ದೈವ ನೇಮಗಳು ಹಳ್ಳಿ ಮನೆಗಳ ಜನರ ಮನರಂಜನೆಯೂ ಹೌದು, ಧಾರ್ಮಿಕ ಆಚರಣೆಯೂ ಹೌದು. ಕೇರಳದಲ್ಲಿ ತೈಯ್ಯಂ ಎಂದು ಕರೆಯಲ್ಪಡುವ ಜನಪದೀಯ ನೃತ್ಯ ಪ್ರಕಾರವೇ ದೈವ ನರ್ತನ. ತುಳು ಸೀಮೆಯಲ್ಲಿ ವಿಶೇಷವಾಗಿ ದೈವಾರಾಧನೆಯನ್ನು ಕಾಣಬಹುದು. ಭೂತದ ಕೋಲ, ಭೂತಕ್ಕೆ ಕೋಲ, ನೇಮ, ಭೂತದ ನೇಮ, ದೈವಗಳಿಗೆ ನೇಮ ಇತ್ಯಾದಿ ಹೆಸರಿನಿಂದ ತುಳುವರು ದೈವನೇಮವನ್ನು ಗುರುತಿಸುತ್ತಾರೆ. ಭೂತ ಎಂದರೆ ಕಾಲವೂ ಹೌದು, ಕೋಲವೂ ಹೌದು. ಭೂತ ಎಂಬ ಪದಕ್ಕೆ ಪರಿಶುದ್ಧ ಎಂಬ ಅರ್ಥವೂ ಇದೆ. ಯಕ್ಷಗಾನ ಕಲೆಯನ್ನು ಹೋಲುವ ಉಡುಪು ಧರಿಸಿ ನರ್ತನ ಮಾಡುವ ಈ ಕಲೆ ವಂಶಪಾರಂಪರ್ಯವೆಂದರೂ ತಪ್ಪಾಗದು. ಕೆಲವು ದೈವಗಳಿಗೆ ಹಗಲು ನೇಮ ನೀಡುವರಾದರೆ ಇನ್ನೂ ಕೆಲವು ದೈವಗಳನ್ನು ರಾತ್ರಿಯ ಸಮಯದಲ್ಲಿ ನೇಮ ನೀಡುವರು. ದೈವಗಳಲ್ಲಿ ರಾಜನ್‌ದೈವಗಳು ವಿಶೇಷ ಪೂಜ್ಯತೆಯನ್ನು ಹೊಂದಿವೆ.

ಸಾಮಾನ್ಯವಾಗಿ ದೇವಾಲಯಗಳಲ್ಲಿ ವಾರ್ಷಿಕ ಜಾತ್ರೋತ್ಸವದಂದು ದೈವಗಳಿಗೆ ನೇಮ ಸೇವೆ ನಡೆಯುತ್ತದೆ. ಕೆಲವು ಮನೆಗಳಲ್ಲೂ ಪರಂಪರಾಗತವಾಗಿ ದೈವಗಳ ನರ್ತನ ಸೇವೆ ನಡೆಯುತ್ತದೆ. ಕೆಲವೆಡೆಗಳಲ್ಲಿ ಆಯಾ ಸಮಾಜ ಬಾಂಧವರು ಸೇರಿ ದೈವ ನೇಮಗಳಿಗೆ ವಿಶೇಷ ಗುಡಿ ನಿರ್ಮಿಸಿ, ಪ್ರತೀ ವರ್ಷವೂ ಊರವರೆಲ್ಲರನ್ನೂ ಒಳಗೊಳಿಸಿಕೊಂಡು ನೇಮೋತ್ಸವಗಳನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಾರೆ. ಇಂದಿನ ಜನಾಂಗ ಮತ್ತು ಹಿಂದಿನ ಎಂದರೆ ಶತ ಶತಮಾನ ಪೂರ್ವ ಜನಾಂಗಗಳ ಯೋಚನೆಗಳು, ವೈಚಾರಿಕತೆಗಳ ನಡುವೆ ಅಜಗಜಾಂತರವಿದೆ. ಇಂದು ಭೂತ ಎಂಬ ಪದವನ್ನು ತೌಳವರು ಸ್ವೀಕರಿಸುವುದಿಲ್ಲ. ಧಾರ್ಮಿಕ ಚಿಂತಕರಿಗೆ ಅದು ಮಲಿನ ಪದ. ದೈವ ಎಂಬುದೇ ಕುಲೀನ ಪದ. ಆದುದರಿಂದಲೇ ಭೂತದ ಕೋಲ ಎಂಬ ಪದವನ್ನು ಬದಿಗೊತ್ತಿ ದೈವ ನೇಮ ಎನ್ನುವರು.
ದೈವಬಲ ಎನ್ನುತ್ತೇವೆ. ದೈವದ ಒಲವಿರುವವರಿಗೆ ಗೆಲುವು ಶತಃಸಿದ್ಧ ಎಂಬ ಅಂಬೋಣವೂ ಇದೆ. ಮಾರಣಾಂತಿಕ ಕಾಯಿಲೆಗಳಿಗೊಳಗಾದಾಗ, ಮನೆಯಿಂದ ಕಳ್ಳತನವಾದಾಗ ಅಥವಾ ಇತರೆ ಯಾವುದೇ ಸಮಸ್ಯೆಗಳಿಗೊಳಗಾದಾಗ ಮನೆಯಲ್ಲಿರುವ ಹಿರಿಯರು ದೈವಕ್ಕೆ ನೇಮ ನೀಡುವ ಹರಕೆ ಹೇಳುವುದಿದೆ. ಕಾಯಿಲೆ ಗುಣವಾದರೆ ಅಥವಾ ಕಳುವಾದ ಸೊತ್ತು ಮತ್ತೆ ಕೈಸೇರಿದಾಗ ದೈವಕ್ಕೆ ನೇಮ ಕೊಟ್ಟು ಹರಕೆಯ ಪ್ರಾರ್ಥನೆ ಸಲ್ಲಿಸಿ ತೃಪ್ತರಾಗುತ್ತಾರೆ. ದೈವಕ್ಕೆ ಅದ್ಭುತವಾದ ಶಕ್ತಿಯಿದೆ, ಕಾರಣೀಕವಿದೆ ಎಂಬ ನಂಬುಗೆ ಜನಮಾನಸದಲ್ಲಿ ಇಂದೂ ಬಲವಾಗಿ ಉಳಿದುಕೊಂಡಿದೆ. ದೀರ್ಘಾವಧಿಯಲ್ಲಿ ಕಂಕಣ ಭಾಗ್ಯ ಕೂಡದೇ, ಮದುವಯಾಗದ ಎಷ್ಟೋ ಗಂಡಸರು ಮತ್ತು ಹೆಂಗಸರು ದೈವಕ್ಕೆ ಹರಕೆ ಹೊತ್ತು ದಾಂಪತ್ಯ ಭಾಗ್ಯ ಪಡೆದ ಉದಾಹರಣೆಗಳನ್ನು ನಮ್ಮ ಸುತ್ತ ಮುತ್ತ ಇಂದೂ ಕಾಣಬಹುದಾಗಿದೆ. ಯಾವುದಕ್ಕೂ ನಂಬಿಕೆ ಮುಖ್ಯ, ದೈವದ ನುಡಿಯೇ ಹಾಗೆ: ’ನಂಬಿನಾಯಾಗ್ ಇಂಬು ಕೊರ್ಪೆ ಅಂತೆಯೇ ದೈವವನ್ನು ನಂಬಿದವರು ಸೋಲರೆಂಬುದೇ ಸಂಸ್ಕಾರಿಗಳ ಮಾತು.

ಊರೋಳಗೆ ನೆರೆ, ಬರ, ಮಾರಿ ರೋಗಗಳು ಬಂದಾಗಲೂ, ಜನ ಜಾನುವಾರುಗಳಿಗೆ ಆಪತ್ತೊದಗಿದಾಗಲೂ ಊರ ಪ್ರಮುಖರು ಒಂದೆಡೆ ಸೇರಿ, ಅಥವಾ ದೈವ ನರ್ತನವಾಗುವಲ್ಲಿಗೆ ಹೋಗಿ ಊರಿನ ಸಮಸ್ಯೆಗಳನ್ನು ಅರಿಕೆ ಮಾಡಿ, ಊರ ತೊಂದರೆಯನ್ನು ನೀಗಿದರೆ, ನೇಮ ಕೊಡುವೆವು ಎಂದು ದೈವದೊಂದಿಗೆ ಪ್ರಾರ್ಥಿಸುತ್ತಾರೆ, ದೈವ ಅಪ್ಪಣೆ ನೀಡುತ್ತದೆ. ಊರ ಸಮಸ್ಯೆಗೆ ಪರಿಹಾರ ಕೊಡುತ್ತೇನೆ. ನೀವು ಮಾತುಳಿಸಿ ಎಂದು ನುಡಿಯುತ್ತದೆ. ಊರಿನಲ್ಲಿ ದೈವದ ಕೃಪಾದೃಷ್ಟಿಯಿಂದ ಆಪತ್ತುಗಳಡಗಿ ಸುಖ ಶಾಂತಿ ನೆಲೆಸಿದಾಗ ಸಾರ್ವಜನಿಕವಾಗಿ ನೇಮ ಕೊಡಲಾಗುತ್ತದೆ.
ದೈವ ನರ್ತನವು ನಯನ ಮನೋಹರ. ಅದನ್ನು ನೋಡಲು ಕಣ್ಣುಗಳೆರಡು ಸಾಲದು. ದೈವ ನರ್ತನದ ವರ್ಣನೆ ಮಾಡಲು ಈ ಬದುಕೇ ಸಾಲದು. ಕೇವಲ ನರ್ತನ ಮಾತ್ರವಲ್ಲ, ದೈವದ ನುಡಿಗಟ್ಟುಗಳು ಅದರದೇ ಆದ ಪಾರಿಭಾಷಿಕತೆ ಹೊಂದಿದೆ. ದೈವದ ಪಾಡ್ದನ ಕೇಳಲು ಬಲು ಇಂಪು. ಪಾಡ್ದನಗಳು ಜನಪದವಾದರೂ ಅವುಗಳು ಅದರದೇ ಆದ ಸಾಹಿತ್ಯ, ರಾಗ, ತಾಳ ಲಯಗಳನ್ನು ಹೊಂದಿವೆ. ದೈವ ನರ್ತನದಲ್ಲಿ ದೈವಾವೇಷ ಎನ್ನುವುದು ಅತೀ ವೈಭವದ ಕ್ಷಣ. ದೈವದ ಮುಂದೆ ಗುರಿಕಾರರು ಅಥವಾ ತಂತ್ರಿಗಳು ಪಾರಿ ಹೇಳುತ್ತಾರೆ. ಈ ಪಾರಿಯು ತನ್ನದೇ ಆದ ಶೈಲಿ, ಭಾಷಾ ಪ್ರಯೋಗಗಳನ್ನು ಹೊಂದಿದೆ. ನಿರರ್ಗಳವಾದ ವಾಕ್‌ಝರಿಯೊಂದಿಗೆ ಹೇಳುವ ಪಾರಿ ಆಲಿಸುವವನಿಗೆ ರಸದೌತಣ. ಅರ್ಥೈಸುವವನಿಗೆ ಕಬ್ಬಿಣದ ಕಡಲೆ. ಪಾರಿಯನ್ನು ನಿರರ್ಗಳವಾಗಿ ಮತ್ತು ವೇಗವಾಗಿ ಹೇಳಲಾಗುತ್ತದೆ. ಪಾರಿಯು ಅಂತ್ಯಗೊಳ್ಳುತ್ತಿರುವಂತೆ ದೈವ ನರ್ತಕನ ದೇಹದೊಳಗೆ ದೈವದ ಪ್ರವೇಶವಾಗುತ್ತದೆ. ಮಾಗಣೆಯ ಭಕ್ತರು ಆ ಸಂದರ್ಭದಲ್ಲಿ ಕೈ ಮುಗಿಯುತ್ತಾ ದೈವದ ಮೇಲೆ ಅರಳು ಹಾಕುತ್ತಾರೆ, ಕೆಲವೆಡೆ ಅಕ್ಕಿ ಕಾಳು ಹಾಕುತ್ತಾರೆ, ಕೈಮುಗಿದು ನಿಲ್ಲುತ್ತಾರೆ. ಆವೇಶವಿಳಿಯುತ್ತಿದ್ದಂತೆ ದೈವಧಾರಿಯು ಶಕ್ತಿಗುಂದುತ್ತಾನೆ. ಅಲ್ಲದೆ ದೈವಕ್ಕೆ ನೀಡಲಾದ ನರ್ತನ ಸೇವೆಯ ಮಹಾ ಕಳೆಯೂ ಪರಿಪೂರ್ಣವಾಗುತ್ತದೆ.
ದೈವ ನೇಮದಲ್ಲಿ ಪ್ರಮುಖ ಘಟ್ಟಗಳು ಹೀಗಿವೆ. ಭೂತ ನರ್ತನ ಧಾರಿಗೆ ಅಥವಾ ನರ್ತನಧಾರಿಗಳಿಗೆ ವೀಳೆಯ ನೀಡುವುದು. ಇದು ಆತನಿಗೆ ದೈವ ನರ್ತನ ಮಾಡಲು ಊರವರು ಸಮ್ಮತಿ ನೀಡುವುದಾಗಿದೆ. ಆತನು ಊರ ದೈವ ದೇವರುಗಳನ್ನು, ಹಿರಿಯರನ್ನು ವಂದಿಸಿ ಅನುಮತಿ ಕೋರುತ್ತಾನೆ/ರೆ. ಅದೇ ಸಂದರ್ಭದಲ್ಲಿ ಅವನಿಗೆ ಸ್ನಾನ ಮಾಡಿ ಪರಿಶುದ್ಧಿಯಾಗಲು ಎಣ್ಣೆ ನೀಡಲಾಗುತ್ತದೆ. ಈ ಎರಡೂ ವಿಧಿಗಳನ್ನು ತುಳುವಿನಲ್ಲಿ ಎಣ್ಣೆ ಬೂಳ್ಯ ಕೊರ್ಪುನ ಎನ್ನುವರು. ಸ್ನಾನ ಮಾಡಿ ಬಂದು ದೈವದ ಭಾಂಡಾರದ ಮನೆಗೆ ನಮಿಸಿ ಪ್ರಾರ್ಥಿಸಿ ಎಲ್ಲರ ಅನುಮತಿ ಪಡೆದು ದೈವ ಶೃಂಗಾರ ಕಾರ್ಯ ಆರಂಭಗೊಳ್ಳುತ್ತದೆ. ಇದು ಬೇರೆ ಬೇರೆ ದೈವಗಳಿಗೆ ಬೇರೆ ಬೇರೆ ಪೋಷಾಕು ಮತ್ತು ಮುಖವರ್ಣಿಕೆಗಳನ್ನು ಹೊಂದಿರುತ್ತದೆ. ದೈವದ ಕಾಲಿಗೆ ಗಗ್ಗರ- ಗೆಜ್ಜೆ ಕಟ್ಟುವುದೂ ಒಂದು ಕಾರ್ಯಕ್ರಮ. ಇಲ್ಲೂ ಸುತ್ತೂರ ಪ್ರಮುಖರ ಹಿರಿಯರ ಅನುವು ಪಡೆಯಲಾಗುತ್ತದೆ. ದೈವದ ಪ್ರತಿಯೊಂದು ಮಾತು-ಕತೆಯೂ ಅದರದೇ ಆದ ನುಡಿಗಳನ್ನೊಳಗೊಂಡಿರುತ್ತದೆ. ದೈವದ ಭಾಷೆಯ ಪದಕೋಶವೇ ಪ್ರತ್ಯೇಕವಿದೆ. ನಮ್ಮ ಭಾಷಾ ಪದಕೋಶ ದೈವಕ್ಕೆ ನೆರವಾಗದು. ದೈವದ ಆಹಾರ ಸೇವನೆಗೆ ಬಾರಣೆ ಎನ್ನುವರು, ಇಲ್ಲಿಯೂ ಎಲ್ಲರ ಅನುಮತಿ ಪಡೆಯಲಾಗುತ್ತದೆ. ಹೀಗೆ ದೈವ ನರ್ತನದಲ್ಲಿ ವರ್ಣಾಲಂಕಾರ ಪೂರ್ವ ವಿಧಿಗಳಿಂದ ಮುಕ್ತಾಯದ ತನಕ ಬೇರೇ ಕಾರ್ಯಕ್ರಮಗಳಿರುತ್ತವೆ. ಪ್ರತೀ ಕಾರ್ಯದಲ್ಲೂ ಅನುಮತಿ ಪಡೆದು ಮುಂದುವರಿಯುವುದೇ ವಿಶೇಷ.
ಬೆಂಕಿಯೊಂದಿಗೆ ನರ್ತನ ಮಾಡುವ ಮುಕಾಂಬಿಕಾ ಗುಳಿಗ ದೈವ, ಕೆಂಡದ ಮೇಲೆ ನರ್ತಿಸುವ ವಿಷ್ಣು ಮೂರ್ತಿ ದೈವ, ಸೂಡಿಯೊಂದಿಗೆ ನರ್ತಿಸುವ ಪೊಟ್ಟ ಗುಳಿಗ ದೈವಗಳಂತಹ ದೈವ ಸೇವೆ ಸಲ್ಲಿಸುವಾಗ ಬಹಳ ಎಚ್ಚರಿಕೆಯೂ ಬೇಕಾಗುತ್ತದೆ. ಅವೆಲ್ಲವೂ ಆನಂದ ಮಯವಾಗುತ್ತಿರುವಂತೆಯೇ ಭಯವನ್ನೂ ನಮ್ಮಲ್ಲಿ ಸೃಷ್ಟಿಸುತ್ತದೆ. ಕೆಲವು ದೈವ ನೇಮಗಳು ಕೇವಲ ನೇಮಕ್ಕಷ್ಟೇ ಸೀಮಿತವಾದರೆ ಇನ್ನು ಕೆಲವು ದೈವ ನೇಮ ಪರಿಪೂರ್ಣವಾಗಲು ಸಾರ್ವಜನಿಕ ಅನ್ನ ಸಂತರ್ಪಣೆಯೂ ಬೇಕಾಗುತ್ತದೆ.
ದೈವದ ಪ್ರಸಾದವನ್ನು ತುಳುನಾಡಿನಲ್ಲಿ ’ ಬೂಳ್ಯ ಎನ್ನುವರು. ಬಹುತೇಕ ದೈವಗಳಿಗೆ ಅರಶಿನ ಹುಡಿಯೇ ಪ್ರಸಾದ. ದೈವದ ಹುಂಡಿಗೆ ಕಾಣಿಕೆ ಹಾಕಿ ಪ್ರಸಾದ ಪಡೆಯುತ್ತಾರೆ. ಪ್ರತಿಯೊಬ್ಬರಿಗೆ ಪ್ರಸಾದ ನೀಡುವಾಗಲೂ ಭೂತ ಶುಭ ಮಾತಿನ ಒಕ್ಕಣೆಗಳೊಂದಿಗೆ ಪ್ರಸಾದ ನೀಡಿ ಹರಸುತ್ತದೆ. ದೈವ ನೇಮ ಅಥವಾ ಭೂತದ ಕೋಲ ಕರಾವಳಿಯ ಜಾನಪದ ಕಲೆ.ಗೀ ಕಲೆಯ ಕೊಲೆಯಾಗದಂತೆ ಎಂದರೆ ಈ ಕಲೆ ಅಳಿಯದಂತೆ ನೋಡಿಕೊಳ್ಳುವ ಕರ್ತತ್ವ ನಮಗಿದೆ. ದೈವ ಕಲೆ ಉಳಿಸಿ ಬೆಳೆಸುವ ಬದ್ಧತೆ ನಮಗೆ ಬೇಕು. ದೈವ ನರ್ತನ ಕಲೆಯೂ ಹೌದು. ಬದುಕಿನ ಬಲೆಯೂ ಹೌದು.

 

ಲೇಖನ : ರಮೇಶ ಎಂ ಬಾಯಾರು, ಎಂ.ಎ,ಬಿ.ಎಡ್
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here