ಮೌನೇಶ ವಿಶ್ವಕರ್ಮ

ಬಂಟ್ವಾಳ: ನವೆಂಬರ್ 14 ಮಕ್ಕಳ ದಿನಾಚರಣೆ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆಯ ಅಂಗವಾಗಿ ರಾಜ್ಯವ್ಯಾಪಿ ಸಂಭ್ರಮದ ಕಾರ್ಯಕ್ರಮಗಳು ಆಗಬೇಕಾಗಿರುವುದು ಅನಿವಾರ್ಯ. ಆದರೆ ಮಕ್ಕಳ ಪರವಾಗಿ ಕೆಲಸ ಮಾಡಬೇಕಾಗಿರುವ ಎರಡು ಸರ್ಕಾರಿ ನಿಯಂತ್ರಣದ ಸಂಸ್ಥೆಗಳು ಯಜಮಾನನಿಲ್ಲದ ಮನೆಗಳಂತಿದ್ದು, ಮಕ್ಕಳನ್ನು ಹಲವು ಸಂಭ್ರಮದಿಂದ ವಂಚಿತರನ್ನಾಗುವಂತೆ ಮಾಡಿದೆ.
ರಾಜ್ಯದಲ್ಲಿ ಮಕ್ಕಳಿಗಾಗಿಯೇ ಅಸ್ತಿತ್ವದಲ್ಲಿರುವ “ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ರಾಜ್ಯ ಬಾಲಭವನ ಸೊಸೈಟಿ”ಗಳಿಗೆ ಇನ್ನೂ ಅಧ್ಯಕ್ಷರನ್ನೇ ನೇಮಿಸದೆ ವಿಳಂಬ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಮಕ್ಕಳ ನಿರ್ಲಕ್ಷ್ಯಕ್ಕೆ ಜ್ವಲಂತ ಉದಾಹರಣೆ.

ಕರ್ನಾಟಕ ಬಾಲವಿಕಾಸ ಅಕಾಡೆಮಿ:
ಧಾರವಾಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಬಾಲವಿಕಾಸ ಅಕಾಡೆಮಿ 2009ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಶಂಕರಹಲಗತ್ತಿ ಯವರು ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಬಳಿಕ 2010 ರಿಂದ 2013 ರವರೆಗೆ ಮಹೇಶ್ ಟೆಂಗಿನಕಾಯಿ, 2014 ರಿಂದ 2016 ರವರೆಗೆ ದಾಕ್ಷಾಯಿಣಿ ಬಸವರಾಜ್, 2016 ರಿಂದ 2018 ರವರೆಗೆ ವೇದವ್ಯಾಸ ಕೌಲಗಿ ಅಕಾಡೆಮಿಯ ಅಧ್ಯಕ್ಷರಾಗಿ ಜವಬ್ದಾರಿ ನಿರ್ವಹಿಸಿದವರು. 2018 ಜುಲಾಯಿ ಬಳಿಕ ಒಂದು ವರ್ಷಗಳ ಕಾಲ ಅಧ್ಯಕ್ಷರೇ ಇಲ್ಲದೆ ವರ್ಷ ಪೂರೈಸಿದ ಅಕಾಡೆಮಿಗೆ 2019 ಜುಲೈ 22ರಂದು ಕಿಕ್ಕೇರಿ ಕೃಷ್ಣಮೂರ್ತಿಯವರು ಅಧಿಕಾರ ವಹಿಸಿಕೊಂಡಿದ್ದರು. ಆದರೆ ಹನ್ನೊಂದನೇ ದಿನದಲ್ಲಿ ಅಂದರೆ ಆಗಸ್ಟ್ 3 ರಂದು ಇವರು ಅಧ್ಯಕ್ಷ ಪದವಿಯಿಂದ ಕೆಳಗಿಳಿಯಬೇಕಾಯಿತು. ಈ ಹಿನ್ನೆಲೆಯಲ್ಲಿ ಅಕಾಡೆಮಿಯಿಂದ ಹಮ್ಮಿಕೊಳ್ಳಬೇಕಾದ ಅನೇಕ ರೀತಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯದೆ ರಾಜ್ಯವ್ಯಾಪಿ ಮಕ್ಕಳು ಅನೇಕ ಸಂಭ್ರಮದಿಂದ ವಂಚಿತರಾಗುವಂತಾ ಸ್ಥಿತಿ ಎದುರಾಗಿದೆ. ಬಾಲವಿಕಾಸ ಅಕಾಡೆಮಿಯ ವಾರ್ಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಎರಡು ವರ್ಷದಿಂದ ಬಾಕಿ ಇದ್ದು, ಮುಂದಿನ ಮಾರ್ಚ್ ಒಳಗೆ ಹೊಸ ಅಧ್ಯಕ್ಷರ ನೇಮಕವಾದಲ್ಲಿ ಎರಡೂ ಕಾರ್ಯಕ್ರಮಗಳನ್ನು ಮಾಡಲು ಅನುಕೂಲಕರವಾದೀತು ಎಂಬುದು ಇಲಾಖೆಯ ಅಧಿಕಾರಿಗಳ ಲೆಕ್ಕಾಚಾರ.
ಜಿಲ್ಲಾ ಸಮಿತಿಗಳೂ ಇಲ್ಲ: ಬಾಲವಿಕಾಸ ಅಕಾಡೆಮಿಯ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಅನುಷ್ಠಾನ ಸಮಿತಿಯನ್ನು ರಚಿಸಿದ್ದು, ಮಕ್ಕಳ ಪರವಾಗಿ ಕೆಲಸಮಾಡುವ ವ್ಯಕ್ತಿಗಳನ್ನೂ ಸದಸ್ಯರನ್ನಾಗಿ ನೇಮಿಸಿತ್ತು. ಆದರೆ ನೇಮಕಗೊಳ್ಳುವ ಅಧ್ಯಕ್ಷರ ಕ್ರಿಯಾಶೀಲತೆಯನ್ನು ಆಧರಿಸಿ ಮೊಲ ಎರಡು ಅವಧಿಗಳಲ್ಲಿ ಕ್ರಿಯಾಶೀಲವಾಗಿದ್ದ ಜಿಲ್ಲಾ ಸಮಿತಿಗಳು ಪ್ರಸ್ತುತ ನಿಷ್ಕ್ರೀಯವಾಗಿದೆ. ಇದರಿಂದಾಗಿ ಜಿಲ್ಲೆ ಹಾಗೂ ತಾಲೂಕುಮಟ್ಟಗಳಲ್ಲಿ ನಡೆಯಬೇಕಾದ ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯದೆ ಮಕ್ಕಳಿಗೆ ಅನ್ಯಾಯವಾಗುತ್ತಿದೆ.

ಬಾಲಭವನ ಸೊಸೈಟಿಗೂ ಅಧ್ಯಕ್ಷರಿಲ್ಲ..!
ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ರಾಜ್ಯ ಬಾಲಭವನ ಸೊಸೈಟಿಗೂ ಅಧ್ಯಕ್ಷರಿಲ್ಲ ಎನ್ನುವ ಸ್ಥಿತಿ ಎದುರಾಗಿದೆ. ಈ ಹಿಂದೆ 2010 ರಲ್ಲಿ ಬಂಟ್ವಾಳದವರೇ ಆದ ಸುಲೋಚನಾ ಭಟ್ ಅಧ್ಯಕ್ಷರಾಗಿದ್ದು, ಗಮನೀಯ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಸಿದ್ದರಾಮಯ್ಯ ಸರ್ಕಾರದ ಸಂದರ್ಭ ಚಲನಚಿತ್ರ ನಟಿ ಭಾವನಾ ಅಧ್ಯಕ್ಷರಾಗಿದ್ದರು. ಆದರೆ ಬಳಿಕದ ಬೆಳವಣಿಗೆಯಲ್ಲಿ ಬಾಲಭವನ ಸೊಸೈಟಿಗೆ ಅಧ್ಯಕ್ಷರ ನೇಮಕವಾಗದೇ ಇರುವುದರಿಂದ ಇಲಾಖೆಯ ಹಿರಿಯ ಅಧಿಖಾರಿಗಳ ಮುತುವರ್ಜಿಯಲ್ಲೇ ಭಾಲಭವನ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಜತೆಜತೆಯಲ್ಲಿ ಕಾರ್ಯಕ್ರಮಗಳು ನಡೆಯುವುದರಿಂದ , ಜಿಲ್ಲೆ ಹಾಗೂ ತಾಲೂಕು ಹಂತದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆಯಾದರೂ, ಪರಿಣಾಮಕಾರಿಯಾದ ವೇಗ ಹಾಗೂ ಸೃಜನಾತ್ಮಕ ಚಟುವಟಿಕೆಗಳ ಅನುಷ್ಠಾನಕ್ಕೆ ಅಧ್ಯಕ್ಷರ ನೇಮಕದ ಅಗತ್ಯವಿದೆ. ಕಲಾ ಶ್ರೀ ಆಯ್ಕೆ ಶಿಬಿರದಂತಹಾ ಕಾರ್ಯಕ್ರಮಗಳನ್ನು ತಾಲೂಕು, ಜಿಲ್ಲೆ ಯಲ್ಲಿ ನಡೆಸಿ, ರಾಜ್ಯಮಟ್ಟದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ 7 ದಿನಗಳ ಕಾಲ ಸಂಭ್ರಮದಿಂದ ನಡೆಸುತ್ತಿದ್ದ ಇಲಾಖೆ ಇದೀಗ ಅಧಿಕಾರಿಗಳ ವ್ಯಾಪ್ತಿಯಲ್ಲೇ ಅಧ್ಯಕ್ಷ ಅಧಿಕಾರ ವಿರುವುದರಿಂದ ಮೂರು ದಿನ ಮತ್ತು 1 ದಿನಕ್ಕೆ ಸಂಭ್ರಮವನ್ನು ಇಳಿಸಿದೆ.
ಮಕ್ಕಳು ಬಾಲ್ಯದಲ್ಲಿ ಸಂಭ್ರಮ ಪಡಬೇಕು. ಆದರೆ ಈ ಸಂಭ್ರಮಕ್ಕೆ ವೇದಿಕೆಯನ್ನು ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯ. ಎರಡು ಮಕ್ಕಳ ಸಂಸ್ಥೆಗಳ ಜೊತೆಗೆ ಮಕ್ಕಳನ್ನೇ ಮರೆತಿರುವ ಸರ್ಕಾರ ತಕ್ಷಣ ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ರಾಜ್ಯ ಬಾಲಭವನ ಸೊಸೈಟಿಗೆ ಸಾಋಥಿಗಳನ್ನು ನಿಯೋಜಿಸುವುದರ ಮೂಲಕ ರಾಜ್ಯವ್ಯಾಪಿ ಮಕ್ಕಳ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಬೇಕಿದೆ. ಕೇವಲ ರಾಜಕೀಯ ಗುದ್ದಾಟಗಳಿಗೇ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀಸಲಿಟ್ಟಿರುವ ರಾಜಕೀಯ ಪಕ್ಷಗಳ ಮುಖಂಡರು ಮಕ್ಕಳನ್ನೇ ಮರೆತುಬಿಟ್ಟಿದ್ದಾರೆ.. ಅಧ್ಯಕ್ಷ ಪದವಿ ತಮಗೆ ಸಿಕ್ಕೀತು ಎಂದು ರಾಜಕೀಯ ಆಕಾಂಕ್ಷಿಗಳು ಕಾಯಬಹುದು. ಆದರೆ ಮಕ್ಕಳ ಬಾಲ್ಯ ಕಾಯುವುದಿಲ್ಲ. ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಬೇಕಿದೆ.

…………………………………
ರಾಜ್ಯದಲ್ಲಿ ಹಲವು ಅಕಾಡೆಮಿಗಳಿಗೆ ಸರ್ಕಾರ ಅಧ್ಯಕ್ಷರನ್ನು ನೇಮಿಸಿದೆ, ಹಲವು ಒತ್ತಡಗಳ ಕಾರಣದಿಂದ ಬಾಲಭವನ ಸೊಸೈಟಿ ಹಾಗೂ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರ ನೇಮಕವಾಗಿಲ್ಲ. ಉಪಚುನಾವಣೆಯ ಬಳಿಕ ಬಾಕಿ ಉಳಿದಿರುವ ನಿಗಮಮಂಡಳಿಗೂ ಅಧ್ಯಕ್ಷರ ನೇಮಕಾತಿ ನಡೆಸುವ ನಿರೀಕ್ಷೆ ಇದೆ.
-ಸುಲೋಚನಾ ಭಟ್(ಬಿಜೆಪಿ ವಕ್ತಾರೆ)
ಮಾಜಿ ಅಧ್ಯಕ್ಷರು
ರಾಜ್ಯಬಾಲಭವನ ಸೊಸೈಟಿ-ಬೆಂಗಳೂರು
…………………………………….……………………………………
ಅಧ್ಯಕ್ಷರ ನೇಮಕವಾದರೆ ನಮಗೂ ಹೆಚ್ಚು ಅನುಕೂಲ, ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಎಲ್ಲವೂ ಸರ್ಕಾರದ ನಿರ್ಧಾರ.
-ಮುತ್ತಣ್ಣ
ಕಛೇರಿ ಅಧೀಕ್ಷಕರು
ಬಾಲವಿಕಾಸ ಅಕಾಡೆಮಿ ಕೇಂದ್ರ ಕಛೇರಿ-ಧಾರವಾಡ
……………………………………………………
ಕರ್ನಾಟಕ ಬಾಲವಿಕಾಸ ಅಕಾಡೆಮಿಗೆ ಅರ್ಹ ಅಧ್ಯಕ್ಷರನ್ನು ನಿಯೋಜಿಸುವುದರ ಜೊತೆಗೆ, ಬಾಲವಿಕಾಸ ಅಕಾಡೆಮಿಗಳ ಕಾರ್ಯಕ್ರಮಗಳನ್ನು ಇನ್ನಷ್ಟು ಸಂಭ್ರಮದಿಂದ ನಡೆಸಬೇಕಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ರಾಜಕೀಯ ಮರೆತು ಮಕ್ಕಳನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು.
-ಶಂಕರ ಹಲಗತ್ತಿ
ಪ್ರಥಮ ಅಧ್ಯಕ್ಷರು-ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ
………………………………………….

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here