ಯಾದವ ಕುಲಾಲ್
ಬಿ.ಸಿ.ರೋಡ್ : ವಿಶಾಲವಾದ ಅಂಗಳ, ಸುತ್ತಲೂ ಗಾರ್ಡನ್‌ಗಳು, ಒಂದು ಬದಿಯಲ್ಲಿ ತರಕಾರಿಗಳ ತೋಟ, ಬಾಳೆ ತೋಟ, ಮತ್ತೊಂದು ಕಡೆ ಮಕ್ಕಳಿಗೆ ಆಟವಾಡಲು ಇರುವ ಉಯ್ಯಾಲೆ, ಮೇಲೆ ಕೆಳಗೆ ಹೋಗುವ ಬಂಡಿ.. ಅಲ್ಲಲ್ಲಿ ಇರುವ ತೆಂಗಿನ ಮರಗಳು ಇದರಿಂದಾಗಿ ಬಿಸಿಲಿನ ತಾಪ ಬೀಳದೆ ಪರಿಸರವು ನೆರಳಿನಿಂದ ಕೂಡಿರುವುದು. ಮುಂದುವರಿದು ಹೋದರೆ ಗೋಡೆಯಲ್ಲಿ ವಿಜ್ಞಾನದ ಚಿತ್ರಗಳು, ವಿಶಾಲವಾದ ಕ್ರೀಡಾಂಗಣ. ಇದು ಎಲ್ಲೋ ಪಾರ್ಕ್ ಅಥವಾ ಎಕ್ಸ್‌ಬಿಶನ್‌ನಿಗೆ ಬಂದಿದ್ದೇವೆ ಎಂದುಕೊಂಡರೆ ಅದು ತಪ್ಪು ಕಲ್ಪನೆ. ಈ ಉತ್ತಮ ಪರಿಸರ ಕಂಡು ಬರುವುದು ಒಂದು ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ.
ಇರ್ವತ್ತೂರು ಗ್ರಾಮದ ಮೂಡುಪಡುಕೋಡಿ ಸರಕಾರಿ ಪ್ರಾಥಮಿಕ ಶಾಲೆಯು ಆಲದಪದವು-ವೇಣೂರು ರಸ್ತೆ ಬದಿಯಲ್ಲೇ ಇರುವುದರಿಂದ ದಾರಿಯಲ್ಲಿ ಬಸ್ಸಿನಲ್ಲಿ ಹೋಗುವವರಿಗೆ ಈ ಶಾಲೆಯತ್ತ ಥಟ್ ಅಂತ ಕಣ್ಣಿಗೆ ಗೋಚರವಾಗುತ್ತದೆ. ಸುಸಜ್ಜಿತವಾದ ಭದ್ರತಾ ಗೋಡೆ, ಗೇಟು, ಸ್ವಾಗತಗೋಪುರ, ಹಚ್ಚಹಸಿರಿನ ಸುಂದರ ಪರಿಸರದ ನಡುವೆ 68 ವರ್ಷ ಇತಿಹಾಸವಿರುವ ಸರಕಾರಿ ಶಾಲೆ ಸೊಗಸಾಗಿ ಕಾಣುತ್ತದೆ. ಸುಮಾರು 2.5 ಎಕ್ರೆ ಜಮೀನು ಹೊಂದಿರುವ ಸರಕಾರಿ ಶಾಲೆಯಲ್ಲಿ 280 ವಿದ್ಯಾರ್ಥಿಗಳಿದ್ದಾರೆ.
ಈ ಶಾಲೆಗೆ ಪೋಷಕರೇ ಸಾಥ್ : ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಲು ಸರಕಾರ ನಾನಾ ಯೋಜನೆಗಳನ್ನು ಅಳವಡಿಸಿಕೊಂಡಿರುತ್ತದೆ. ಅದನ್ನು ಕಾರ್ಯರೂಪಕ್ಕೆ ತರಲು ಅಧಿಕಾರಿ ವರ್ಗ, ಶಿಕ್ಷಕ ವೃಂದ ಅದರ ಜೊತೆ ವಿದ್ಯಾರ್ಥಿಗಳ ಪೋಷಕರ ಶಾಲಾಭಿವೃದ್ಧಿ ಸಮಿತಿ ಶ್ರಮಿಸುತ್ತದೆ. ಈ ಶಾಲೆಯಲ್ಲಂತೂ ಶಾಲಾಭಿವೃದ್ಧಿ ಸಮಿತಿಯೇ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸುತ್ತದೆ. ತಮ್ಮ ಊರಿನ ಶಾಲೆಯ ಕಾರ್ಯಕ್ರಮವನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ಜವಾಬ್ದಾರಿ ಹೊತ್ತು ನಿರ್ವಹಿಸುತ್ತಿರುವ ಪೋಷಕರಿದ್ದಾರೆ. ತಮ್ಮೂರಿನ ಸರಕಾರಿ ಶಾಲೆಯ ಅಭಿವೃದ್ಧಿ ದೃಷ್ಠಿಯಿಂದ ಸ್ಥಳೀಯರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಿಂದ ಸರಕಾರಿ ಶಾಲೆ ಸರಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ.
ಎಲ್ಲ ಕಡೆ ಆಂಗ್ಲಮಾಧ್ಯಮ ಶಾಲೆಗಳ ಅಬ್ಬರವೇ ಕಣ್ಣಿಗೆ ರಾಚುತ್ತಿರುವುದರಿಂದ ಗ್ರಾಮೀಣ ಪ್ರದೇಶದ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯಾವುದೇ ರೀತಿಯ ಕೀಳರಿಮೆ ಉಂಟಾಗಬಾರದು ಎಂಬ ಕಾರಣದಿಂದ  ಪುಟಾಣಿಗಳಿಗೆ ತಿರುಗುವ ಕುರ್ಚಿ, ಚಿಣ್ಣರ ಕೊಠಡಿಗಳನ್ನು ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಂಸ್ಕೃತಿಕ, ಕಲೆ, ಸಾಹಿತ್ಯ ಚಟುವಟಿಕೆಗಳು, ಸ್ಕೌಟ್, ಗೈಡ್ಸ್, ಸೇವಾದಳ, ಬುಲ್ ಬುಲ್ ಇಲಾಖಾ ಕಾರ್ಯಕ್ರಮಗಳು ಪೋಷಕರ ಮುತುವರ್ಜಿಯಿಂದ, ಜಜನಪ್ರತಿನಿಧಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಾ ಇದೆ. ಇಲ್ಲಿನ ವಿದ್ಯಾರ್ಥಿಗಳೇನೂ ಕಡಿಮೆ ಇಲ್ಲ. ಕ್ರೀಡೆಂiiಲ್ಲಿ ಗುಂಪು ತಂಡವು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದರೆ ವೈಯಕ್ತಿಕವಾಗಿಯೂ ಕ್ರೀಡೆಯಲ್ಲಿ ಶಾಲೆಗೆ ಹೆಸರು ತಂದಿದ್ದಾರೆ. ಆಂಗ್ಲ ಭಾಷೆಯಲ್ಲಿ ಬೋಧನೆ, ಸುಸಜ್ಜಿತ ಕಂಪ್ಯೂಟರ್ ಘಟಕವನ್ನೂ ಹೊಂದಿದೆ. ಶಿಕ್ಷಣ ಇಲಾಖೆಯ ಕ್ಲಸ್ಟರ್, ತಾಲೂಕು ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿ ಶಿಕ್ಷಣ ಇಲಾಖೆಯಲ್ಲೇ ಭೇಷ್ ಅನಿಸಿದೆ. ಇನ್ನಷ್ಟು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದೆ.
***
ಮೂಡುಪಡುಕೋಡಿ ಶಾಲೆಯಲ್ಲಿ ಈಗ ಎಲ್‌ಕೆಜಿ, ಯುಕೆಜಿ ಪ್ರಾರಂಭವಾಗಿರುವುದರಿಂದ ಶಿಕ್ಷಕರ ಕೊರತೆ ಹಾಗೂ ಸುಸಜ್ಜಿತವಾದ ಸಭಾಂಗಣ ಅಗತ್ಯ ಇದೆ. ಮಕ್ಕಳ ಸಂಖ್ಯೆ ಜಾಸ್ತಿ ಇರುವುದರಿಂದ ಶಾಲಾ ಕೊಠಡಿಗಳು ಹೆಚ್ಚು ಬೇಕಾಗಿದೆ. ಶಾಲಾ ಅದ್ಯಾಪಕರ ವೃಂದ ಮದ್ಯಾಹ್ನ ಬಿಸಿಯೂಟಕ್ಕೆ ಬೇಕಾಗುವಂತಹ ತರಕಾರಿಗಳನ್ನು ಅಲ್ಲಿಯೇ ಬೆಳೆಸುತ್ತಾರೆ. ಸುಸಜ್ಜಿತವಾದ ಗಾರ್ಡನ್ ಹಾಗೂ ವಿವಿಧ ಸಂಘ ಸಂಸ್ಥೆ ಹಾಗೂ ಎನ್‌ಎಸ್‌ಎಸ್ ಕ್ಯಾಂಪಿನಿಂದ ಒಳ್ಳೆಯ ಕ್ರೀಡಾಂಗಣ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಅದರ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರರೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
– ರಮೇಶ ಶೆಟ್ಟಿ ಬಜೆ, ಹಳೆ ವಿದ್ಯಾರ್ಥಿ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here