

ವಿಟ್ಲ : ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ವಿಟ್ಲ ಪ್ರಧಾನ ಕಚೇರಿ ಮತ್ತು ತಾಲೂಕು ಶಾಖೆ ಬಂಟ್ವಾಳ, ಪುತ್ತೂರು, ಕಡಬ, ಸುಳ್ಯ ಮತ್ತು ಮಂಗಳೂರು ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಪ್ರಥಮ ಪ್ರತಿಭಟನೆಯನ್ನು ಡಿ.30ರಂದು ಬೆಳಗ್ಗೆ ಗಂಟೆ 10.30 ಕ್ಕೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಆರಂಭಿಸಲಾಗುವುದು ಎಂದು ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದರು.
ಅವರು ವಿಟ್ಲ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.13 ಬೆಳಗ್ಗೆ ಗಂಟೆ 10.30 ಕ್ಕೆ ಪುತ್ತೂರು ತಾಲೂಕು ಕಚೇರಿ, ಜ.27ಕ್ಕೆ ಸುಳ್ಯ, ಫೆ.10ಕ್ಕೆ ಕಡಬ, ಫೆ.24ಕ್ಕೆ ಬೆಳ್ತಂಗಡಿ, ಮಾ.16ಕ್ಕೆ ಮಂಗಳೂರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಡಿ.ಸಿ ಮನ್ನಾ ಜಮೀನು ವಂಚಿತ ಪರಿಶಿಷ್ಟ ಜಾತಿ/ ಪಂಗಡದವರು, ಮೂಲ ಸೌಕರ್ಯ ವಂಚಿತ ಎಲ್ಲಾ ನಾಗರಿಕರು, ಸರಕಾರ ಮತ್ತು ಸರಕಾರದ ಸ್ವಾಮ್ಯಕ್ಕೆ ಒಳಪಡುವ ಇಲಾಖೆ ಅಥವಾ ಸಂಸ್ಥೆಗಳಲ್ಲಿ ದುಡಿಯುವ ಹೊರಗುತ್ತಿಗೆ ನೌಕರರು, ನಿರುದ್ಯೋಗಿ ಯುವಕ ಯುವತಿಯರು, ಭೂ ವಂಚಿತ ನಿವೃತ್ತ ಸೈನಿಕರು, ಕನಿಷ್ಠ ವೇತನದಿಂದ ವಂಚಿತರಾಗಿರುವವರು, ಜಿಲ್ಲೆ ಮತ್ತು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೋಂಗಾರ್ಡ್ (ಗೃಹರಕ್ಷಕ ದಳ) ಕಂಪನಿ, ಕಾರ್ಖಾನೆ ಮತ್ತು ಆಸ್ಪತ್ರೆಗಳಲ್ಲಿ ನೌಕರರನ್ನು ಹೆಚ್ಚು ದುಡಿಸಿಕೊಂಡು ಅವರಿಗೆ ಕನಿಷ್ಟ ವೇತನ ಇಎಸ್ಐ ಮತ್ತು ಪಿ.ಎಫ್ ನೀಡದೆ ವಂಚಿತರಾಗಿರುವ ನೌಕರರು, ಜಿಲ್ಲೆಯಲ್ಲಿ ನಮೂನೆ -೫೦ ಮತ್ತು ೫೩ ರಲ್ಲಿ ಅರ್ಜಿ ಸಲ್ಲಿಸಿದ ನಾಗರಿಕರು ಮತ್ತು ನಿವೇಶನ ರಹಿತರು, ನಿವೇಶನ ವಂಚಿತ ಪತ್ರಕರ್ತರು, ಮಾಧ್ಯಮ ಮಿತ್ರರು, ಸ್ಮಶಾನ ವಂಚಿತರು, ಅನಾದಿಕಾಲದಿಂದಲೂ ಪ.ಜಾತಿ/ ಪಂಗಡದವರು ಆರಾಧಿಸಿಕೊಂಡು ಬಂದಿರುವ ದೇವಸ್ಥಾನ, ದೈವಸ್ಥಾನಕ್ಕೆ ರೆಕಾರ್ಡ್ ಆಗದವರು, ಸ್ವ ಉದ್ಯೋಗಕ್ಕೆ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿ ಸೌಲಭ್ಯ ಸಿಗದೆ ವಂಚಿತರಾಗಿರುವವರು ಈ ಮುತ್ತಿಗೆಯಲ್ಲಿ ಭಾಗವಹಿಸಿ ಪರಿಣಾಮಕಾರಿಯಾದ ಹೋರಾಟಕ್ಕೆ ಕೈಜೋಡಿಸಬಹುದು. ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ತಾಲೂಕು ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು., ಸಂಚಾಲಕ ಗೋಪಾಲ ನೇರಳಕಟ್ಟೆ, ಸಂಕಪ್ಪ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.







