

ವಿಟ್ಲ: ಶಿಕ್ಷಕರು ಸಮಾಜದ ಹಿತದೃಷ್ಟಿಯಿಂದ ಮಾಡಿದ ತ್ಯಾಗದ ಫಲವಾಗಿ ಪ್ರಜ್ಞಾವಂತರು ಬೆಳೆಯುವಂತಾಗಿದೆ. ಸಮಾಜದ ಸರ್ವ ವಿಕಾಸದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಬದುಕನ್ನು ರೂಪಿಸುವ ಶಿಕ್ಷಣ ಸಮಾಜಕ್ಕೆ ಅಗತ್ಯವಿದೆ. ಆತ್ಮಜ್ಯೋತಿಯನ್ನು ಶಿಕ್ಷಣದ ಮೂಲಕವಾಗಿ ಬೆಳಗಬಹುದು. ನಾವೆಲ್ಲರೂ ನಿತ್ಯ ವಿದ್ಯಾರ್ಥಿಯಾಗಿದ್ದಾಗ ಮಾತ್ರ ಆದರ್ಶ ಶಿಕ್ಷಕನಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಕನ್ಯಾನ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಆದರ್ಶ ಅಧ್ಯಾಪಕ, ಶೈಕ್ಷಣಿಕ ಹರಿಕಾರ ದಿ. ಪಂಜಜೆ ಶಂಕರ ಭಟ್ಟರ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಣಿಯೂರು ಶ್ರೀಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜಕ್ಕಾಗಿ ಮಾಡುವ ಉತ್ತಮ ಕಾರ್ಯಗಳಿಂದ ವ್ಯಕ್ತಿಯ ವ್ಯಕ್ತಿತ್ವ ಶಾಶ್ವತವಾಗಿ ಉಳಿಯುತ್ತದೆ. ಪಂಜಜೆ ಶಂಕರ ಭಟ್ಟರ ಆದರ್ಶ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ ಎಂದು ತಿಳಿಸಿದರು.
ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ಮಾಡಿ ಗುರುಪರಂಪರೆ ಎಂಬುದು ತೂಕಕ್ಕೆ ನಿಲುಕದ್ದಾಗಿದೆ. ವ್ಯಕ್ತಿ ವಿದ್ಯೆಯನ್ನು ಬಳಸಿಕೊಳ್ಳುವ ರೀತಿಯಿಂದ ತನ್ನ ಸಾಧನೆಯನ್ನು ಪ್ರಪಂಚದಲ್ಲಿ ಉಳಿಸಿಕೊಳ್ಳಬಹುದು. ಜ್ಞಾನ ಜ್ಯೋತಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಬೆಳಗಬೇಕೆಂಬ ಶಂಕರ ಭಟ್ಟರ ಚಿಂತನೆ ಪ್ರಸ್ತುತದಲ್ಲಿ ಸಾರ್ಥಕ ಸ್ಥಾನಕ್ಕೆ ತಲುಪಿದೆ ಎಂದರು.
ಶಿಕ್ಷಣ ತಜ್ಞ, ಚಿಂತಕ ಡಾ. ಎಂ. ಪ್ರಭಾಕರ ಜೋಷಿ ಅವರು ಗುರುಗೌರವ ಗ್ರಂಥ ಬಿಡುಗಡೆ ಮಾಡಿದರು. ಗುರುಗೌರವ ಗ್ರಂಥ ಸಂಪಾದಕ ನಿವೃತ್ತ ಪ್ರಿನ್ಸಿಪಾಲ್ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್ ವಹಿಸಿದ್ದರು.
ಎಸ್.ಎನ್ ಪಂಜಜೆ, ರವೀಂದ್ರನಾಥ ಪಿ. ಎಸ್. ಕೆ. ಪಿ ರಘುರಾಮ ಶೆಟ್ಟಿ, ಪಿ. ಲಿಂಗಪ್ಪ ಗೌಡ, ಸೇರಾಜೆ ಗಣಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ. ಬಾಲಕೃಷ್ಣ ರಾವ್ ಸ್ವಾಗತಿಸಿದರು. ನಳಿನಿ ಜಿ. ಭಟ್ ಸೇರಾಜೆ ವಂದಿಸಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.
ಶಿಷ್ಯರಿಂದ ನುಡಿನಮನ:(ಬಾಕ್ಸಲ್ಲಿ)
ಪಂಜಜೆ ಶಂಕರ ಭಟ್ಟರ ಶಿಷ್ಯರುಗಳಾದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ, ಪ್ರಿನ್ಸಿಪಾಲ್ ಕ್ಸೇವಿಯರ್ ಡಿಸೋಜ, ಶಿರಂಕಲ್ಲು ಗಣಪತಿ ಭಟ್, ವಕೀಲ ಹಸೈನಾರ್ ಮಾರಾಠಿಮೂಲೆ, ಪ್ರಿನ್ಸಿಪಾಲ್ ಡಾ. ಶಿವಶಂಕರ ಭಟ್, ನಾರಾಯಣ ಗಟ್ಟಿ ಕುಂಬಳೆ, ವಿಶ್ರಾಂತ ಶಿಕ್ಷಣಾಧಿಕಾರಿ ಕೆ. ಶಂಕರ ನಾರಾಯಣ ಭಟ್, ವಕೀಲ ಕೆ. ಪಿ. ಈಶ್ವರ ಭಟ್, ಬ್ಯಾಂಕ್ ನಿವೃತ್ತ ಮ್ಯಾನೇಜರ್ ಪಟ್ಲ ಲಕ್ಷ್ಮಣ ಶೆಟ್ಟಿ, ಪ್ರೊ. ಶಂಕರನಾರಾಯಣ ಭಟ್ ಸುರತ್ಕಲ್, ಮಹಮ್ಮದ್ ಫಝಲ್ ಪನೆಯಡ್ಕ ಭಾಗವಹಿಸಿ ನುಡಿನಮನ ಸಲ್ಲಿಸಿದರು. ಶ್ರೀನಿವಾಸ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ವೈವಿಧ್ಯ:
ಇದೇ ಸಂದರ್ಭದಲ್ಲಿ ಗಣಪತಿ ಭಟ್ ಪದ್ಯಾಣ ಅವರಿಂದ ಕಾವ್ಯವಾಚನ, ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ. ಶಂಕರ್, ಜ್ಯೂ. ಶಂಕರ್ ಉಡುಪಿ ಅವರಿಂದ ಗಿಲಿಗಿಲಿ ಮ್ಯಾಜಿಕ್ ನಡೆಯಿತು.
ಶಂಕರ ಮಾಸ್ಟ್ರು ನಮ್ಮ ದೃಷ್ಠಿಯಲ್ಲಿ:
ಎನ್. ಕೆ ಈಶ್ವರ ಭಟ್, ಪೂವಪ್ಪ ಭಂಡಾರಿ ಬಂಡಿತಡ್ಕ, ಸುಬ್ರಹ್ಮಣ್ಯ ಭಾರತಿ ಕೊಣಲೆ, ಜಿ. ನಿವೃತ್ತ ಉಪನ್ಯಾಸಕ ಕೆ. ಭಟ್ ಸೇರಾಜೆ, ವಕೀಲ ಮೋನಪ್ಪ ಭಂಡಾರಿ ಭಾಗವಹಿಸಿ ತಮ್ಮ ದೃಷ್ಠಿಯಲ್ಲಿ ಪಂಜಜೆ ಶಂಕರ ಭಟ್ಟ ಎಂಬ ವಿಷಯದಲ್ಲಿ ಮಾತನಾಡಿದರು.







