

ವಿಟ್ಲ: ಭಜನೆ ಎಂಬುದು ನಾಡಿನ ಸಂಸ್ಕೃತಿಯಾಗಿದ್ದು, ಸಂಸ್ಕಾರವನ್ನು ನೀಡುವ ಕಾರ್ಯಮಾಡುತ್ತದೆ. ಸಂಪತ್ತನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವ ಕಾರ್ಯವಾಗಬೇಕು. ಜೀವನ ಮೌಲ್ಯ ತುಂಬುವ ಪ್ರೀತಿ ಉದಿಸಬೇಕಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಒಳ್ಳೆಯ ಮನಸ್ಸಿನಿಂದ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಕರೋಪಾಡಿ ಪಳ್ಳದಕೋಡಿ ಶ್ರೀ ರಾಮ ಭಜನಾ ಮಂದಿರ ಪುನರ್ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನಡೆಸಿ ಆಶೀರ್ವಚನ ನೀಡಿದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ಮಾಡಿ ಕ್ಷಣಿಕ ಸುಖಕ್ಕಾಗಿ ಅನ್ಯ ಸಂಸ್ಕೃತಿಯತ್ತ ಚಿತ್ತಹರಿಸಬಾರದು. ಮಂದಿರಗಳು ಸಂಸ್ಕಾರಗಳನ್ನು ನೀಡುವ ಕೇಂದ್ರವಾಗಬೇಕು. ಉತ್ತಮ ಸಂಸ್ಕಾರಗಳು ಸಂಸಾರಗಳನ್ನು ಕ್ಷೇಮವಾಗಿರುತ್ತದೆ. ಭಜನೆಯ ಮೂಲಕ ಭಗವಂತನನ್ನು ಒಲಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ ದೇಶ ಕಾಣುತ್ತಿದ್ದ ಕನಸು ನನಸಾಗುವ ದಿನ ಸಮೀಪಿಸಿದೆ. ರಾಮ ಮಂದಿರ ನಿರ್ಮಾಣದ ಕಾರ್ಯದಲ್ಲಿ ಪಾಲ್ಗೊಳ್ಳಲು ಸಿಕ್ಕ ಅವಕಾಶ ಪ್ರತಿಯೊಬ್ಬರ ಪುಣ್ಯವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಪುನರ್ ನಿರ್ಮಾಣ ಆಗುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ದಾನದ ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ವಗೆನಾಡು ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಗುಳಿ ತಿರುಮಲೇಶ್ವರ ಭಟ್, ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಪಟ್ಲಗುತ್ತು ಮಹಾಬಲ ಶೆಟ್ಟಿ, ಮಲರಾಯಿ ದೈವದ ಪಾತ್ರಿ ದೇವಸ್ಯ ಕುಂಞ್ಞಣ್ಣ ಶೆಟ್ಟಿ, ಕರೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ ಆರ್ ಶೆಟ್ಟಿ, ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಒಡಿಯೂರು ಘಟಕದ ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಮಾತೃ ಮಂಡಳಿ ಅಧ್ಯಕ್ಷೆ ಸುಖದಾ ಪಳ್ಳದಕೋಡಿ ಉಪಸ್ಥಿತರಿದ್ದರು.
ಹರ್ಷಿತಾ, ರಕ್ಷಿತಾ ಪ್ರಾರ್ಥಿಸಿದರು. ಕೋಶಾಧಿಕಾರಿ ರಘುನಾಥ ಶೆಟ್ಟಿ ಪಟ್ಲಗುತ್ತು ಸ್ವಾಗತಿಸಿದರು. ಸವಿತಾ ಪಳ್ಳದಕೋಡಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ದಿನೇಶ್ ಶೆಟ್ಟಿ ಪಟ್ಲಗುತ್ತು ವಂದಿಸಿದರು. ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.








