ವಿಟ್ಲ: ಮಾತೆ ಮತ್ತು ಮಾತೃಭೂಮಿಗೆ ಅತ್ಯುನ್ನತ ಸ್ಥಾನ ಕೊಡುವ ಭಾರತೀಯ ಸಂಸ್ಕೃತಿ ಮತ್ತು ಧರ್ಮಾಧಾರಿತ ಜೀವನ ಪದ್ಧತಿಯಿಂದಾಗಿ ಭಾರತ ಜಗತ್ತಿನಲ್ಲಿಯೇ ವಿಶೇಷತೆಯನ್ನು ಪಡೆದುಕೊಂಡಿದೆ. ಸದೃಢ ಸಂಘಟನೆಯ ಕೊರತೆಯಿಂದಾಗಿ ಸಹಸ್ರಾರು ವರ್ಷಗಳ ಕಾಲ ವಿದೇಶಿ ದಾಳಿಕೋರರ ಆಕ್ರಮಣಕ್ಕೆ ಸುಲಭದಲ್ಲಿ ತುತ್ತಾಯಿತು ಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ಅವರು ಕೆಲಿಂಜ ಉಳ್ಳಾಲ್ತಿ ದೇವಿಯ ಕ್ಷೇತ್ರದ ವಠಾರದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಶ್ರೀನಿಕೇತನ ಮಂದಿರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

        

ಶ್ರೀರಾಮ ಹುಟ್ಟಿ ಬೆಳೆದ ಅತ್ಯಂತ ಪವಿತ್ರ ಸ್ಥಳವೆಂದು ನಂಬಿಕೊಂಡು ಬಂದ ಕಾರಣ ಅಯೋಧ್ಯೆಯೆಂಬ ಒಂದು ತುಂಡು ಸ್ಥಳವನ್ನು ಮಂದಿರ ನಿರ್ಮಾಣಕ್ಕಾಗಿ ಪಡೆಯಲು ಹಲವು ದಶಕಗಳ ಧರ್ಮ ಹೋರಾಟ ನಡೆಸಬೇಕಾಯಿತು. ಹಿಂದೂ ಧರ್ಮ, ಮಾತೆಯರ ರಕ್ಷಣೆಗಾಗಿ ಇಂತಹ ಹಿಂದೂ ಮಂದಿರಗಳು ಅಲ್ಲಲ್ಲಿ ನಿರ್ಮಾಣವಾಗಬೇಕಾಗಿದೆ. ಗೋಮಾತೆ, ನೀರು, ಸ್ವಚ್ಛ ಪರಿಸರ ರಕ್ಷಣೆಯೂ ನಮ್ಮ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲರೂ ಏಕ ಮನಸ್ಸಿನಿಂದ ಒಟ್ಟಾಗಬೇಕೆಂದರು.
ಸಮಾರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಅನಂತಕೋಡಿ, ವಿಟ್ಲ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೊಪ್ಪಳ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಪೆಲ್ತಡ್ಕ, ಕಡಂಬು ಧರ್ಮ ಚಾವಡಿಯ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂದೇಶ ಕುಮಾರ್ ಶೆಟ್ಟಿ ಅರೆಬೆಟ್ಟು, ಉದಯ ಕುಮಾರ್ ದಂಬೆ ಉಪಸ್ಥಿತರಿದ್ದರು.
ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ವಿಷ್ಣು ಭಟ್ ಅಡ್ಯೇಯಿ ಸ್ವಾಗತಿಸಿದರು. ಪದ್ಮನಾಭ ಗೌಡ ಅಡ್ಯೇಯಿ ಪ್ರಸ್ತಾವಿಸಿದರು. ಅರುಣೋದಯ ವಂದಿಸಿದರು. ಪ್ರಶಾಂತ್ ಪಾಲ್ತಿಮಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here