರು ಹುಟ್ಟಿನಿಂದ ಹೋರಾಟದ ಮೂಲಕ ಯಶಸ್ವಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ್ದರು.
ಜಿ.ಆನಂದ ಅವರು 1952 ರಲ್ಲಿ ಇವರ ಜನನ.
ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ವೃತ್ತಿಯಲ್ಲಿ ಟೈಲರ್ ಆಗಿದ್ದರು. ನಿರಂತರವಾಗಿ ರಾಷ್ಟ್ರೀಯ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಾ, ದೇಶ ಸೇವೆಯ ಮೇಲೆ ಪ್ರೀತಿ ತೋರುತ್ತಾರೆ. ಅದೇ ಸಂದರ್ಭದಲ್ಲಿ ಜನಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು, 1975 ರ ತುರ್ತುಪರಿಸ್ಥಿತಿ ಹೋರಾಟದಲ್ಲಿ ಭಾಗಿಯಾದರು. ಅಯೋದ್ಯೆ ಯ ಕರ ಸೇವಕನಾಗಿ ಭಾಗಿ.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಗೆ ಇವರು ತಮ್ಮ ಬಜಾಜ್ ಲ್ಯಾಂಬಿ ಸ್ಕೂಟರ್ ನಲ್ಲಿ ಬಂಟ್ವಾಳ  ಕಕ್ಯಪದವುನಿಂದ ಗುರುಪುರದ ನೀರ್ ಮಾರ್ಗದ ವರೆಗೆ ಮನೆಮನೆಗೆ ತೆರಳಿದ್ದರು.
ಎರಡು ಅವಧಿಯಲ್ಲಿ ಬಂಟ್ವಾಳ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿ ಜನ ಸೇವೆ ಮಾಡಿದ ಆನಂದಣ್ಣ, ಎರಡು ಅವಧಿಯಲ್ಲಿ ಬಂಟ್ವಾಳ ಬಿಜೆಪಿ ಪಕ್ಷದ ಅಧ್ಯಕ್ಷ ರಾಗಿ ನೇತೃತ್ವ ವಹಿಸಿ ಪಕ್ಷ ಸಂಘಟನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಮೂರು ಬಾರಿಗೆ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಬ್ಯಾಂಕ್ ಗೆ ಸ್ವಂತ ಜಾಗ ಖರೀದಿಸಿ ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆ ಹಂತದಲ್ಲಿದೆ.
ವಾಜಪೇಯಿ , ಅಡ್ವಾಣಿ, ಅನಂತಕುಮಾರ್, ಯಡಿಯೂರಪ್ಪ ಸಹಿತ ಅನೇಕ ರಾಷ್ಟ್ರೀಯ ನಾಯಕರ ನಿಕಟವರ್ತಿಯಾಗಿದ್ದ ಇವರು, ಪಕ್ಷ ಸಂಘಟನೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದರು, ಪ್ರತಿಯೊಬ್ಬ ಕಾರ್ಯಕರ್ತನಿಗೂ ಗೌರವ ನೀಡುತ್ತಿದ್ದರು, ಯಾರಿಗೂ ಮನನೋಯಿಸದೆ, ವೈರತ್ವ ಕಟ್ಟಿಕೊಳ್ಳದ, ನಿಷ್ಕಳಂಕ ರಾಜಕಾರಣಿ.
2014 ರಲ್ಲಿ ರಾಜೇಶ್ ನಾಯ್ಕ್ ಅವರ ನೇತ್ರತ್ವದಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಪಾದಾಯಾತ್ರೆ ಹಮ್ಮಿಕೊಂಡ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷನಾಗಿದ್ದ ಜಿ.ಆನಂದ ಅವರು ಅವರ ಜೊತೆಯಲ್ಲಿ 59 ಗ್ರಾಮಗಳಲ್ಲಿ 400 ಕ್ಕೂ ಅಧಿಕ ಕಿ.ಮೀ.ಪಾದಯಾತ್ರೆಯ ಮೂಲಕ ಸಾಗಿ ಗ್ರಾಮ ವಾಸ್ತವ್ಯ ಮಾಡಿದವರು ಇವರು.

ಪತ್ನಿ ಶಾರದಾ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಎರಡು ಮಕ್ಕಳಲ್ಲಿ ಒರ್ವ ಮಗ ಇತ್ತೀಚಿಗೆ ಅಪಘಾತದಲ್ಲಿ ಮೃತನಾಗಿದ್ದ.

ಸಂತಾಪ: ಬಂಟ್ವಾಳದಲ್ಲಿ ಪ್ರಥಮವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ವೇಳೆ ಕಾರ್ಯಕರ್ತರ ಪರಿಚಯಿಸಿದ ವ್ಯಕ್ತಿ ಜಿ.ಆನಂದ ಅವರು, ಆ ಬಳಿಕದ ನನ್ನ ರಾಜಕೀಯ ಜೀವನದಲ್ಲಿ ನನಗೆ ತುಂಬಾ ಹತ್ತಿರದಲ್ಲಿ ರಾಜಕೀಯವಾಗಿ ಹಾಗೂ ಪಕ್ಷ ಸಂಘಟನೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನನ್ನ ಜೊತೆಯಲ್ಲಿದ್ದು ಸಹಕಾರ ನೀಡಿದ ವ್ಯಕ್ತಿಯನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಸಂತಾಪ ಸೂಚಿಸಿದ್ದಾರೆ.
ಸಂಸದ ರಾಜ್ಯಧ್ಯಕ್ಷ ನಳಿನ್ ಕುಮಾರ್‍ ಕಟೀಲ್, ಪ್ರಮುಖರಾದ ಡಾ| ಪ್ರಭಾಕರ್ ಭಟ್, ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಗೋವಿಂದ ಪ್ರಭು, ತುಂಗಪ್ಪ ಬಂಗೇರ, ಹರೀಕೃಷ್ಣ ಬಂಟ್ವಾಳ, ಕಮಲಾಕ್ಷಿ ಕೆ. ಪೂಜಾರಿ, ರವೀಂದ್ರ ಕಂಬಳಿ, ಪ್ರಭಾಕರ ಪ್ರಭು, ಉದಯಕುಮಾರ್ ಬಂಟ್ವಾಳ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here