


ವಿಟ್ಲ : ಆದರ್ಶ ಅಧ್ಯಾಪಕ, ಶೈಕ್ಷಣಿಕ ಹರಿಕಾರ ದಿ. ಪಂಜಜೆ ಶಂಕರ ಭಟ್ಟರ ಜನ್ಮ ಶತಮಾನೋತ್ಸವ ಸಮಾರಂಭ ನ.೨೪ರಂದು ಕನ್ಯಾನ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಜನ್ಮಶತಮಾನೋತ್ಸವ ಸಮಿತಿ ಖಜಾಂಚಿ ಎಸ್.ಎನ್.ಪಂಜಜೆ ತಿಳಿಸಿದರು.
ಅವರು ಗುರುವಾರ ವಿಟ್ಲ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 9.30ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ, ಬಾಳೆಕೋಡಿ ಕನ್ಯಾನದ ಶ್ರೀ ಡಾ. ಶಶಿಕಾಂತಮಣಿ ಸ್ವಾಮೀಜಿ, ಕನ್ಯಾನ ಆರ್ಜೆಎಂ ಮುದರ್ರಿಸ್ ಅಲ್ಹಾಜಿ ಕೆ.ಎಂ.ಇಬ್ರಾಹಿಂ ಫೈಝಿ ಭಾಗವಹಿಸಲಿದ್ದಾರೆ.
ಗುರುಗೌರವ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ, ಚಿಂತಕ ಡಾ. ಎಂ. ಪ್ರಭಾಕರ ಜೋಷಿ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್, ಡಾ. ತಾಳ್ತಜೆ ವಸಂತ ಕುಮಾರ್ ಮಾತನಾಡಲಿದ್ದಾರೆ.
ಬೆಳಗ್ಗೆ 11ರಿಂದ ಶಿಷ್ಯರಿಂದ ನುಡಿ ನಮನ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ, ಪ್ರಾಂಶುಪಾಲ ಕ್ಸೇವಿಯರ್ ಡಿಸೋಜ, ಪ್ರೊ.ಶಿರಂಕಲ್ಲು ಗಣಪತಿ ಭಟ್, ಹಸೈನಾರ್ ಮಾರಾಠಿಮೂಲೆ, ಪ್ರಾಂಶುಪಾಲ ಶಿವಶಂಕರ ಭಟ್, ನಾರಾಯಣ ಗಟ್ಟಿ ಕುಂಬಳೆ, ವಿಶ್ರಾಂತ ಶಿಕ್ಷಣಾಧಿಕಾರಿ ಕೆ. ಶಂಕರನಾರಾಯಣ ಭಟ್, ನ್ಯಾಯವಾದಿ ಕೆ.ಪಿ.ಈಶ್ವರ ಭಟ್, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಪಟ್ಲ ಲಕ್ಷ್ಮಣ ಶೆಟ್ಟಿ, ಪ್ರೊ.ಶಂಕರನಾರಾಯಣ ಭಟ್ ಸುರತ್ಕಲ್, ಮಹಮ್ಮದ್ ಫಜಲ್ ಕನ್ಯಾನ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ 1.30ರ ತನಕ ಕಾವ್ಯವಾಚನ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ‘ಶಂಕರ ಮಾಸ್ಟ್ರು ನಮ್ಮ ಹಿತದೃಷ್ಟಿಯಲ್ಲಿ’ ಕಾರ್ಯಕ್ರಮದಲ್ಲಿ ಎನ್.ಕೆ. ಈಶ್ವರ ಭಟ್, ಪ್ರೊ. ಜಿ.ಆರ್. ರೈ ಮಂಗಳೂರು, ಕೊಣಲೆ ತಿರುಮಲೇಶ್ವರ ಭಟ್, ಪೂವಪ್ಪ ಭಂಡಾರಿ ಬಂಡಿತಡ್ಕ, ಈಶ್ವರ ಭಟ್ ಪಿ., ಸುಬ್ರಹ್ಮಣ್ಯ ಭಾರತಿ ಕೊಣಲೆ, ಸರಸ್ವತಿ ಶಂಕರ್ ಬೆಂಗಳೂರು, ನಿವೃತ್ತ ಉಪನ್ಯಾಸಕ ಜಿ.ಕೆ.ಭಟ್ ಸೇರಾಜೆ, ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ, ಭಾಸ್ಕರ ರೈ ಕುಕ್ಕುವಳ್ಳಿ ಭಾಗವಹಿಸಲಿದ್ದಾರೆ. ಸಂಜೆ 3.30ರಿಂದ ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ. ಶಂಕರ್ ಮತ್ತು ಜೂ. ಶಂಕರ್ ಅವರಿಂದ ಗಿಲಿಗಿಲಿ ಮ್ಯಾಜಿಕ್ ನಡೆಯಲಿದೆ.
ಸಂಜೆ 5ಕ್ಕೆ ಸಮಾರೋಪದಲ್ಲಿ ಕಾಸರಗೋಡು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಭಾಗವಹಿಸಲಿದ್ದಾರೆ. ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಶಪುರಂ ಜಿ.ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾನಪದ ತಜ್ಞ ಪ್ರೊ. ಎ.ವಿ.ನಾವಡ, ವಿಜಯಡ್ಕ ಸಂತ ಲಾರೆನ್ಸ್ ಚರ್ಚ್ನ ಫಾ.ಎಡ್ವಿನ್ ಸಂತೋಷ್ ಮೋನಿಸ್ ಉಪಸ್ಥಿತರಿರುವರು. ಅನಂತರ ಪಂಜಜೆಯವರ ಸಹೋದ್ಯೋಗಿಗಳ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಕನ್ನಡ ಪಂಡಿತರಾಗಿರುವ ದಿ. ಪಂಜಜೆ ಶಂಕರ ಭಟ್ ಅವರು ಕನ್ಯಾನ ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಗ್ರಾಮದ ಮನೆಮನೆಗಳಿಗೆ ತೆರಳಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ 1985ರಲ್ಲಿ ಕನ್ಯಾನದಲ್ಲಿ ಸರಕಾರಿ ಪ್ರೌಢಶಾಲೆ ಆರಂಭಿಸಿದರು. ಬಳಿಕ ಜೂನಿಯರ್ ಕಾಲೇಜು ಆರಂಭಿಸಿ ಶೈಕ್ಷಣಿಕ ಹರಿಕಾರರೆನಿಸಿದರು. 1975ರಲ್ಲಿ ಶಿಕ್ಷಕ ಸೇವೆಯಿಂದ ನಿವೃತ್ತರಾದ ಶಂಕರ ಭಟ್ಟರು 1988ರಲ್ಲಿ ನಿಧನ ಹೊಂದಿದರು. ಪ್ರಸ್ತುತ ಶಾಲೆಯ ಹಳೆ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಬಂಧುವರ್ಗದವರು ದಿ. ಶಂಕರ ಭಟ್ಟರ ಜನ್ಮಶತಾಬ್ದಿ ಆಚರಿಸಲು ಹೊರಟಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ಬಾಲಕೃಷ್ಣ ರಾವ್, ಪ್ರಧಾನ ಕಾರ್ಯದರ್ಶಿ ಕಣಿಯೂರು ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.







