Wednesday, October 25, 2023

*ನನ್ನಪ್ಪ*

Must read

ಅಪ್ಪ ನಿನ್ನ ಕಂದ ನಾನು
ಎತ್ತಿ ಹೊತ್ತೆ ನನ್ನನು
ಬೇಡಿದೊಡನೆ ಕೊಡಿಸಿ ಕುಣಿದೆ
ಬಿಡದೆ ನೆನೆವೆ ನಿನ್ನನು!

ಅಮ್ಮ ಕೋಲು ಎತ್ತಿದೊಡನೆ
ಕೂಗುತಿದ್ದೆ ಅಳುತಲಿ
ಅವಳ ಗದರಿ ನನ್ನನಪ್ಪಿ
ರಮಿಸುತ್ತಿದ್ದೆ ಬಳಿಕಲಿ!

‘ಅವ್ವ’ಎನುತ ಲಲ್ಲೆಗರೆದು
ಸುರಿಯುತಿದ್ಧೆ ಮುತ್ತನು
ಬೇಡವೆಂದರೂನು ನೀನು
ತಿನಿಸುತಿದ್ದೆ ತುತ್ತನು!

ಜಾತ್ರೆಯಲ್ಲಿ ಗೊಂಬೆ ಪೀಪಿ
ಕೊಡಿಸುತಿದ್ಧೆ ಹರುಷದಿ
ನನ್ನ ಜೊತೆಗೆ ಕುಣಿದು ನಲಿದು
ಬೀಗುತಿದ್ದೆ ಸರಸದಿ!

ಕಲಿಯುವಾಸೆ ನನಗೆ ಹಚ್ಚಿ
ಬಾಳ ದಾರಿ ತೋರಿದೆ
ಉಡಿಯ ತುಂಬಿ ಕಳಿಸುವಾಗ
ಅಮ್ಮನೊಲವ ಬೀರಿದೆ!

ತಲೆಯ ಸವರಿ ಕೆನ್ನೆ ತಟ್ಟಿ
ಅತ್ತೆ ನೀನು ಮರೆಯಲಿ
ಈಗ ಹೇಳು ಅಪ್ಪನೆಂದು
ಯಾರ ನಾನು ಕರೆಯಲಿ?

ಹೆಜ್ಜೆ ಹೆಜ್ಜೆಗೆಲ್ಲ ನೀನೆ
ಕಾಣುತಿರುವೆ ದಿನ ದಿನ
ಬದುಕನೆಲ್ಲ ಸವಿಯುವಾಗ
ನಿನ್ನ ನೆನೆವೆ ಅನುದಿನ!

 

#ನೀ.ಶ್ರೀಶೈಲ ಹುಲ್ಲೂರು

More articles

Latest article