Wednesday, October 18, 2023

’ಆಯುರ್ವೇದ ವೈದ್ಯ ಪದ್ಧತಿ ’ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ’

Must read

ವಿಟ್ಲ: ಆಯುರ್ವೇದ ವೈದ್ಯ ಪದ್ಧತಿ ಸಂಪೂರ್ಣವಾಗಿ ವೈಜ್ಞಾನಿಕ ತಳಹದಿಯ ಮೇಲೆ ನಡೆಯುವ ಚಿಕಿತ್ಸಾ ಕ್ರಮವಾಗಿದೆ. ಆಯುರ್ವೇದದ ಬಗೆಗಿನ ತಪ್ಪು ಕಲ್ಪನೆ ಜನರ ಹಾದಿ ತಪ್ಪಿಸುತ್ತಿದೆ. ಕಾಲ ಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಂಡಾಗ ವ್ಯಕ್ತಿ ಸುಖಕರವಾಗಿರಬಹುದು. ನಿಯಮಿತ ಆಹಾರ ಪದ್ಧತಿಯನ್ನು ಅನುಸರಿಸಿದಾಗ ಆರೋಗ್ಯವನ್ನು ಉತ್ತಮವಾಗಿಡಲು ಸಾಧ್ಯ ಎಂದು ಮಣಿಪಾಲ ಮುನಿಯಾಲು ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಡಾ. ಸತ್ಯನಾರಾಯಣ ಹೇಳಿದರು.
ಅವರು ಭಾನುವಾರ ವಿಟ್ಲ ನಗರ ಮಂಗಳಾಮಂಟಪದಲ್ಲಿ ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆಯುರ್ವೇದ ಅಧ್ಯಯನ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ೪೨ನೇ ವರ್ಷದ ಧನ್ವಂತರಿ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರಪಂಚದಲ್ಲಿ ಆಯುರ್ವೇದಕ್ಕೆ ಬಹಳಷ್ಟು ಅವಕಾಶಗಳು ಇದ್ದು, ಅದನ್ನು ಬಳಸಿಕೊಳ್ಳುವ ಕಾರ್ಯವಾಗಬೇಕು. ಆಯುರ್ವೇದ ವೈದ್ಯರಿಗೆ ಆಯುರ್ವೇದ ಮೇಲೆ ನಂಬಿಕೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆಯುರ್ವೇದದಲ್ಲಿ ದೇಹ ಪ್ರಕೃತಿಯನ್ನು ಪರಿಶೀಲಿಸಿ ಔಷಧಿ ನೀಡಲಾಗುತ್ತದೆ. ಆಯುರ್ವೇದ ಔಷಧಿಗಳ ಬಲ ಬಹಳಷ್ಟು ಹೆಚ್ಚು ಎಂದು ತಿಳಿಸಿದರು.
ಕುರಿಯತ್ತಡ್ಕ ನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಧನ್ವಂತರಿ ಪೂಜಾ ಕಾರ್ಯಕ್ರಮ ನಡೆಯಿತು. ಗುಣಾಜೆ ರಾಮಚಂದ್ರ ಭಟ್ ಅವರಿಂದ ಸ್ವರಚಿತ ಕವನವಾಚನ ನಡೆಯಿತು. ಅಡ್ಯನಡ್ಕ ಜನತಾ ಪ್ರೌಢಶಾಲೆ ನಿವೃತ್ತ ಅಧ್ಯಾಪಕ ಶ್ರೀನಿವಾಸ ಮರಡಿತ್ತಾಯ ವನಭೋಜನ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ನಾ. ಕಾರಂತ ಪೆರಾಜೆ, ಸಿವಿಲ್ ಇಂಜಿನಿಯರ್ ಸಂತೋಷ್ ಶೆಟ್ಟಿ ಪೆಲ್ತಡ್ಕ ಉಪಸ್ಥಿತರಿದ್ದರು.
ಸುಮತಿ ಶಂಕರ ಭಟ್ ಬದನಾಜೆ ಪ್ರಾರ್ಥಿಸಿದರು. ಕೃಷಿ ವಿಜ್ಞಾನಿ ಬದನಾಜೆ ಶಂಕರ ಭಟ್ ಸ್ವಾಗತಿಸಿದರು. ಎಳೆಯರ ಬಳಗ ವಿದ್ಯಾವರ್ಧಕ ಸಂಘ ಮತ್ತು ಆಯುರ್ವೇದ ಅಧ್ಯಯನ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಪದ್ಮರಾಜ ಪ್ರಸ್ತಾವನೆಗೈದರು. ಡಾ. ಮಹೇಶ್ ಬಿ.ಸಿರೋಡ್ ವಂದಿಸಿದರು. ಬದನಾಜೆ ಶಂಕರನಾರಾಯಣ ಪ್ರಸಾದ, ಜಯಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

 

More articles

Latest article