

ಬಂಟ್ವಾಳ: ರಾತ್ರಿ ಸುರಿದ ಗಾಳಿ ಮಳೆಗೆ ಮಣ್ಣಿನ ಗೋಡೆಯ ಮನೆಯೊಂದು ಕುಸಿದು ಬಿದ್ದ ಘಟನೆ ಕಲ್ಲಡ್ಕದಲ್ಲಿ ಮಧ್ಯ ರಾತ್ರಿ ಸುಮಾರು 12 ಗಂಟೆಯ ವೇಳೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುರ್ಮಾನ್ ಗೋಪಿ ಪೂಜಾರಿ ಅವರ ಮನೆ ಸಂಪೂರ್ಣ ಕುಸಿದು ಬಿದ್ದು ಹೋಗಿದೆ.
ಕಡು ಬಡವರಾಗಿರುವ ಗೋಪಿಪೂಜಾರಿ ಅವರ ಮಣ್ಣಿನ ಗೋಡೆಯ ಮನೆಯ ಅಡುಗೆ ಕೋಣೆಯ ಒಂದು ಭಾಗ ಆರಂಭದಲ್ಲಿ ಕುಸಿದು ಬಿದ್ದಿದೆ.
ಮನೆಯವರೆಲ್ಲರೂ ಊಟ ಮಾಡಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆಯಾದರೂ ಯಾವುದೇ ಅಪಾಯ ಸಂಭವಿಸಿಲ್ಲ.
ಮನೆ ಕಳೆದುಕೊಂಡಿರುವ ಗೋಪಿ ಪೂಜಾರಿ ಅವರಿಗೆ ಸದ್ಯಕ್ಕೆ ಉಳಿದುಕೊಳ್ಳಲು ಸೂರು ಬೇಕಾಗಿದೆ.
ಬಡವರಾಗಿರುವ ಈ ಕುಟುಂಬಕ್ಕೆ ಬಾಡಿಗೆ ನೀಡಿ ಮನೆಯಲ್ಲಿ ಜೀವನ ಸಾಗಿಸಲು ಕಷ್ಟಸಾಧ್ಯ. ಹಾಗಾಗಿ ಮನೆ ನಿರ್ಮಾಣ ಮತ್ತು ಆವರೆಗೆ ಬದಲಿ ವ್ಯವಸ್ಥೆ ಗಾಗಿ ಇಲಾಖೆ ಮತ್ತು ಸ್ಥಳೀಯ ಸಂಘಸಂಸ್ಥೆಗಳ ನೆರವು ಬೇಕಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರ್.ಎಸ್.ಎಸ್.ಪ್ರಮುಖ ಡಾ| ಪ್ರಭಾಕರ ಭಟ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಜಿ.ಪಂ.ಸದಸ್ಯ, ಮಾಜಿ ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಗ್ರಾ.ಪಂ.ಅಧ್ಯಕ್ಷ ವಿಠಲ ನಾಯ್ಕ, ಬಿ.ಕೆ.ಅಣ್ಣುಪೂಜಾರಿ, ಕಾ.ಕೃಷ್ಣಪ್ಪ ಆಚಾರ್ಯ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ದ್ದಾರೆ.
ಮಳೆ ಆರಂಭವಾಗುವ ಮೊದಲು ಮೇ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಲ್ಲಡ್ಕ ವತಿಯಿಂದ ತಾತ್ಕಾಲಿಕ ರಿಪೇರಿ ಮಾಡಿಕೊಡಲಾಗಿತ್ತು .







