ಬಂಟ್ವಾಳ, ಅ. ೩೧: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಕೊಡಂಗಾಯಿ-ಟಿಪ್ಪುನಗರ ಇದರ ಅಧ್ಯಕ್ಷ ಶೈಖುನಾ ಅಬೂಬಕರ್ ಮುಸ್ಲಿಯಾರ್ ಕೊಡಂಗಾಯಿ ಅವರು ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪತ್ನಿಯರು, ಇಬ್ಬರು ಪುತ್ರರು, ಎಂಟು ಮಂದಿ ಪುತ್ರಿಯರನ್ನು, ಝರ್ವಾನಿ ಮಸೀದಿ ಇಮಾಂ ಮುಹಮ್ಮದ್ ಮುಸ್ಲಿಯಾರ್ ಉಸ್ತಾದ್, ಅಪಾರ ಶಿಷ್ಯರನ್ನು ಅಗಲಿದ್ದಾರೆ. ಉಸ್ತಾದರು ಇಂದು ಮುಂಜಾನೆ ಹೃದಯಾಘತದಿಂದ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಮೂಲತಃ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪರಪ್ಪು ನಿವಾಸಿಯಾದ ಅಬೂಬಕರ್ ಉಸ್ತಾದ್ ಅವರು, ದೀನಿ ಸೇವೆಗಾಗಿ ಕೊಡಂಗಾಯಿ ಎಂಬ ಕುಗ್ರಾಮವನ್ನು ಆಯ್ಕೆ ಮಾಡಿದ ಬಳಿಕ ಇಲ್ಲಿನ ಹೆಸರಿನಲ್ಲೇ ಖ್ಯಾತರಾದರು. ಕೊಡಂಗಾಯಿ ಜುಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಖತೀಬರಾಗಿ ಅಲ್ಲಿನ ಮದ್ರಸದಲ್ಲಿ ಅಧ್ಯಾಪಕರಾಗಿ ಸೇವೆಗೈದು, ನೂರಾರು ವಿದ್ವಾಂಸರು, ಪದವೀಧರು ಇವರ ಶಿಷ್ಯರಾಗಿದ್ದಾರೆ.
ಅನಿವಾಸಿ ಭಾರತೀಯರಿಗೆ ಹೆಚ್ಚು ಪರಿಚಿತ:
ಆಧ್ಯಾತ್ಮಿಕ ರಂಗದ ಅನುಗ್ರಹೀತ ಆಲಿಮ್ ಶೈಖುನಾ ಅಬೂಬಕರ್ ಉಸ್ತಾದ್ ಕೊಡಂಗಾಯಿ ಅವರು
ಅನಿವಾಸಿ ಭಾರತೀಯರಿಗೆ ಹೆಚ್ಚು ಪರಿಚಿತ. ಸುದೀರ್ಘವಾದ ತನ್ನ ಬದುಕನ್ನು ದೀನೀ ಮತ್ತು ಜನ ಸೇವೆಗಳಿಗೆ ಮೀಸಲಿಟ್ಟ ಉಸ್ತಾದರನ್ನು ಕಂಡರೆ ಯಾರೂ ಕೂಡ ಗೌರವಿಸದೇ ಇರಲಾರರು. ನಮ್ಮೆಡೆಯಲ್ಲಿ ಆಧ್ಯಾತ್ಮಿಕ ವೇದಿಕೆಯಲ್ಲಿ ಹೆಚ್ಚು ಪ್ರಖ್ಯಾತರಾದ ಓಲೆಮುಂಡೋವು ಉಸ್ತಾದ್ ಅವರು ಕೂಡ ಉಪಸ್ಥಿತರಿರುವ ಯಾವುದೇ ಮಜ್ಲಿಸಿನಲ್ಲಿ ದುಆ ಮಾಡಲು ಮತ್ತು ನಾಯಕತ್ವ ವಹಿಸಲು ಅಬೂಬಕರ್ ಉಸ್ತಾದರವರನ್ನೇ ಹೇಳುತ್ತಿದ್ದರು ಎಂದು ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ಅವರು ತಿಳಿಸಿದ್ದಾರೆ.
ದಾರುನ್ನಜಾತ್ ಎಂಬ ಕನಸಿನ ಕೂಸು:
ಶಿಕ್ಷಣವನ್ನು ಅದಮ್ಯವಾಗಿ ಪ್ರೀತಿಸುವ ಉಸ್ತಾದರು ಕೊಡಂಗಾಯಿ ಸಮೀಪದ ಟಿಪ್ಪು ನಗರ ಎಂಬ ಮುಸ್ಲಿಂ ಬಾಹುಳ್ಯವಿರುವ ಪ್ರದೇಶದಲ್ಲಿ ಸ್ವಂತ ಖರ್ಚಿನಿಂದ ಸ್ಥಳವನ್ನು ಖರೀದಿಸಿ ದಾರುನ್ನಜಾತ್ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಊರ-ಪರವೂರ ನೂರಾರು ಮಕ್ಕಳಿಗೆ ದೀನೀ ವಿದ್ಯೆಯನ್ನು ಲೌಕಿಕ ಶಿಕ್ಷಣದೊಂದಿಗೆ ನೀಡುತ್ತಾ ಅವರ ಸಂಪೂರ್ಣ ಖರ್ಚುವೆಚ್ಚವನ್ನು ಬರಿಸುತ್ತಿದ್ದರು. ದೊಡ್ಡಮಟ್ಟದಲ್ಲಿ ದರ್ಸ್ ಬೇಕೆಂದು ಬಯಸುತ್ತಿದ್ದ ಅವರ ಕನಸು ಇದೀಗ ನನಸಾಗಿದೆ. ಸುಮಾರು ೨೦ರಷ್ಟು ಪರವೂರ ವಿದ್ಯಾರ್ಥಿಗಳು ಕಲಿಯುವ ಮದ್ರಸದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಅದರೊಂದಿಗೆ ಮಾಸಿಕವಾಗಿ ದಿಕ್ರ್ ಮಜ್ಲಿಸ್‌ಗಳು, ದೀನಿ ತರಗತಿಗಳು, ಸಾಪ್ತಾಹಿಕವಾಗಿ ಸ್ವಲಾತ್ ಮಜ್ಲಿಸ್‌ಗಳು ಉಸ್ತಾದರ ಮೇಲ್ನೋಟದಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ಅವರು ತಿಳಿಸಿದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here