ಬಂಟ್ವಾಳ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸ್ಥಳೀಯವಾಗಿ ಬೇರೆ ಬೇರೆ ಮಾತೃಭಾಷೆಯನ್ನು ಹೊಂದಿದ್ದರೂ ಕನ್ನಡವನ್ನು ಉಳಿಸಿ ಬೆಳೆಸಲು ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಬಂಟ್ಟಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡದ ಕಾಯಕ ನಿತ್ಯ ನಡೆಯಬೇಕು ಎಂದು ಕರೆ ನೀಡಿದ ಅವರು ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರ ಚಿಂತನೆಗಳು ಬದಲಾಗಬೇಕಿದೆ ಎಂದರು.


    

ರಾಷ್ಟ್ರ ಧ್ವಜಾರೋಹಣಗೈದ ತಹಶೀಲ್ದಾರ್ ರಶ್ಮೀ ಎಸ್.ಆರ್. ರಾಜ್ಯೋತ್ಸವದ ಸಂದೇಶ ನೀಡುತ್ತಾ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉತ್ತಮ ಹುದ್ದೆ ಸಿಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ಬದಿಗಿಟ್ಟು ಕನ್ನಡ ಸಾಹಿತ್ಯವನ್ನು ನಮ್ಮ ಮಕ್ಕಳಿಗೆ ಕಲಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಈ ಹಂತದಲ್ಲಿ ನಮ್ಮ ಬಂಟ್ವಾಳದ ಪಂಜೆ ಮಂಗೇಶರಾಯರು, ಏರ್ಯ ಲಕ್ಷ್ಮೀನಾರಾಯಣ ಆಳ್ವರ ಕೊಡುಗೆಯನ್ನು ನೆನಪಿಸಿಕೊಳ್ಳಬೇಕು ಎಂದರು.
ಕನ್ನಡವೇ ಸತ್ಯ , ಕನ್ನಡವೇ ನಿತ್ಯ ಎನ್ನುವ ಸಂಕಲ್ಪ ನರನಾಡಿಗಳಲ್ಲಿಯೂ ಮೂಡಲಿ ಎಂದ ಅವರು, ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಶಾಲೆಗಳಿಗೆ ಕುತ್ತು ಬಂದಿದೆ, ಈ ಬಗ್ಗೆ ಕನ್ನಡಿಗರೆಲ್ಲರೂ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಆಶಯ ವ್ಯಕ್ತಪಡಿಸಿದರು.
ಶಾರದಾ ಪ್ರೌಢಶಾಲೆಯ ಶಿಕ್ಷಕ ಧನರಾಜ್ ಉಪನ್ಯಾಸ ನೀಡಿ, ಕನ್ನಡ ಭಾಷೆ ಕಡತದಲ್ಲಿ ಕೇವಲ ಆಡಳಿತ ಭಾಷೆಯಾಗದೆ, ಪ್ರತಿಯೊಬ್ಬರ ನಾಡಿಮಿಡಿತವಾಗಲಿ ಎಂದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ತಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ , ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ, ಶಿರಸ್ತೇದಾರ್ ರಾಜೇಶ್ ನಾಯ್ಕ್,  ಪಾಣೆಮಂಗಳೂರು ಹೋಬಳಿ ನಾಡಕಚೇರಿ ಉಪತಹಶೀಲ್ದಾರ್ ರೂಪೇಶ್ ಕುಮಾರ್, ಆಹಾರ ಶಿರಸ್ತೇದಾರ್ ಶ್ರೀನಿವಾಸ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಉಪಸ್ಥಿತರಿದ್ದರು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಉಪತಹಶೀಲ್ದಾರ್ ಶ್ರೀಧರ್ ವಂದಿಸಿದರು. ಕಂದಾಯ ನಿರೀಕ್ಷಕ ರಾಮ ಕಾರ್ಯಕ್ರಮ ನಿರ್ವಹಿಸಿದರು.

ಸಭಾಕಾರ್ಯಕ್ರಮಕ್ಕೆ ಮುನ್ನ ರಾಷ್ಟ್ರಧ್ವಜಾರೋಹಣ ನಡೆಯಿತು. ಪೊಲೀಸ್, ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ, ಸ್ಕೌಟ್ ಗೈಡ್ಸ್, ಕಬ್ ಗೈಡ್ಸ್  ಬುಲ್ ಬುಲ್ ವಿವಿಧ ತುಕಡಿಗಳ ಪಥ ಸಂಚಲನ ನಡೆಯಿತು ಬಳಿಕ ಬಂಟ್ವಾಳ ಪುರಸಭೆ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here