ಬಾನಂಗಳದ ಎದೆಯಲೆಲ್ಲ
ಹೊನ್ನ ಹಸಿರನು ಬಿತ್ತಿ
ಇಳೆಯ ನಲ್ಮೊಗಕೆ
ಹೊಳೆವ ತಿಲಕವನಿಟ್ಟು
ಜೀವ ಸಂಕುಲಕೆ ನವ
ಚೈತನ್ಯದ ತಾರುಣ್ಯವ ತುಂಬಿ
ಬಂದನಿದೋ ಸೃಷ್ಟಿಯ
ಸೊಗಸುಗಾರ ನಸುನಗುತಲಿ

ಇರುಳ ತಮವನು ನೆಕ್ಕಿ
ನುಂಗಿ ನೀರ್ಗುಡಿದು
ಬಾಯಿ ಚಪ್ಪರಿಸುತ
ನೀಲ ಉಪ್ಪರಿಗೆಯ ಮೇಲೇರಿ
ಖಗಮೃಗಗಳ ಕೊರಳಿಗೆ
ಧ್ವನಿಯೋನ್ಮಾದವ ಸುರಿದು
ಬಾನಾಡಿಗಳೊಡನಾಡಿ
ನಲಿವ ತೆಳುಗನಸಲಿ

ಅಂಬರದಿ ಅಂಡಲೆವ
ಹಿಂಡು ಮೋಡವ ಸರಿಸಿ
ಸುಳಿವ ಗಾಳಿಯ ಬಿಲ್ಲಿಗೆ
ಬಿಸಿಲ ಹೆದೆಯೇರಿಸಿ
ಗಿರಿ ಶೃಂಗ ಕಣಿವೆ ಕಾನನದ
ತುಂಬೆಲ್ಲ ಝೇಂಕರಿಸಿ
ಮಂಪರಿನ ಮೌನ ಮೊಗ್ಗೆ
ಯನೊಡೆದು ನಡೆವ
ತಾ ಸರಸದಿ

ಮುನಿದರೂ ಮುನ್ನಡೆವ
ದಣಿದರೂ ಬುಸುಗುಡುವ
ಯಾರೇನೆಂದರೂ ಕಿವಿಗೊಡದೆ
ತನ್ನಾರ್ಭಟದಲೇ ಮೈಯುಬ್ಬಿ
ಇರುಳರಳುವ ಮುನ್ನವೇ
ಮೌನ ಮುನಿಯಾಗಿ
ಅಂಬರದಿ ಇಳಿದಂಬುಧಿಯ
ಕೆಂಪೊಡಲ ಸೇರುವ
ಮಿಗೆ ಹರುಷದಿ

 

#ನೀ.ಶ್ರೀಶೈಲ ಹುಲ್ಲೂರು

ಚಿತ್ರ. ನಮ್ಮ ಮನೆಯ ಮುಂದಣ ರವಿ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here