

ವಿಟ್ಲ: ನಿಜ ಅರ್ಥದ ಬದುಕು ಭೋಗದಲ್ಲಿ ಪ್ರಾಪ್ತಿಯಾಗುವುದಿಲ್ಲ, ತ್ಯಾಗದಿಂದ ಕೂಡಿದ್ದರೆ ಮಾತ್ರ ಬದುಕು ಸಾರ್ಥಕತೆ ಪಡೆಯುತ್ತದೆ. ಭಗವಂತನ ಚಿಂತನೆಗೆ ಅಂತ್ಯ ಎಂಬುದಿಲ್ಲ. ಜಗದ್ಗುರು ದತ್ತಾತ್ರೇಯರು ಜಗತ್ತಿಗೆ ಸಮರಸ ತತ್ವ ಬೋಧಿಸಿದರು. ಜಗತ್ತಿನ ಪ್ರತಿಯೊಂದು ವಿಷಯಗಳಲ್ಲಿಯೂ ಗುರುವನ್ನು ನೋಡಿದ ಗುರುತತ್ವ ಪ್ರತಿಯೊಬ್ಬರ ಬದುಕಿನಲ್ಲಿಯೂ ಅನುಷ್ಠಾನವಾಗಬೇಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಗುರುವಾರ ಶ್ರೀಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಅಂಗವಾಗಿ ಶ್ರೀಗುರುಭಕ್ತರಿಗೆ ದತ್ತಮಾಲಾಧಾರಣೆ ನೆರವೇರಿಸಿ, ಶ್ರೀ ಗುರುಚರಿತಾಮೃತ ಪ್ರವಚನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಮುದ್ರದ ವಾತಾವರಣ ವ್ಯತ್ಯಯವಾದಾಗ ಸುನಾಮಿಗಳು ಏಳುವಂತೆ ನಮ್ಮ ಶರೀರದಲ್ಲಿ ಕಾಮಾಕ್ರೋಧಾಧಿಗಳು ಅಧಿಕವಾದಾಗಲೂ ತ್ರಿಕರಣಾದಿಯಾಗಿ ಏರುಪೇರಾಗಬಹುದು. ಬದುಕಿನ ಅರ್ಥ ಅರಿವಾದಾಗ ನಾವು ಉತ್ತಮರಾಗುತ್ತೇವೆ ಎಂದು ತಿಳಿಸಿದರು.
ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಚಂದ್ರಪ್ರಭಾ ಹೆಗ್ಡೆ ಶಿರ್ವ ಅವರಿಂದ ಶ್ರೀಗುರುಚರಿತಾಮೃತ ಪ್ರವಚನ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಸಂಸ್ಥಾನದ ಸಾಧ್ವಿ ಶ್ರೀಮಾತಾನಂದಮಯಿ, ಒಡಿಯೂರು ಶ್ರೀಯವರ ಮಾತೃಶ್ರೀ ಅಂತಕ್ಕೆ, ಮುಂಬೈ ಉದ್ಯಮಿ ವಾಮಯ್ಯ ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಂಘದ ಅಧ್ಯಕ್ಷ ಸುರೇಶ್ ರೈ, ಅಶೋಕ್ ಕುಮಾರ್ ಬಿಜೈ, ಶ್ರೀಗುರುದೇವ ವಿದ್ಯಾ ಸಂಸ್ಥೆಗಳ ಸಂಚಾಲಕ ಗಣಪತಿ ಭಟ್ ಸೇರಾಜೆ, ರಘುನಾಥ ಶೆಟ್ಟಿ ಪಟ್ಲಗುತ್ತು ಉಪಸ್ಥಿತರಿದ್ದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀ ದತ್ತ ಮಹಾಯಾಗ, ವೇದ ಪಾರಾಯಣದೊಂದಿಗೆ ನಾನಾ ವೈದಿಕ ಕಾರ್ಯಕ್ರಮ ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಮಹಾಪೂಜೆ, ಮಹಾಸಂತರ್ಪಣೆ. ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ, ರಾತ್ರಿ ರಂಗಪೂಜೆ, ಬೆಳ್ಳಿ ರಥೋತ್ಸವ ನಡೆದವು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಗುರುವಾರ ಶ್ರೀಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀ ಶ್ರೀಗುರುಬಂಧುಗಳಿಗೆ ದತ್ತಮಾಲಾಧಾರಣೆ ನಡೆಯಿತು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಗುರುವಾರ ಶ್ರೀಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಶ್ರೀಗುರುಚರಿತಾಮೃತ ಪ್ರವಚನವನ್ನು ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಚಂದ್ರಪ್ರಭಾ ಹೆಗ್ಡೆ ಶಿರ್ವ ನಡೆಸಿಕೊಟ್ಟರು.








