

ಬಂಟ್ವಾಳ:
ಸಾಮರಸ್ಯದ ಮತ್ತು ಒಗ್ಗಟ್ಟಿನ ಜೀವನ ನಡೆಸಿದರೆ ಯಶಸ್ಸನ್ನು ಕಾಣಬಹುದು ಎಂಬುದಕ್ಕೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ ಕುಟುಂಬಗಳೇ ಸಾಕ್ಷಿ. ಸೂರಿಕುಮೇರು ಚರ್ಚ್ನ ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯೂ ಅನುಕರಣೀಯವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.
ಬಂಟ್ವಾಳ ತಾಲೂಕಿನ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬ ಸಮಾರೋಪ ಸಮಾರಂಭದಲ್ಲಿ ಬುಧವಾರ
ಪ್ರವೇಶದ್ವಾರ ಉದ್ಘಾಟಿಸಿ, ವಿಶೇಷ ಬಲಿಪೂಜೆಯನ್ನು ನಡೆಸಿ, ಆಶೀರ್ವಚನ ನೀಡಿದ ಅವರು, ಚಿಕ್ಕ ಗ್ರಾಮದಲ್ಲಿಯೂ ಮಾದರಿ ಕಾರ್ಯವನ್ನು ಅನುಷ್ಠಾನ ಮಾಡಿದ, ಧರ್ಮಗುರುಗಳು, ಪಾಲನಾ ಸಮಿತಿ, ಹಾಗೂ ಎಲ್ಲ ಕುಟುಂಬಗಳೂ ಅಭಿನಂದನೀಯ ಎಂದರು.
ಅಂತರಂಗ ಶುದ್ಧಿಯಾಗಿದ್ದಾಗ ಮಾತ್ರ ನಾವು ದೇವರಿಗೆ ಪ್ರಿಯವಾಗಿರುತ್ತೇವೆ, ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯೇ ಜೀವನದ ಧ್ಯೇಯವಾಗಲಿ ,ಉಸಿರಾಗಲಿ ಎಂದ ಅವರು ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯ ಮೂಲಕ ಬಂಧುತ್ವಕ್ಕೆ, ಸಾಮರಸ್ಯಕ್ಕೆ ಹೊಸ ಪ್ರೇರಣೆ ಒದಗಿಸಿದ್ದಾರೆ ಎಂದು ಚರ್ಚ್ ವ್ಯಾಪ್ತಿಯ ಕುಟುಂಬಗಳನ್ನು ಶ್ಲಾಘಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಲಾರೆನ್ಸ್ ಮುಕ್ಕುಝಿ ಯವರು ಮಾತನಾಡಿ,
ಚರ್ಚ್ನ ವ್ಯಾಪ್ತಿಯ ಮಕ್ಕಳೆಲ್ಲರೂ ಬಾಲಯೇಸುವಿನಂತಿರಬೇಕು, ತಾಯಂದಿರು ಕನ್ಯಾಮಾತೆಯಂತಿರಬೇಕು ಎಂದರು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಶುಭಾ ಹಾರೈಸಿದರು. ಮೊಗರ್ನಾಡ್ ಚರ್ಚ್ನ ಧರ್ಮಗುರು ಡಾ.ಮಾರ್ಕ್ ಕಾಸ್ಟೆಲಿನೋ ಮಾತನಾಡಿ, ಸ್ನೇಹ ಹಾಗೂ ವಿಶ್ವಾಸಮಯ ವಾತಾವರಣ ಬದುಕಿಗೆ ಹೊಸ ಚೈತನ್ಯ ನೀಡುತ್ತದೆ, ಸೂರಿಕುಮೇರು ಚರ್ಚ್ ನಲ್ಲಿ ಈ ಚೈತನ್ಯ ಪಸರಿಸುತ್ತಿದೆ ಎಂದರು.
ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾತನಾಡಿ, ಚರ್ಚ್ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವುದಾಗಿ ಘೋಷಿಸಿ, ಸಾಮರಸ್ಯದ ಬದುಕಿಗೆ ಚರ್ಚ್ ಮಾದರಿಯಾಗಿದ್ದು, ಕೋಮು ಸಾಮರಸ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡಿದೆ. 125 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇದು ಪುಣ್ಯಭೂಮಿಯಾಗಿದೆ ಎಂದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಮಾತನಾಡಿ, ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರು ಚರ್ಚ್ನ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಕಳೆದ 2018ರ ಸೆಪ್ಟೆಂಬರ್ 4 ರಿಂದ ಆರಂಭಗೊಂಡು ತಿಂಗಳಿಗೊಂದರಂತೆ 14 ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ದೇವಾಲಯ ವ್ಯಾಪ್ತಿಯ 152 ಕುಟುಂಬಗಳು ಒಟ್ಟು ಸೇರಿ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಚರ್ಚ್ ನ ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಂದ ತೊಡಗಿ, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ನಡೆಸಲಾಗಿದ್ದು ಎಲ್ಲಾ ಕಾರ್ಯಗಳೂ ಚರ್ಚ್ ವ್ಯಾಪ್ತಿಯ ಕುಟುಂಬಗಳ ತನು ಮನ ಧನದ ಸಹಕಾರದಿಂದಲೇ ನಡೆದಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯ ಪ್ರಭಾಕರ ಪ್ರಭು, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಗೆ ತೊಡಗಿಸಿಕೊಂಡ ಕುಟುಂಬಗಳನ್ನು ಗುರುತಿಸಿ ಗೌರವಿಸಲಾಯಿತು. ಅತಿಥಿಗಳ ಸ್ವಾಗತಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಸ್ವಾಗತಿಸಿದರು.
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ವಂದಿಸಿದರು.
ಸ್ಟ್ಯಾನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮೆರೆದ ಸೌಹಾರ್ದ
ಇಗರ್ಜಿಯ ಶತಮಾನೋತ್ತರ ಬೆಳ್ಳಿಹಬ್ಬ ಕೇವಲ ಅದರ ವ್ಯಾಪ್ತಿಗೊಳಪಟ್ಟ 152 ಕುಟುಂಬಗಳ ಸಂಭ್ರಮವಷ್ಟೇ ಆಗಿರಲಿಲ್ಲ. ಹಿಂದು, ಮುಸ್ಲಿಂ ಬಾಂಧವರೂ ಕಾರ್ಯಕ್ರಮಕ್ಕೆ ನೆರವಾಗುವ ಮೂಲಕ ಸೌಹಾರ್ದ ಮೆರೆದರು. ಪುರುಷೋತ್ತಮ ಪಾಟೀಲ, ಓಂಪ್ರಕಾಶ್ ಜುವೆಲ್ಲರಿ, ಎಸ್.ಎ.ಖಾಸಿಂ, ಚಿದಾನಂದ, ಸತೀಶ್ ಮತ್ತು ಗಣೇಶ್ ಜುವೆಲ್ಲರಿಯವರು ಕಾರ್ಯಕ್ರಮಕ್ಕೆ ಅಗತ್ಯವಿದ್ದ ಕೊಡುಗೆ ನೀಡಿ ಸೌಹಾರ್ದತೆ ಮೆರೆದರು.
ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ
ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ನಡೆಸಲಾಗಿದ್ದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು. ನೂತನವಾಗಿ ನಿರ್ಮಿಸಲಾದ ಆಕರ್ಷಕ ಪ್ರವೇಶದ್ವಾರ , ಇಸ್ರೇಲ್ ಮಾದರಿಯ ಪುಟ್ ಪಾತ್ ರಸ್ತೆ ,
ಕಲ್ವಾರಿ ಪರ್ವತದ 14 ಶಿಲುಬೆ ಯಾತ್ರೆ, ಕಾಂಕ್ರೀಟು ರಸ್ತೆ ನಿರ್ಮಾಣ, ಸೋಲಾರ್ ಲೈಟ್, ಧ್ವನಿವರ್ಧಕ ವ್ಯವಸ್ಥೆ, ಸಿ.ಸಿ.ಕ್ಯಾಮೆರಾ ಅಳವಡಿಕೆ,ರಸ್ತೆಯ ಇಕ್ಕೆಲಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಉದ್ಘಾಟನೆಯನ್ನೂ ಅತಿಥಿಗಣ್ಯರು ನೆರವೇರಿಸಿದರು.








