ಯಾದವ ಕುಲಾಲ್
ಬಿ.ಸಿ.ರೋಡ್ : ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಸಾಧನೆ ಮಾಡುವಂತೆ ಮಾಡುವಲ್ಲಿ ಹೆಚ್ಚಿನ ವಿದ್ಯಾಸಂಸ್ಥೆಗಳು ಪ್ರಯತ್ನ ಮಾಡುತ್ತವೆ. ಉತ್ತಮ ಫಲಿತಾಂಶವನ್ನು ಗಳಿಸಬೇಕು ಆ ಮೂಲಕ ರಾಜ್ಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂದು ಶತಾಯ ಗತಾಯ ಪ್ರಯತ್ನ ಪಡುತ್ತಾರೆ. ಅದರಲ್ಲಿ ಕೆಲವು ವಿದ್ಯಾ ಸಂಸ್ಥೆಗಳು ಯಶಸ್ಸನ್ನೂ ಪಡೆಯುತ್ತದೆ. ಆದರೆ ಕೆಲವೇ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹವನ್ನು ನೀಡಿ ಅವರನ್ನು ಸಾಧನೆ ಮಾಡುವಂತೆ ಪ್ರೇರೇಪಿಸುತ್ತದೆ. ಗ್ರಾಮೀಣ ಕ್ರೀಡೆಯೆಂದೇ ಹೆಸರು ಪಡೆದು ಈಗ ಎಲ್ಲ ಕಡೆ ಪ್ರಚಲಿತದಲ್ಲಿರುವ ಕಬ್ಬಡ್ಡಿಯಲ್ಲಿ ಸತತ ಮೂರು ವರ್ಷಗಳಲ್ಲಿ ತಮ್ಮ ವಿದ್ಯಾ ಸಂಸ್ಥೆಯ ಮಕ್ಕಳನ್ನು ರಾಷ್ಟ್ರ ಮಟ್ಟದಲ್ಲಿ ಆಡುವಂತೆ ಮಾಡುತ್ತಿರುವುದು ವಿಶೇಷ ಸಾಧನೆಯಲ್ಲದೇ ಮತ್ತೇನೂ ಅಲ್ಲ. ಶಾಲೆಯ ಸ್ವಾಗತ ಕೊಠಡಿಯ ಶೋಕೇಸ್ ತುಂಬಾ ಪ್ರಶಸ್ತಿಪತ್ರಗಳು, ಹಲವಾರು ಟ್ರೋಫಿಗಳು ಕಣ್ಣಿಗೆ ಗೋಚರಿಸುತ್ತದೆ. ಇದೆಲ್ಲಾ ಕೇವಲ ಕಬಡ್ಡಿ ಪಂದ್ಯಾಟದಲ್ಲಿ ಈ ಶಾಲಾ ಮಕ್ಕಳು ನೀಡಿದ ವಿಶೇಷ ಕೊಡುಗೆಯಾಗಿರುತ್ತದೆ.
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆ ಕೀರ್ತಿಗೆ ಪಾತ್ರವಾಗಿದೆ. ಕಬ್ಬಡ್ಡಿ ಪಂದ್ಯದಲ್ಲಿ ಪ್ರತೀ ವರ್ಷ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಸುತ್ತಾ ಬಂದಿರುವ ಜಿಲ್ಲೆಯ ಏಕೈಕ ವಸತಿ ಶಾಲೆಯಾಗಿದ್ದು ಇದುವರೆಗೆ ಶಾಲೆಯ 11 ವಿದ್ಯಾರ್ಥಿಗಳನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಇದರಲ್ಲಿ 7 ಮಂದಿಯ ವಿದ್ಯಾರ್ಥಿನಿಯರಿದ್ದಾರೆ. 2016-17ರಲ್ಲಿ ಮೂರು ವಿದ್ಯಾರ್ಥಿಗಳು, 17-18 ಮೂರು ವಿದ್ಯಾರ್ಥಿಗಳು, 2018-19ರಲ್ಲಿ ಮೂರು ವಿದ್ಯಾರ್ಥಿಗಳು ಮತ್ತು 19-20 ಇಬ್ಬರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೀಗೆ ಈ ವಿದ್ಯಾ ಸಂಸ್ಥೆಯ ಮಕ್ಕಳು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬತೆ ಕಬಡ್ಡಿ ಕ್ಷೇತ್ರಕ್ಕೆ ಪಾದಾರ್ಪಣೆಗೈದ ಪ್ರಾಥಮಿಕ ಹಂತದಲ್ಲೆ ವಲಯ ಮಟ್ಟದಿಂದ ಹಿಡಿದು ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಏರಿ ವೈಯಕ್ತಿಕ ಚಾಂಪಿಯನ್ ಮುಡಿಗೇರಿಸಿಕೊಂಡಿದ್ದಾರೆ.
ಆಯ್ಕೆಯ ವಿಧಾನ : 2019-20ನೇ ಶೈಕ್ಷಣಿಕ ವರ್ಷದ ಕ್ರೀಡಾ ಕೂಟ ಕ್ರೀಡಾ ಕಬ್ಬಡ್ಡಿ ಪಂದ್ಯಾಟದಲ್ಲಿ ವಲಯ ಮಟ್ಟದಲ್ಲಿ 14ರ ವಯೋಮಾನದ ಬಾಲಕ/ಬಾಲಕಿಯರ ಹಾಗೂ 17ರ ವಯೋಮಾನದ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ತಾಲೂಕು ಮಟ್ಟದಲ್ಲಿ ಈ ಮೂರು ತಂಡಗಳು ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ.ದೆ.  ಜಿಲ್ಲಾ ಮಟ್ಟದಲ್ಲಿ 17ರ ವಯೋಮಾನದ ಬಾಲಕಿಯರು ದ್ವಿತೀಯ ಸ್ಥಾನ ಪಡೆದು 5 ಜನ ಬಾಲಕಿಯರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಬಾಲಕಿಯರು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದಲ್ಲಿ 14ರ ವಯೋಮಾನದ ಬಾಲಕಿಯರಿಗೆ ದ್ವಿತೀಯ ಸ್ಥಾನ ಪಡೆದು ತಂಡದ ಐದು ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ ಆಯ್ಕೆ, ರಾಜ್ಯ ಮಟ್ಟದಲ್ಲಿ 5 ವಿದ್ಯಾರ್ಥಿನಿಯರು ಮೈಸೂರು ವಿಭಾಗದ ಉಡುಪಿ ತಂಡವು ಪ್ರಥಮ ಸ್ಥಾನವನ್ನು ಪಡೆದು ಇದರಲ್ಲಿ ಅನ್ನಪೂರ್ಣ,  ಶ್ರಾವ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
2019-20ಕ್ಕೆ ಇಬ್ಬರು ವಿದ್ಯಾರ್ಥಿನಿಯರ ಪರಿಚಯ :  ಅನ್ನಪೂರ್ಣ ದೈತಪ್ಪ ನಾಗರಾಳ ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಾಗರಾಳ ಊರಿನ ದೈತಪ್ಪ ನಾಗರಾಳ ಹಾಗೂ ವಿಜಯಲಕ್ಷ್ಮೀಯವರ ಮೂರನೇ ಪುತ್ರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾವಳಪಡೂರು ವಗ್ಗ ಇಲ್ಲಿನ 8ನೇ ತರಗತಿ ವಿದ್ಯಾರ್ಥಿನಿ.  ಶ್ರಾವ್ಯ ದ.ಕ. ಜಿಲ್ಲೆಯ ಬೆಳ್ತಂಗಡಿ ಮಚ್ಚಿನ ಗ್ರಾಮದ ಬಳ್ಳಮಂಜ ಊರಿನ ವಾಸು ಕುಲಾಲ್ ಹಾಗೂ ಸುಜಾತ ಕುಲಾಲ್ ದಂಪತಿಗಳ ಎರಡನೇ ಪುತ್ರಿ ಮೊರಾರ್ಜಿ ವಸತಿ ಶಾಲೆ ಕಾವಳಪಡೂರು ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. 2018-19ರ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕಬಡ್ಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ತಂಡದ ನಾಯಕಿಯಾಗಿ ತಂಡವನ್ನು ಮುನ್ನಡೆಸಿದವರು.
ತರಬೇತಿದಾರ ದೈಹಿಕ ಶಿಕ್ಷಕ ಆಸಿದ್ ಪಡಂಗಡಿರವರ ನಿರಂತರ ಹಾಗೂ ವಿನೂತನ ತರಬೇತಿ ಹಾಗೂ ಪ್ರಯತ್ನದಿಂದ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ಮನದಾಳದ ಮಾತಿನಲ್ಲಿ ತಿಳಿಯುತ್ತದೆ. ಸರಕಾರಿ ವಿದ್ಯಾ ಸಂಸ್ಥೆಯಾದ ಮೊರಾರ್ಜಿ ದೇಸಾಯಿ ವಿದ್ಯಾ ಸಂಸ್ಥೆಯಲ್ಲಿ ಬಡ ಹಾಗೂ ಮಧ್ಯಮ ಕುಟುಂಬದ ವಿದ್ಯಾರ್ಥಿಗಳಿರುವದರಿಂದ ಮುಂದೆಯೂ ಅವರಿಗೆ ಸರಕಾರದ ಸವಲತ್ತುಗಳು ಸಮಯಕ್ಕೆ ಸರಿಯಾಗಿ ಸಿಗಲಿ, ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂಬುದೇ ನಮ್ಮ ಆಶಯ.
****
ವಗ್ಗದ ಆಲಂಪುರಿ ಮಣ್ಣಿನಲ್ಲಿಯೇ ಕಬಡ್ಡಿಯ ಸತ್ವ ಅಡಗಿದೆ. ವಿದ್ಯಾರ್ಥಿಗಳ ಶ್ರಮ, ಭದ್ಧತೆ, ಶ್ರೇಷ್ಠ ಕ್ರೀಡಾಳುಗಳಾಗಿ ರೂಪುಗೊಳ್ಳುವಲ್ಲಿ ಸಹಕಾರಿಯಾಗಿದೆ. ದೈಹಿಕ ಶಿಕ್ಷಕರಾದ ಆಸಿದ್ ಪಡಂಗಡಿಯವರ ವಿನೂತನ ತರಬೇತಿ ವಿದ್ಯಾರ್ಥಿಗಳ ಸಾಧನೆಯ ಹಿಂದಿನ ಶ್ರೀ ರಕ್ಷೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಗಳಿರುವ ಶಾಲೆ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ಎಣಿಸುತ್ತಿದೆ.
– ಸಂತೋಷ್ ಎಸ್. ಸನಿಲ್, ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಗ್ಗ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here