ಪುತ್ತೂರು: ಕರಾವಳಿ ಜಿಲ್ಲೆಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ಮಹಾ ಚಂಡಮಾರುತ ಅಪ್ಪಳಿಸಲು ಸಿದ್ಧವಾಗಿದೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ‘ಕ್ಯಾರ್’ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಂಗಳೂರು, ಉಡುಪಿ, ಉತ್ತರ ಕನ್ನಡದ ವಿವಿಧೆಡೆ ಮಳೆಯಿಂದ ಜನರು ಪರದಾಡುವಂತಾಗಿತ್ತು.
ಕರಾವಳಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದಿಂದ ಅರಬ್ಬಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 100ಕ್ಕೂ ಅಧಿಕ ಬೋಟ್ ಗಳಿಗೆ ನವ ಮಂಗಳೂರು ಬಂದರಿನ ಸುರಕ್ಷಿತ ವಲಯದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಮೀನುಗಾರಿಕೆಯಲ್ಲಿ ತೊಡಗಿದ್ದ 100ಕ್ಕೂ ಹೆಚ್ಚು ಬೋಟ್ ಹಾಗೂ ಅದರಲ್ಲಿದ್ದ 1000ಕ್ಕೂ ಅಧಿಕ ಮೀನುಗಾರರಿಗೆ ತಟ ರಕ್ಷಣಾ ಪಡೆಯ ಸಹಕಾರದಲ್ಲಿ ಆಶ್ರಯ ನೀಡಲಾಗಿತ್ತು. ಇದೀಗ ಲಕ್ಷದ್ವೀಪ ಬಳಿ ವಾಯುಭಾರ ಕುಸಿತ ಹಿನ್ನೆಲೆ ಕರಾವಳಿ ತೀರಕ್ಕೆ ಮಹಾ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರದವರೆಗೆ (ನ.1) ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ. ನಾಳೆಯವರೆಗೆ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ. ಈ ಬಗ್ಗೆ ಕೋಸ್ಟ್​ ಗಾರ್ಡ್​ ಆಪರೇಟಿಂಗ್ ಕೇಂದ್ರದಿಂದ ಸೂಚನೆ ಬಂದಿದೆ.
ಮಂಗಳೂರು ಸಮುದ್ರ, ಬಂದರು, ಉಡುಪಿಯ ಸಮುದ್ರದ ತೀರದಲ್ಲಿ ಎಚ್ಚರ ವಹಿಸಲು ಸೂಚಿಸಲಾಗಿದೆ. ಈ ಭಾಗದಲ್ಲಿ ಅಪಾಯವನ್ನು ತಡೆಗಟ್ಟಲು ಕೋಸ್ಟ್​ ಗಾರ್ಡ್​ ಸನ್ನದ್ಧವಾಗಿದೆ. ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ನೌಕೆ ವಿಕ್ರಮ್, ಅಪೂರ್ವ, ಅಮರ್ಥ್ಯ, ರಾಜ್ ದೂತ್, ಸಾವಿತ್ರಿ ಪುಲೆ ನೌಕೆ ಸನ್ನದ್ಧವಾಗಿದೆ. ಬೋಟ್​ಗಳನ್ನು ಕೋಸ್ಟ್​ ಗಾರ್ಡ್​ ಹಿಂದಕ್ಕೆ ಕಳುಹಿಸುತ್ತಿದ್ದಾರೆ.ಇದರ ಜೊತೆಗೆ, ಕ್ಯಾರ್ ಚಂಡಮಾರುತ ಭಾರತದ ಕರಾವಳಿಯಿಂದ ದೂರ ತೆರಳುತ್ತಿದೆಯಾದರೂ ಅದರ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ. ರಾಯಲಸೀಮೆ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಹೇ ಮತ್ತು ಲಕ್ಷದ್ವೀಪದಲ್ಲಿ ಭಾರಿ ಮಳೆಯಾಗಲಿದ್ದು, ದಕ್ಷಿಣ ಕರ್ನಾಟಕದ ಒಳನಾಡಿನಲ್ಲೂ ಭಾರಿ ಮಳೆಯಾಗಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here