Wednesday, April 10, 2024

ಸಮಯ ಪ್ರಜ್ಞೆ

ಲೇಖನ : ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು, ಆಡಳಿತಾಧಿಕಾರಿ ಜನತಾ ಎಜುಕೇಷನ್ ಸೊಸೈಟಿ ಅಡ್ಯನಡ್ಕ
ನಂದನ ಮನೆ, ಕೇಪು ಗ್ರಾಮ; ಅಂಚೆ: ನೀರ್ಕಜೆ ಪಿನ್: ೫೭೪೨೪೩ ಮೊ: ೯೪೪೮೬೨೬೦೯೩

ಬಂಟ್ವಾಳ ತಾಲೂಕಿನ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ಇತ್ತೀಚೆಗೆ ಬಹಳ ಯಶಸ್ವಿಯಾಗಿ ಸಂಪನ್ನಗೊಂಡವು. ಕಳೆದ ಹತ್ತಾರು ವರ್ಷಗಳಿಂದ ಬಂಟ್ವಾಳ ತಾಲೂಕಿನಲ್ಲಿ ಜರಗಿದ ಈ ಸ್ಪರ್ಧೆಗಳ ತೀರ್ಪುಗಾರರ ಮಂಡಳಿಯಲ್ಲಿ ಸಕ್ರಿಯನಾಗಿದ್ದ ನನಗೆ ಸಮಯ ಪ್ರಜ್ಞೆ ಮರೆತಾಗ ಆಗುವ ಎಡವಟ್ಟುಗಳನ್ನು ಬಹಳ ಹತ್ತಿರದಿಂದ ಬಲ್ಲೆ. ದೂರದ ಊರಿಗೆ ಹೋಗಬೇಕಾದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದೆಷ್ಟೋ ಬಾರಿ ಸಂಕಷ್ಟಗಳಾಗಿವೆ. ಹೊತ್ತಿಳಿಯುತ್ತಿದ್ದಂತೆ ಆಯಾಸಕ್ಕೊಳಗಾಗುವ ಸಂಘಟಕರು, ತೀರ್ಪುಗಾರರು ಮತ್ತು ವಿದ್ಯಾರ್ಥಿಗಳು ಹೆಚ್ಚು ಒತ್ತಡಗಳಿಗೊಳಗಾಗುತ್ತಾರೆ. ಫಲಿತಾಂಶಗಳಲ್ಲೂ ಏರು ಪೇರುಗಳಾಗುವ ಸಾಧ್ಯತೆಗಳು ಇರಲಾರದು ಎಂದೂ ಹೇಳಲಾಗದು.
ಮಾಣಿಯಲ್ಲಿ ಜರಗಿದ ಪ್ರತಿಭಾಕಾರಂಜಿ ಮತ್ತು ಕಲೋತ್ಸವಗಳ ಉದ್ಘಾಟನಾ ಕಾರ್ಯಕ್ರಮದ ವರದಿಗಳನ್ನು ದಿನಾಂಕ ೦೬.೧೧.೨೦೧೯ರ ವಿಜಯವಾಣಿಯ ಕಡಲು ವಿಭಾಗದ ಮುಖಪುಟದಲ್ಲಿ ಓದಿದೆ. ಉದ್ಘಾಟಕರೂ ಬಂಟ್ವಾಳದ ಶಾಸಕರೂ ಆದ ರಾಜೇಶ್ ನಾಯ್ಕ್‌ ರು ಕಲೋತ್ಸವಗಳ ಸಭೆ ಚುಟುಕಾಗಿರಲಿ ಎಂದು ಹಾರೈಸಿದ್ದಾರೆ. ತನ್ನ ಹಾರೈಕೆಯ ಮಾತುಗಳಿಗೆ ಪೂರಕವಾಗಿ, ಕಲೋತ್ಸವದಲ್ಲಿ ಸಮಯ ಹಾಳು ಮಾಡುವ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ. ಪ್ರದರ್ಶನಗಳಿಗಾಗಿ ಸಿದ್ಧತೆ ಮಾಡಿಕೊಂಡಿರುವ ವಿದ್ಯಾರ್ಥಿಗಳನ್ನು ಕೂರಿಸಿ ಭಾಷಣ ಮಾಡುವುದು ತಪ್ಪು. ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಸಂಕ್ಷಿಪ್ತ ಸಮಯದಲ್ಲಿ ಸರಳವಾಗಿ ನೆರವೇರಬೇಕು. ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದಿದ್ದಾರೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಈ ವರದಿಯಿಂದ ಸಂತುಷ್ಟರಾದವರಲ್ಲಿ ನಾನೂ ಒಬ್ಬನಿರಬಹುದೇನೋ ಎಂದು ಅನ್ನಿಸುತ್ತದೆ. ಅತ್ಯಂತ ಸಮಯೋಚಿತ ಮಾತುಗಳಿಗೆ ಶಾಸಕರು ಅಭಿನಂದನಾರ್ಹರು.
ಶಾಲೆಗಳು ನಡೆಸುವ ಕಾರ್ಯಕ್ರಮಗಳು ಸಮಯಾಧಾರಿತವಾಗಿರಬೇಕು. ಅತಿಥಿಗಳಾಗಿ ಬರಲಿರುವ ಒಬ್ಬನಿಗಾಗಿಯೋ ಇಬ್ಬರಿಗಾಗಿಯೋ ಕಾಯುವ ಕಾರಣದಿಂದಾಗಿ ಸಂಕಟ ಅನುಭವಿಸುವವರು ನೂರಾರು ಮಂದಿ. ಶಾಲಾ ಹಂತ, ಕ್ಲಸ್ಟರ್ ಹಂತ, ವಲಯ ಹಂತ, ಜಿಲ್ಲಾ ಹಂತ, ರಾಜ್ಯ-ರಾಷ್ಟ್ರ ಹಂತಗಳಲ್ಲಿ ತಡಗೊಳ್ಳುವ ಇದೇ ಪರಂಪರೆ ಮುಂದುವರಿದರೆ ಕಾಯುವಿಕೆ ಹತ್ತಾರು ಬಾರಿ ನೋವಿಗೆ ಕಾರಣವಾಗುತ್ತದೆ. ನಿರ್ದಿಷ್ಟ ದಿನದಲ್ಲಿ ಯಾ ದಿನಗಳಲ್ಲಿ ಮುಗಿಯಬೇಕಾದ ಕಾರ್ಯಕ್ರಮಗಳು ಮರುದಿನಕ್ಕೆ ಮುಂದೂಡುವಂತಾರೆ ಅದೆಷ್ಟೋ ನಷ್ಟ ಮತ್ತು ವಿದ್ಯಾರ್ಥಿಗಳಿಗೆ ಅಶಿಸ್ತಿನ ಪಾಠವನ್ನೇ ನೀಡಿದಂತಾಗುತ್ತದೆ. ಆದರೆ ಅಧಿಕಾರಿಗಳು ಶಾಸಕರು ಹೇಳಿದ ಮಾತ್ರಕ್ಕೆ ಬದಲಾಗಲು ಸಾಧ್ಯವೂ ಇಲ್ಲ. ಯಾಕೆಂದರೆ ನಾನು ಬರುವ ತನಕ ಕಾಯ ಬಹುದಿತ್ತಲ್ಲ?, ನಾನು ಬರುವವರೆಗೆ ಕಾಯಬೇಕಿತ್ತಲ್ಲ? ಎನ್ನುವವರೂ ಇರುತ್ತಾರಲ್ಲಾ?
ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಮನಬಂದಂತೆ ಭಾಷಣ ಮಾಡುವ ವೇದಿಕೆಯ ಅತಿಥಿ ಮಹಾಶಯರು, ಅನೇಕೆ ಮಾತುಗಳು ಪುನರುಕ್ತಿಯಾಗುತ್ತಿದ್ದರೂ ಸಹಿಸುವ ಸಭಾಸದರು, ಇದನ್ನೆಲ್ಲ ಸಹಿಸುವ ಸಂಘಟಕರು ಚಡಪಡಿಸಬಹುದೇ ಹೊರತು ಏನೂ ಮಾಡುವಂತಿಲ್ಲ. ಯಾವುದೇ ಉತ್ತಮ ಸಂದೇಶವಿಲ್ಲದ ಭಾಷಣ ಅಥವಾ ಮಾತು ನಿಷ್ಪ್ರಯೋಜಕ. ಸಮಯದ ಬೆಲೆ ಅತ್ಯಧಿಕ. ಸಮಯ ಪ್ರಜ್ಞೆಯ ಮಾತು ಒಬ್ಬರಿಂದ ಒಂದು ಸಂದರ್ಭಕ್ಕೆ ಸೀಮೀತವಾಗಿರಬಾರದು, ಎಲ್ಲರೂ ಎಲ್ಲ ಸಂದರ್ಭಗಳಲ್ಲೂ ಪಾಲಿಸಬೇಕು. ಸಮಯಕ್ಕೆ ಬೆಲೆ ಕೊಡುವ ಗುಣ ಹೃದಯದಿಂದ ಹುಟ್ಟಿ ಬರಬೇಕು. ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ಕಡೆ ಕಾರ್ಯಕ್ರಮಗಳಲ್ಲಿ ಅತಿಥಿಗಳಾಗಿ ಭಾಗವಹಿಸುವವರು ಬಹಳ ಎಚ್ಚರಿಕೆ ವಹಿಸಿದರೆ ನಮ್ಮಲ್ಲಿಯೂ ಸಮಯಾಧಾರಿತವಾಗಿ ಕಾರ್ಯಕ್ರಮಗಳು ನಡೆದೇ ನಡೆಯುತ್ತದೆ. ಹೋದರಾಯಿತು, ಮುಗಿದರಾಯಿತು, ಮುಗಿಸಿದರಾಯಿತು ಎನ್ನುವ ಬದ್ಧತೆಗಳಿರದ ಜನರ ನಡುವೆ ಸಮಯ ಪ್ರಜ್ಞೆ ಹಗಲು ಕನಸಿನ ಮಾತು. ಎಂದೆಂದಿಗೂ ಕೈಗೂಡದ ಮಾತು.
ಶಿಕ್ಷಣ ಇಲಾಖೆ ಒಂದರಲ್ಲಿ ಮಾತ್ರವಲ್ಲ, ಇತರೆಲ್ಲಾ ಇಲಾಖೆಗಳಲ್ಲೂ ಸಮಯದ ಶಿಸ್ತು ಕಡಿಮೆಯಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಭಾಗೇದಾರಿಕೆಗಿಂತಲೂ ಅತಿಥಿಗಳಿಗಾಗಿ ಕಾಯಬೇಕಾದ ಅನಿವಾರ್ಯತೆ ಕಾರಣವಾಗಿರುತ್ತದೆಂಬುದು ಗಮನೀಯ. ಕಕ್ಕೆಪದವು ಎಂಬಲ್ಲಿ ಒಂದು ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಅಲ್ಲಿ ಕಾರ್ಯಕ್ರಮ ಆರಂಭಗೊಳ್ಳಲು ನನಗೆ ಕಾಯಬೇಕಾಗಿ ಬಂದ 235ನಿಮಿಷ ನಾನು ಇದುವರೆಗೆ ಕಾದ ಅತೀ ದೀರ್ಘವಾದ ಕಾಯುವಿಕೆ. ಬೆಳಗ್ಗೆ ಒಂಭತ್ತು ಎಂದು ನಿಗದಿಯಾದ ಕಾರ್ಯ ಕ್ರಮಗಳು ಅದೇ ದಿನ ಮಧ್ಯಾರಾತ್ರಿಯೊಳಗೇ ಮುಗಿಯುವುದು ಸಂಶಯವೋ ಎಂಬಂತಾದ ಅನೇಕ ಕಾರ್ಯಕ್ರಮಗಳನ್ನು ನಾನು ಬಲ್ಲೆ. ವೇದಿಕೆಗಳು ಸಮಾಜಕ್ಕೆ ಸಮಯ ಪ್ರಜ್ಞೆಯ ಶಿಸ್ತಿನ ಪಾಠಗಳಿಗೆ ಮಾದರಿಯಾಗಬೇಕೇ ಹೊರತು ಜನರ ತಾಳ್ಮೆಯನ್ನು ಕೊಲ್ಲಲು ಕಾರಣವಾಗಬಾರದು. ಅದಕ್ಕಾಗಿಯೇ ಸಭಾಕಾರ್ಯಕ್ರಮ ಎಂದೊಡನೆ ಸಭಾಸದರ ಸಂಖ್ಯೆ ಇಳಿಮುಖವಾಗುತ್ತಿದೆ. ಚಪ್ಪಾಳೆಗಳ ಸದ್ದೂ ಅಡಗತೊಡಗುತ್ತಿವೆ.

More from the blog

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...