ವಿಟ್ಲ: ಕೃಷಿ ಚಟುವಟಿಕೆಗಳಿಗೆ ಸಹಕಾರಿ ಸಂಘಗಳು ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕಾಗಿದೆ. ಸದಸ್ಯ ಬೆಳೆಗಾರರ ಜತೆಗೆ ಮಾತ್ರ ಸಹಕಾರಿ ಸಂಘಗಳು ವ್ಯವಹಾರ ನಡೆಸಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರುವ ಪ್ರಮೇಯ ಬರುವುದಿಲ್ಲ. ಸೇವಾ ಸಹಕಾರಿಗಳನ್ನು ಒಂದು ಸಂಸ್ಥೆ ಎಂಬ ರೀತಿಯಲ್ಲಿ ಪರಿಗಣಿಸಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದೆ ಇಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಸತೀಶ್ ಮರಾಠೆ ಹೇಳಿದರು.
ಅವರು ಸೋಮವಾರ ಪುಣಚ ಪ್ರಾಥಮಿಕ ಸೇವಾ ಸಹಕಾರಿ ಸೊಸೈಟಿಗೆ ಭೇಟಿ ನೀಡಿ ಸಂವಾದ ಸಭೆಯಲ್ಲಿ ಭಾಗವಹಿಸಿ ನಾನಾ ಸಹಕಾರಿ ಸಂಘಗಳ ಅಧ್ಯಕ್ಷರ ಬೇಡಿಕೆಗಳನ್ನು ಸ್ವೀಕರಿಸಿ ಮಾತನಾಡಿದರು. ದೇಶದ ಹಲವು ಗ್ರಾಮೀಣ ಭಾಗಗಳಿಗೆ ಇನ್ನೂ ಸಹ ಇಂಟೆರ್‌ನೆಟ್ ಸಮಪರ್ಕವಾಗಿ ತಲುಪಿಲ್ಲ. ಇದರಿಂದ ಜಿಲ್ಲಾ ಬ್ಯಾಂಕ್‌ಗಳ ಜಾಲವನ್ನು ಮಾತ್ರ ಮಾಡಲು ಸಾಧ್ಯವಿದೆ. ಎನ್‌ಸಿಡಿಸಿ ಸಂಸ್ಥೆಯ ಮೂಲಕ ಸ್ಥಳೀಯವಾಗಿ ಕೃಷಿ ಉತ್ಪನ್ನದ ಮೌಲ್ಯವರ್ಧನೆ ಮಾಡುವ ಕಾರ್ಯವನ್ನು ಸಹಕಾರಿ ಸಂಸ್ಥೆಗಳು ಮಾಡಬಹುದಾಗಿದೆ. ಕೃಷಿಕರಿಗೆ ಸಹಕಾರಿಯಾಗುವ ರೀತಿಯ ದಾಸ್ತಾನು ಕೇಂದ್ರಗಳನ್ನು ಕೇಂದ್ರ ಸರಕಾರದ ನೆರವಿನೊಂದಿಗೆ ಸಂಘಗಳು ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಸಹಕಾರ ಭಾರತೀಯ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ ಮಾತನಾಡಿ ಕೇಂದ್ರ ಮಧ್ಯವರ್ತಿ ಬ್ಯಾಂಕ್‌ಗಳನ್ನು ತೆಗೆಯುವುದರಿಂದ ಆಗುವ ಆನಾನುಕೂಲತೆಯ ಬಗ್ಗೆ ಈಗಾಗಲೇ ಪರಿಶೀಲನೆಗಳು ನಡೆಯುತ್ತಿದೆ. ಜಿಲ್ಲಾ ಬ್ಯಾಂಕ್‌ಗಳ ಬಗ್ಗೆ ರಾಷ್ಟ್ರೀಯ ಕಮಿಟಿಯನ್ನು ಮಾಡಿದ್ದು, ಕೂಲಂಕುಷ ವರದಿ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ಇದರ ಪೂರ್ಣ ಪ್ರಮಾಣದ ವರದಿಯನ್ನು ಕೇಂದ್ರಕ್ಕೆ ನೀಡಲಾಗುವುದು ಎಂದರು.
ಸಂವಾದ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುಣಚ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ ಅವರು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿಗಳಿಗೆ ಒಂದೇ ತಂತ್ರಜ್ಞಾನ ಅಳವಡಿಕೆ, ಹಣ ವರ್ಗಾವಣೆಗೆ ಹೇರಿರುವ ನಿರ್ಬಂಧವನ್ನು ಸಡಿಲಗೊಳಿಸಬೇಕು ಇತ್ಯಾದಿ ಐದು ನಾನಾ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಸಂವಾದದಲ್ಲಿ ಮಾತನಾಡಿದ ಪ್ರಗತಿ ಪರ ಕೃಷಿಕ ಕೃಷ್ಣಪ್ರಸಾದ ಕೊಪ್ಪರತೊಟ್ಟು ಪಾನ್‌ಕಾರ್ಡ್ ನೀಡುವಾಗ ಕೃಷಿಕರಿಗೆ ಪ್ರತ್ಯೇಕವಾಗಿ ವ್ಯವಸ್ಥೆಯನ್ನು ಕಲ್ಪಿಸಬೇಕು. ರೈತ ಉತ್ಪಾದಕ ಕಂಪನಿಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು ಎಂಬ ಮಹತ್ವದ ಬೇಡಿಕೆ ಇಟ್ಟರು.

ಸ್ಥಳೀಯ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕರು ಈ ಸಭೆಯಲ್ಲಿ ಹಾಜರಿದ್ದರು. ಪುಣಚ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಜನಾರ್ಧನ ಭಟ್ ಅಮೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here