

ವಿಟ್ಲ: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕನ್ನಡ ರಾಜ್ಯೋತ್ಸವದಂದು ತೀರಾ ಕಷ್ಟದಲ್ಲಿರುವ ಕನ್ನಡ ಶಾಲೆಯೊಂದಕ್ಕೆ ದಿನಕ್ಕೆ ಒಂದು, ಮೂರು, ಐದು ಅಥವಾ 10 ರೂಪಾಯಿಯಂತೆ ಸದಸ್ಯರಿಂದ ದೇಣಿಗೆ ಸಂಗ್ರಹಿಸಿತ್ತು. ಅದರಲ್ಲಿ ವಾರ್ಷಿಕ ಮುಂಗಡವಾಗಿ ಶೇಖರಣೆಯಾದ 43,000 ರೂಪಾಯಿಯನ್ನು ವಿಟ್ಲ ಸಮೀಪದ ಕಾನತ್ತಡ್ಕ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಮಕ್ಕಳ ದಿನಾಚರಣೆಯಂದು ಹಸ್ತಾಂತರಿಸಿತು.
ಕಾನತ್ತಡ್ಕ ಶಾಲೆಯು ಒಂದು ಸಮಯದಲ್ಲಿ ವೈಭವಯುತವಾಗಿ ನೂರಾರು ಮಕ್ಕಳೊಂದಿಗೆ ನಳನಳಿಸುತ್ತಿತ್ತು. ಹಲವಾರು ವರ್ಷಗಳ ಗತ ಇತಿಹಾಸ ಹೊಂದಿರುವ ಈ ಕನ್ನಡ ಶಾಲೆ ಇತ್ತೀಚಿನ ದಿನಗಳ ಆಂಗ್ಲ ವ್ಯಾಮೋಹ ಹಾಗೂ ಸರಕಾರಿ ಸವಲತ್ತು ಸಿಗುವ ಶಾಲೆಯ ಪರಿಣಾಮದಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ೩೬ಕ್ಕೆ ತಲಪಿತ್ತು. ಮೂವರು ಗೌರವ ಶಿಕ್ಷಕರಿಗೆ ಸಂಬಳ ಕೊಡಲು ಪರದಾಡುವ ಪರಿಸ್ಥಿತಿಯನ್ನರಿತ ಎಂ.ಫ್ರೆಂಡ್ಸ್ ಟ್ರಸ್ಟ್ ಕಾನತ್ತಡ್ಕ ಕನ್ನಡ ಶಾಲೆಗೆ ಸದಸ್ಯರಿಂದ ರಾಜ್ಯೋತ್ಸವಕ್ಕೆ ಹಣ ಸಂಗ್ರಹಿಸಿ ಗುರುವಾರ ಅದನ್ನು ಶಾಲೆಗೆ ತೆರಳಿ ಹಸ್ತಾಂತರಿಸಿತು.
ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಅಬೂಬಕರ್ ನೋಟರಿ ವಿಟ್ಲ, ಸದಸ್ಯರಾದ ಹನೀಫ್ ಕುದ್ದುಪದವು, ಟಿ.ಕೆ.ಮಹಮ್ಮದ್ ಟೋಪ್ಕೋ, ರಫೀಕ್ ನೆಟ್ಲ ಕಲ್ಲಡ್ಕ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಭಟ್ ಕಾನ ಸ್ವಾಗತಿಸಿದರು. ಶಿಕ್ಷಕ ಐತಪ್ಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕರಾದ ಉಷಾ, ದಿವ್ಯಾ, ಮುನ್ಶೀರಾ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ದಿನಾಚರಣೆಯ ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನವನ್ನು ಇದೇ ಸಂದರ್ಭ ವಿತರಿಸಲಾಯಿತು.








