ವಿಟ್ಲ: ವಿದ್ಯಾರ್ಥಿಯೊಳಗಿರುವ ಸುಪ್ತ ಪ್ರತಿಭೆಯನ್ನು ಹೊರ ತೆಗೆಯುವ ಕಾರ್ಯ ಪೋಷಕರಿಂದ ಮತ್ತು ಶಿಕ್ಷಕರಿಂದ ಆಗಬೇಕು. ಮನೆ ಮೊದಲ ಪಾಠಶಾಲೆ ಆಗದೇ ಇರುವುದರಿಂದ ಹಲವಾರು ಅನಾಹುತಗಳು ಆಗುತ್ತಿವೆ. ಬರೀ ಅಂಕಗಳನ್ನು ಪಡೆಯುವ ಪ್ರಯತ್ನ ಮಾಡಿದಾಗ ಅಪ್ಪಅಮ್ಮಂದಿರು ಮಗುವಿಗೆ ಖಳನಾಯಕರಂತೆ ಕಾಣುತ್ತಾರೆ, ಸುಸಂಸ್ಕೃತ ಮಾತೆಯಿಂದ ಸಂಸ್ಕಾರ ಶಿಕ್ಷಣ ದೊರೆತ ವಿದ್ಯಾರ್ಥಿ ಎಂದೂ ಸಹ ಜೀವನದಲ್ಲಿ ದಾರಿ ತಪ್ಪಲು ಸಾಧ್ಯವಿಲ್ಲ. ಮೂಲ ಚಿಂತನೆಯ ಮಾತೃ ಸಂಸ್ಕೃತಿಯ ಪಾಠ ಮಕ್ಕಳಿಗೆ ನೀಡಿದಾಗ ಮಾತ್ರ ಅವರು ಮನೆಯನ್ನು ಬೆಳಗಿಸುವ ಮಕ್ಕಳಾಗಬಹುದು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ತಿಳಿಸಿದರು.

ಅವರು ಪುಣಚ ಶ್ರೀದೇವಿ ವಿದ್ಯಾಕೇಂದ್ರದಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಸಂಬಂಧಗಳ ಒಳ ತತ್ವವನ್ನು ಅರ್ಥೈಸಬೇಕು, ಮಾತೃ ಭಾಷೆಯ ಶಿಕ್ಷಣದ ಮೂಲಕ ಹೃದಯ ಅರಳುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀದೇವಿ ಪ್ರೌಢಶಾಲೆಯ ಪ್ರಥಮ ಬ್ಯಾಚ್‌ನ ಹಿರಿಯ ವಿದ್ಯಾರ್ಥಿನಿ ಲಕ್ಷ್ಮಿ ಡಿ.ಜತ್ತಿ, ವಕೀಲ ಎ.ಮೋಹನ, ಶ್ರೀದೇವಿ ವಿದ್ಯಾಕೇಂದ್ರದ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಪ್ರೌಢಶಾಲಾ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 36 ವರ್ಷಗಳ ದೀರ್ಘಕಾಲ ಸಹ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು ಈ ಬಾರಿಯ ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಗಂಗಮ್ಮ ಅವರನ್ನು ಶಾಲಾಡಳಿತದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಭವಾನಿಶಂಕರ್, ಗಣಪತಿ ಭಟ್ ನೀರ್ಕಜೆ ಮಾತನಾಡಿದರು. ಶಾಲಾ ಸಂಚಾಲಕ ಜಯಶ್ಯಾಂ ನೀರ್ಕಜೆ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಜನಿ ಶಾಲಾ ವರದಿ ವಾಚಿಸಿದರು. ಸಹ ಶಿಕ್ಷಕಿ ಸವಿತಾ ಅಭಿನಂದನಾ ಪತ್ರ ವಾಚಿಸಿದರು.  ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ವಂದಿಸಿದರು. ಶಿಕ್ಷಕಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು.ಪ್ರೌಢಶಾಲಾ ಶಿಕ್ಷಕರಾದ ಶೀಲಾ, ವಾಸಂತಿ, ಪ್ರಸನ್ನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here