


ಬಂಟ್ವಾಳ: ವಿಜ್ಞಾನವನ್ನು ಮಕ್ಕಳು ಸಂತೋಷದಿಂದ ಅರಿತುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಮಕ್ಕಳ ವಿಜ್ಞಾನ ಹಬ್ಬ-2019 ನ್ನು ಆಯೋಜಿಸಿದ್ದು, ಸೋಮವಾರ ಬಂಟ್ವಾಳ ತಾ. ತುಂಬೆ ಕ್ಲಸ್ಟರ್ ವ್ಯಾಪ್ತಿಯ ಬ್ರಹ್ಮರಕೂಟ್ಲು ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ ಜರಗಿತು.
ಬಂಟ್ವಾಳ ತಾಲೂಕಿನ 22 ಕ್ಲಸ್ಟರ್ಗಳ ಪೈಕಿ ಮೂರು ಕ್ಲಸ್ಟರ್ಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು, ಅದರ ಮೊದಲ ಕಾರ್ಯಕ್ರಮ ಬ್ರಹ್ಮರಕೂಟ್ಲು ಶಾಲೆಯಲ್ಲಿ ಜರಗಿತು. ತುಂಬೆ ಕ್ಲಸ್ಟರ್ ವ್ಯಾಪ್ತಿಯ 11 ಶಾಲೆಗಳ ಒಟ್ಟು 152 ವಿದ್ಯಾರ್ಥಿಗಳು ವಿಜ್ಞಾನ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ವಿಶೇಷ ಆಸಕ್ತಿ ತಳೆದಿರುವ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಹಬ್ಬದಲ್ಲಿ ಪಾಲ್ಗೊಂಡಿರುವ ಮಕ್ಕಳ ಸೃಜನಾತ್ಮಕ ಚಟುವಟಿಕೆಗಳನ್ನು ವೀಕ್ಷಿಸಿದರು. ಇದಕ್ಕಾಗಿ ವಿವಿಧ ಪರಿಕರಗಳನ್ನು ಸರಕಾರ ಒದಗಿಸಿದ್ದು, ತರಬೇತಿ ಹೊಂದಿದ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಶಿಕ್ಷಣಾಧಿಕಾರಿ ಜ್ಞಾನೇಶ್ ಇದೊಂದು ವಿನೂತನ ಕಾರ್ಯಕ್ರಮ ಎಂದರು. ಸಮಗ್ರ ಶಿಕ್ಷಣ ಯೋಜನೆಯಡಿ ಮಕ್ಕಳು ವಿಜ್ಞಾನವನ್ನು ತಿಳಿಯುವುದು ಹಾಗೂ ವೈಜ್ಞಾನಿಕ ಮನೋಭಾವ ಬೆಳವಣಿಗೆಗೆ ಪೂರಕವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿನೂತನ ಶೈಲಿಯಲ್ಲಿ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಮಕ್ಕಳು ತಾವು ತಯಾರಿಸಿದ ಟೋಪಿ ತಲೆಗೆ ಹಾಕಿಕೊಂಡು, ಗಿರಿಗಿಟಲೆಯನ್ನು ಹಾರಿ ಬಿಡುವ ಮೂಲಕ ಮಕ್ಕಳೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಇಲ್ಲಿ ನಾಲ್ಕು ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ವಿಭಾಗ ಮಾಡಿದ್ದು,
1. ಚುಕ್ಕಿ ಚಂದ್ರಮ.
2.ಊರ ತಿಳಿಯೋಣ.
3. ಹಾಡು ಹಾಡು.
4. ಹಾಡು ಮಾಡು
ಈ ನಾಲ್ಕು ವಿಭಾಗದಲ್ಲಿ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ವಿಜ್ಞಾನ ಹಬ್ಬವನ್ನು ಆಚರಿಸುತ್ತಾರೆ.







