ಬಂಟ್ವಾಳ: ಮೇರೆಮಜಲು ಗ್ರಾ.ಪಂನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಹಾಗೂ ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಶಾಸಕ ಪೊಲೀಸರು ಇಂತಹ ಪ್ರಕರಣಗಳಲ್ಲಿ ಸರೆಂಡರ್ ಪಾಲಿಟಿಕ್ಸ್ ಮಾಡಬಾರದು ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

ಸರ್ಕ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಲ್ಲೆ ಮಾಡಿದವರು ಹಾಗೂ ಅದರ ಹಿಂದಿರುವವರ ಬಗ್ಗೆ ಕೂಲಂಕುಷ ತನಿಖೆ ಮಾಡಿ ಇಂತಹ ಪ್ರಕರಣ ಮರುಕಳಿಸದಂತೆ ನಿಗಾ ವಹಿಸುವ ಜವಾಬ್ಧಾರಿ ಪೊಲೀಸ್ ಇಲಾಖೆಯದ್ದು ಎಂದರು.

ಇರಾ ಪ್ರಕರಣಕ್ಕೆ ಸಂಬಂಧಿಸಿ ಮೂರು ದಿನಗಳಾದರೂ ಹಲ್ಲೆ ಆರೋಪಿ ಪತ್ತೆಯಾಗಿಲ್ಲ. ಮೇರಮಜಲು ಪ್ರಕರಣದಲ್ಲಿ ಒಂದು ಗಂಟೆಯಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ. ಅವರನ್ನು ಕಸ್ಟಡಿಗೆ ಪಡೆದು ಬಾಯಿ ಬಿಡಿಸಬೇಕು. ಬೆಳ್ಳಂಬೆಳಗ್ಗೆ ಮನೆಯೊಂದಕ್ಕೆ ನುಗ್ಗಿ ಹಲ್ಲೆ ನಡೆಸಲು ಕಾರಣವೇನು ಎಂಬುದು ತಿಳಿಯಬೇಕು. ಆರೋಪಿಗಳು ಗಾಂಜಾ, ಟಾಬ್ಲೆಟ್‌ನಂತಹ ಮಾದಕ ವ್ಯಸನಿ ಗಳೆಂದು ಹೇಳಲಾಗಿದೆ. ಹಾಗಿದ್ದಲ್ಲಿ ಅವರಿಗೆ ಅಂತಹ ಮಾದಕ ವಸ್ತುಗಳನ್ನು ನೀಡಿದವರು ಯಾರು ಎಂಬುದರ ತನಿಖೆ ಯಾಗಬೇಕು ಎಂದು ಅವರು ಹೇಳಿದರು.

ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ನಿಮ್ಮ ಸುರಕ್ಷತೆಗೆ ಕ್ರಮವಾಗಿದೆಯೇ ಎಂಬ ಪ್ರಶ್ನೆಗೆ, ನನಗೆ ಗನ್‌ಮ್ಯಾನ್ ಕೊಡುವಂತೆ ಗೃಹ ಸಚಿವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇಲಾಖೆ ಜತೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದೇನೆ. ಇಲ್ಲಿ ನನ್ನ ಒಬ್ಬನ ಪ್ರಾಣ ಮುಖ್ಯ ವಲ್ಲ. ಎಲ್ಲರ ಜೀವಕ್ಕೂ ಬೆಲೆ ಇದೆ. ನನಗೆ ನೇರವಾಗಿ ಯಾವುದೇ ರೀತಿಯ ಬೆದರಿಕೆಗಳು ಬಂದಿಲ್ಲ ಎಂದು ಅವರು ಹೇಳಿದರು.

ತಲಪಾಡಿ ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ಮುಂದುವರಿಯಲಿ

ತಲಪಾಡಿ ಟೋಲ್‌ಗೇಟ್‌ನಲ್ಲಿ ಸ್ಥಳೀಯ 5. ಕಿ.ಮೀ. ವ್ಯಾಪ್ತಿಯವರಿಗೆ ಹಿಂದಿನಂತೆ ರಿಯಾಯಿತಿ ಮುಂದುವರಿಸಬೇಕು ಎಂದು ಹೇಳಿದ ಮಾಜಿ ಸಚಿವ ಯು.ಟಿ.ಖಾದರ್, ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವುದರಲ್ಲಿ ಲಾಬಿ ಇರುವ ಅನುಮಾನವಿದೆ ಎಂದರು.

ನಮ್ಮ ನಿರ್ದಿಷ್ಟ ಮೊತ್ತದ ಹಣವನ್ನು ಯಾರಲ್ಲಿಯೋ ಠೇವಣಿ ಇರಿಸುವ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಗೆ ಯಾಕೆ ಇಷ್ಟೊಂದು ಆಸಕ್ತಿ ಎಂದು ತಿಳಿಯುತ್ತಿಲ್ಲ. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ದಂಡ ಕಟ್ಟಿ ಸಾಗಬೇಕೆಂಬುದು ಯಾವ ನ್ಯಾಯ. ಬೇಕಿದ್ದವರು ಮಾಡಿಕೊಳ್ಳಲಿ. ಉಳಿದವರು ಟೋಲ್‌ಗೇಟ್‌ನಲ್ಲಿ ಸಂಚರಿಸುವ ವೇಳೆ ಹಣ ಪಾತಿಸುವ ಆಯ್ಕೆ ಮುಂದುವರಿಯಲಿ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿ ಪ್ರಯಾಣವೇ ದುಬಾರಿಯಾಗಿದೆ. ಅದರ ಮೇಲೆ ನಮ್ಮ ಹಣವನ್ನು ಠೇವಣಿ ಇರಿಸುವ ಈ ಫಾಸ್ಟ್‌ಟ್ಯಾಗ್ ಕ್ರಮದಲ್ಲಿ ಅರ್ಥವಿಲ್ಲ ಎಂದವರು ಹೇಳಿದರು.

ಲೈಟಿಂಗ್ ಫಿಶಿಂಗ್ ನಡೆಸುವವರು ಹಾಗೂ ನಡೆಸದವರ ನಡುವೆ ಸದ್ಯ ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಚರ್ಚಿಸಿ ಸೂಕ್ತ ನಿರ್ದೇಶನ ನೀಡಿ ಕ್ರಮ ವಹಿಸಬೇಕಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಎನ್‌ಆರ್‌ಸಿ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಖಾದರ್, ಅದು ಇನ್ನೂ ಕಾನೂನು ಆಗಿಲ್ಲ. ದೇಶದ ಸುರಕ್ಷತೆಗೆ ಸಂಬಂಧಿಸಿ ಉತ್ತಮವಾಗಿದ್ದರೆ, ಯಾರಿಗೂ ಉದ್ದೇಶಪೂರ್ವಕವಾಗಿ ತೊಂದರೆ ನೀಡುವ ಉದ್ದೇಶದಿಂದ ಕೂಡಿಲ್ಲದಿದ್ದರೆ ಯಾರೂ ಬೇಡ ಎನ್ನಲಾರರು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ಮುಹಮ್ಮದ್ ಮೋನು, ಈಶ್ವರ ಉಳ್ಳಾಲ್, ಮೆಲ್ವಿನ್ ಡಿಸೋಜಾ, ಸಂತೋಷ್ ಕುಮಾರ್, ಸೀತಾರಾಮ ಶೆಟ್ಟಿ, ಸಿದ್ದೀಕ್, ವಿಲ್ಮಾ, ಪದ್ಮಾವತಿ ಪೂಜಾರಿ ಉಪಸ್ಥಿತರಿದ್ದರು.

ಕಾಂಗ್ರೆಸ್ ಕಾರ್ಯರ್ಕತರ ತಾಳ್ಮೆ ಪರೀಕ್ಷೆ ಬೇಡ

ಗ್ರಾ.ಪಂ. ಪ್ರತಿನಿಧಿಗಳ ಮೇಲಿನ ಹಲ್ಲೆ ಪ್ರಕರಣವನ್ನು ಉಲ್ಲೇಖಿಸುವ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರ ತಾಳ್ಮೆ ಪರೀಕ್ಷೆ ಬೇಡ ಎಂದು ಹೇಳಿದ ಯು.ಟಿ. ಖಾದರ್‌ರವರು, ಹಲ್ಲೆ ನಡೆಸಿದವರಿಗೆ ಪ್ರತಿಕ್ರಿಯೆ ನೀಡಬಹುದು. ಆದರೆ ಕಾಂಗ್ರೆಸ್ ಕಾನೂನು, ನಿಯಮ ಹಾಗೂ ಸಹೋದರತೆಗೆ ಬೆಲೆ ನೀಡುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಗೃಹ ಸಚಿವರು, ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ತಾಳ್ಮೆ ಪರೀಕ್ಷೆ ಬೇಡ ಎಂಬುದಾಗಿ ಯಾರನ್ನಾದರೂ ಬೆಟ್ಟು ಮಾಡಿ ಹೇಳಿರುವುದೇ ? ಎಂಬ ಪ್ರಶ್ನೆಗೆ, ಹಲ್ಲೆ ಮಾಡುವವರಿಗೆ ಹೇಳಿದ್ದು. ಹಲ್ಲೆ ನಡೆಸುವವರು ಯಾವುದೇ ಪಕ್ಷದವರಾಗಿದ್ದರೂ ಪಕ್ಷದ ಅನುಮತಿ ಪಡೆದು ಹಲ್ಲೆ ಮಾಡುವುದಿಲ್ಲ ಎಂದು ಯು.ಟಿ. ಖಾದರ್ ಪ್ರತಿಕ್ರಿಯಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here