ಗರುಡಗಿರಿಯ ಕರಡಿಗುಡ್ಡ
ದಡಿಯ ಕಣಿವೆ ಸಾಲಲಿ
ಮನದಣಿಯೆ ಸುರಿವ ಜಲಧಾರೆಯೆ
ಮೌನ ಮುಸುಕನು ಸರಿಸಿ
ಭೋರ್ಗರೆದು ಬಿಡು ಒಮ್ಮೆ
ಹೀಗೇಕೆ ಅಳುವೆ ಎಡೆಬಿಡದೆಯೆ

ಕಲ್ಲು ಮುಳ್ಳಿನ ಹಾದಿ
ಏರು ಇಳುವಿನ ತೆರದಿ
ಎಲ್ಲೆಂದರಲ್ಲಿ ಇರಿದಿರಿದು ಹಿರಿದರೂ
ಛಲವ ಬಿಡದೆ ಮುನ್ನುಗ್ಗಿ
ಸಾಗರದ ಮುತ್ತು ಪಡೆವ
“ಬಿಡದ ನಿನ್ನಾಸೆ”ಯಾರು ಜರಿದರೂ

ಹಗಲು ಸೂರ್ಯನ ಪ್ರವರ
ಇರುಳು ನಿಲ್ಲದ ಸಮರ
ಎಲ್ಲವನು ಸರಿಸಿದೆ ಒದ್ದೊದ್ದೆ
ಬೀಸುಗಾಳಿಯ ಮುದವ
ಬಿಸಿಲ ಬೇಗೆಯ ಕದವ ಮುರಿದು
ಮುನ್ನುಗ್ಗಿ ಮಡುವಲಿ ಬಿದ್ದೆದ್ದೆ

ಗೊತ್ತು ನನಗೆ ನಿನ್ನೊಡಲ
ಬೇಗುದಿಯ ತಳಮಳವು
ಅಳೆದಳೆದು ಉಳಿದುಳಿದು ಬಳಿದುಬಿಡು
ನುಂಗಿದ ನಂಜನೆಲ್ಲ ಕಕ್ಕಿ
ತಾಯ್ಮಡಿಲ ಒಡನೆ ಸೇರಿ
ಮುಗಿಲಗಲ ನೋವನೆಲ್ಲ ಕಳೆದುಬಿಡು

 

#ನೀ.ಶ್ರೀಶೈಲ ಹುಲ್ಲೂರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here