

ಬಂಟ್ವಾಳ: ಆರು ಗ್ರಾಮ ವ್ಯಾಪ್ತಿಯ ಸರ್ವಋತು ಜಲಪೂರಣ ೧೯.೧೮ ಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ನ. ೮ರಂದು ಲೋಕಾರ್ಪಣೆ ಮಾಡುವರು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಅವರು ನ. ೫ರಂದು ಯೋಜನೆ ಅನುಷ್ಠಾನದ ನೇತ್ರಾವತಿ ನದಿ ಕಡೇಶ್ವಾಲ್ಯ ನಿರೇತ್ತುವ ಸ್ಥಾವರ, ಪೆರಾಜೆ ಗ್ರಾಮ ಗಡಿಯಾರ ನೀರು ಸಂಗ್ರಹಣಾ ಮತ್ತು ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿ ಮಾಣಿ ಬಹುಗ್ರಾಮ ಸರ್ವಋತು ಕುಡಿಯುವ ನೀರು ಸರಬರಾಜು ಯೋಜನೆಯಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ೬೦/೪೦ರಂತೆ ಅನುದಾನದ ಪಾಲು ಇರುವುದು. ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಮದ ಹಾಲಿ ಜನಸಂಖ್ಯೆಯನ್ನು ಗಮನಿಸಿಕೊಂಡು ಯೋಜನೆ ರೂಪಿತವಾಗಿದೆ. ಯೋಜನೆಯ ಪ್ರಗತಿ ಹಂತದಲ್ಲಿ ೨. ೭೨ ಕೋಟಿ ರೂ. ಕೊರತೆ ಅನುದಾನವನ್ನು ಸಂಬಂಧಪಟ್ಟ ಸಚಿವರಲ್ಲಿ ಮಾತುಕತೆ ನಡೆಸಿ ಮಂಜೂರು ಮಾಡಿಸಲಾಗಿದೆ. ಹೆಚ್ಚುವರಿ ಜನವಸತಿ ಮತ್ತು ಗ್ರಾಮಗಳ ಸೇರ್ಪಡೆಯನ್ನು ಕೂಡಾ ಮಾಡಲಾಗಿದೆ ಎಂದರು.
ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜನ ಪ್ರತಿನಿಽಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುವುದಾಗಿ ತಿಳಿಸಿದರು.
ಸ್ಥಾವರ ಭೇಟಿ ಸಂದರ್ಭ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗ ಸಹಾಯಕ ಕಾ.ನಿ. ಇಂಜಿನಿಯರ್ ಮಹೇಶ್, ಜ್ಯೂ.ಇಂಜಿನಿಯರ್ ಜಗದೀಶ್, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಮಾಣಿ ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ, ಕಡೇಶ್ವಾಲ್ಯ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಶೆಟ್ಟಿ, ಗಣ್ಯರಾದ ವಿಧ್ಯಾದರ ರೈ ಕಡೇಶ್ವಾಲ್ಯ, ಬಿ. ದೇವದಾಸ ಶೆಟ್ಟಿ, ಗಣೇಶ್ ರೈ ಮಾಣಿ, ಪುಷ್ಪರಾಜ ಶೆಟ್ಟಿ, ಹಿರಿಯ ಸಹಕಾರಿ ನಾರಾಯಣ ಸಪಲ್ಯ ಮತ್ತು ಪ್ರಮುಖರು ಉಪಸ್ಥಿತರಿದ್ದರು.








