


ಬಂಟ್ವಾಳ: ಆರ್ಥಿಕತೆಯಲ್ಲಿ ಸಮೃದ್ಧರಾಗುವುದು ಮಾತ್ರವಲ್ಲ. ವಿದ್ಯೆಯಲ್ಲೂ ಸಮೃದ್ಧರಾಗಬೇಕು. ಇತರರೊಂದಿಗೆ ಸ್ಪರ್ಧೆಯು ಉತ್ತಮವಲ್ಲ, ನಮ್ಮೊಂದಿಗೆ ನಾವು ಸ್ಪರ್ಧಿಸಬೇಕು ಎಂದು ಗಣಪತಿ ಅನುದಾನಿತ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಹೇಳಿದರು.
ಅವರು ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸಭೆಯಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ, ಉತ್ತಮ ಚಟುವಟಿಕೆಗಳಲ್ಲಿ ಭಾಗವಹಿಸಲು ಹೆತ್ತವರು ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಕೇವಲ ಅಂಕ ತೆಗೆಯುವಂತೆ ಮಾತ್ರ ಒತ್ತಡ ಹಾಕಬಾರದು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳನ್ನು ಮತ್ತು ಇತರ ನಿಯಮಗಳನ್ನು ಪಾಲಿಸುವಲ್ಲಿ ಹೆತ್ತವರು ಗಮನ ಹರಿಸಬೇಕು. ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಅವಲೋಕನ ಮಾಡಬೇಕು ಎಂದರು.
ಸಭೆಯಲ್ಲಿ 2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2019-20ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೇದಾನಂದಕಾರಂತ, ಕೋಶಾಧಿಕಾರಿ ಶಾಂತಿಗಿರಿಧರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು. ಉಪನ್ಯಾಸಕರಾದ ಕಾವ್ಯಶ್ರೀ ಎಚ್.ಎನ್, ವಿನಯಾ ಬಿ., ಮಹಿಮಾ ಸಿ. ಪ್ರಾರ್ಥಿಸಿದರು. ಇತಿಹಾಸ ಉಪನ್ಯಾಸಕಿ ಭಾರತಿ ವಸಂತಕುಮಾರ್ ಸ್ವಾಗತಿಸಿದರು. ಗಣಿತ ಶಾಸ್ತ್ರಉಪನ್ಯಾಸಕಿ ಕವಿತಾಯಾದವ್ ಅತಿಥಿ ಪರಿಚಯ ಮಾಡಿದರು. ಭೌತಶಾಸ್ತ್ರ ಉಪನ್ಯಾಸಕಿ ತೇಜಸ್ವಿ ಪ್ರತಿಭಾ ಪುರಸ್ಕೃತರ ಪಟ್ಟಿಯನ್ನು ವಾಚಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ವಂದಿಸಿದರು. ಕನ್ನಡ ಉಪನ್ಯಾಸಕಿ ಅಪರ್ಣಾ ಕಾರ್ಯಕ್ರಮ ನಿರೂಪಿಸಿದರು.







