

ಯಾದವ ಕುಲಾಲ್
ಬಿ.ಸಿ.ರೋಡು : ಶಾಲಾ ಮಕ್ಕಳ ಹಾಗೂ ಪಾದಚಾರಿಗಳ ಭದ್ರತೆಯ ಹಿತದೃಷ್ಟಿಯಿಂದ ಲಕ್ಷ ಲಕ್ಷ ಖರ್ಚು ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿದ ಮಾನವ ಸಂಚಾರ ಮೇಲ್ಸೇತುವೆ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಮಣ್ಣಾಗುವ ಭೀತಿಯಲ್ಲಿದೆ. ಮಳೆಗಾಲದಲ್ಲಿ ಮೇಲ್ಚಾವಣಿ ಇಲ್ಲದೆ ಮಳೆ ನೀರು ಒಳ ನಿಂತು ಉಕ್ಕಿನಿಂದ ನಿರ್ಮಿಸಿದ ಮೇಲ್ಸೇತುವೆ ತುಕ್ಕು ಹಿಡಿದು ಅದರ ಉಕ್ಕಿನ ದೂಳು ಮೇಲ್ಸೇತುವೆ ಮೇಲೆ ರಾಶಿ ಬಿದ್ದಿದೆ. ಅಲ್ಲೇ ನೀರು ನಿಂತಿರುವುದರಿಂದ ಮೇಲ್ಸೇತುವೆ ತೂತಾಗುವ ಸಾಧ್ಯತೆ ಇದೆ.
ಮಣ್ಣಾಗುತ್ತಿದೆ ಓವರ್ಬ್ರಿಡ್ಜ್ : ಇದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಬಳಿಯಲ್ಲಿ ನಿರ್ಮಿಸಿದ ವಿದ್ಯಾರ್ಥಿಗಳ ಭದ್ರತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2013ರಲ್ಲಿ ಸುಮಾರು 36 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾದಾಚಾರಿಗಳಿಗಾಗಿ ನಿರ್ಮಿಸಿದ ಮೇಲ್ಸೇತುವೆಯ ದುಸ್ಥಿತಿ. ಸುಮಾರು 1500 ವಿದ್ಯಾರ್ಥಿಗಳನ್ನೊಳಗೊಂಡ ತುಂಬೆ ಬಿ.ಎ. ವಿದ್ಯಾ ಸಂಸ್ಥೆಯ ಬಳಿ ನಿರ್ಮಿಸಿರುವ ಈ ಮೇಲ್ಸೇತುವೆ ಒಮ್ಮೆ ನಿರ್ಮಾಣ ಮಾಡಿ ಹೋದವರು ಮತ್ತೆ ಅದರ ನಿರ್ವಹಣೆಗೆ ಗೋಚರವೇ ಇಲ್ಲದಂತೆ ಹತ್ತಿರ ಬರದೇ ಉಕ್ಕು ತುಕ್ಕು ಹಿಡಿದು ಮಣ್ಣಾಗುವ ಅಂದಾಜಿದೆ. ನಿರ್ವಹಣೆ ಮಾಡುವವರು ದಿನಂಪ್ರತಿ ಅದರ ಅಡಿಯಲ್ಲಿ ಸಂಚಾರ ಮಾಡುವುದರಿಂದ ತಮ್ಮ ಇಲಾಖೆಯಿಂದಲೇ ನಿರ್ಮಾಣ ಮಾಡಿರುವ ಈ ಮೇಲ್ಸೇತುವೆ ಒಮ್ಮೆ ಯಾವ ವ್ಯವಸ್ಥೆಯಲ್ಲಿದೆ ಎಂಬುದೇ ಅವರಿಗೆ ತಿಳಿದಿಲ್ಲ.



ದಾರಿ ತೋರಿಸಿದ ತುಂಬೆ ಬಿಎ ವಿದ್ಯಾ ಸಂಸ್ಥೆ : ರಸ್ತೆ ನಿರ್ವಹಣೆಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಹೆದ್ದಾರಿ ಪ್ರಾಧಿಕಾರ ಇಲಾಖೆಯು ಮೇಲ್ಸೇತುವೆಯ ಸುತ್ತಮುತ್ತ ಪೊದೆಗಳು ಆವೃತವಾಗಿದ್ದ ಪೊದೆಯನ್ನು ತೆಗೆಯಲೂ ಮುಂದೆ ಬರಲಿಲ್ಲ. ಆದರೆ ಮಕ್ಕಳಿಗೆ ಪೊದೆಗಳಿಂದ ದಾರಿಕಾಣದಾಗ ತುಂಬೆ ಬಿ.ಎ. ವಿದ್ಯಾ ಸಂಸ್ಥೆಯೇ ಕೂಲಿ ಕೆಲಸದಾಳುಗಳನ್ನು ನೇಮಿಸಿ ಇರುವ ಪೊದೆಯನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ಹೋಗಲು ವ್ಯವಸ್ಥೆ ಮಾಡಲಾಯಿತು.
ರಸ್ತೆಯ ಮದ್ಯದಲ್ಲೇ ಪೊದೆಗಳನ್ನು ತೆಗೆದು ಸ್ವಚ್ಛಗೊಳಿಸಿ ದಾರಿಯನ್ನು ತೆರವುಗೊಳಿಸುವ ಪ್ರಯತ್ನವನ್ನು ಪ್ರಾಧಿಕಾರ ಮಾಡುತ್ತಿಲ್ಲ. ತುಕ್ಕು ಹಿಡಿದಿರುವ ಕಬ್ಬಿಣ ಪೂರ್ತಿ ಬ್ರಿಡ್ಜ್ನ ಸೌಂದರ್ಯವನ್ನೂ ಹಾಳುಗೆಡವಿದೆ. ಕೇವಲ ೬ ವರ್ಷಗಳಲ್ಲಿ ಈ ಓವರ್ ಬ್ರಿಡ್ಜ್ಗೆ ಈ ರೀತಿಯ ಪರಿಸ್ಥಿತಿ ಬಂದಿರುವುದು ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕ್ಷಣ ಮಾತ್ರದಲ್ಲಿ ದಾಟಲು ಸಾಧ್ಯವಾಗುವ ಹೆದ್ದಾರಿಯನ್ನು ಸುರಕ್ಷತಾ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಭರಿಸಿ ನಿರ್ಮಿಸಿದ ಈ ಓವರ್ ಬ್ರಿಡ್ಜ್ ಬಳಸಿ ದಾಟಲು ಹಲವು ನಿಮಿಷಗಳೇ ಬೇಕಾಗಿದೆ. ಆದರೂ ಅಪಘಾತ-ಅನಾಹುತಗಳನ್ನು ತಪ್ಪಿಸುವ ದೃಷ್ಟಿಯಿಂದ ಈ ಪಾದಾಚಾರಿ ಮೇಲ್ಸೇತುವೆಯನ್ನು ಬಳಸಿಕೊಳ್ಳುವ ನಿರ್ಧಾರವನ್ನು ಮಾಡಿದರೆ ಸರಿಯಾದ ನಿರ್ವಹಣೆ ಇಲ್ಲದೆ ಜನ ಇದರ ಹತ್ತಿರ ಸುಳಿಯಲೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ.
*****
ಮಕ್ಕಳ ಸುರಕ್ಷತೆಗಾಗಿ ಹೆದ್ದಾರಿ ಪ್ರಾಧಿಕಾರ ಓವರ್ ಬ್ರಿಡ್ಜ್ ನಿರ್ಮಿಸಿರುವುದು ನಿಜಕ್ಕೂ ಉತ್ತಮ ವಿಷಯ. ತುಂಬೆ ಬಿ.ಎ. ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತಿಯಾದ ವೇಗದಿಂದ ಬರುವ ಕಾರಣ ರಸ್ತೆ ದಾಟಲು ಕಷ್ಟ ಪಡುತ್ತಿದ್ದ ಶಾಲಾ ಮಕ್ಕಳ ಸುರಕ್ಷತೆಗಾಗಿ ನಿರ್ಮಿಸಲ್ಪಟ್ಟ ಓವರ್ ಬ್ರಿಡ್ಜ್ ಸರಿಯಾದ ನಿರ್ವಹಣೆ ಇಲ್ಲದೆ ನಲುಗುತ್ತಿದೆ. ತುಕ್ಕು ಹಿಡಿದಿರುವ ಕಬ್ಬಿಣ ಒಂದು ಕಡೆಯಾದರೆ ಇನ್ನೊಂದು ಮೇಲ್ಚಾವಣಿ ಇಲ್ಲದೇ ಮಳೆ ನೀರು ಮೇಲ್ಗಡೆ ಶೇಖರಣೆಯಾಗಿ ಉಕ್ಕಿನ ಬಿಡಿಭಾಗಗಳೆಲ್ಲವೂ ತುಕ್ಕು ಹಿಡಿದು ದೂಳಾಗಿ ರಾಶಿ ಬಿದ್ದಿದೆ. ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತುಕೊಂಡು ಓವರ್ಬ್ರಿಡ್ಜ್ಗೆ ಮರುಜೀವ ನೀಡಿದರೆ ಒಳ್ಳೆಯದು.
– ದಿನೇಶ್ ಎನ್., ಪ್ರಗತಿ ಪ್ರಿಂಟರ್ಸ್, ತುಂಬೆ
******
ಓವರ್ಬ್ರಿಡ್ಜ್ಗೆ ಹೋಗುವ ದಾರಿ ಸಂಪೂರ್ಣ ಪೊದೆಗಳಿಂದ ತುಂಬಿದ್ದು ವಿದ್ಯಾ ಸಂಸ್ಥೆಯ ವತಿಯಿಂದಲೇ ಸ್ವಚ್ಛ ಮಾಡಿದ್ದೇವೆ. ಆದರೆ ಅದರ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಅದನ್ನು ಬಳಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿದೆ. ಸರಕಾರ ಒದಗಿಸುವ ಯಾವುದೇ ಯೋಜನೆಗಳಾದರೂ ಸರಿಯಾದ ನಿರ್ವಹಣೆ ಇದ್ದರೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು.
– ಕಬೀರ್, ಮ್ಯಾನೇಜರ್, ತುಂಬೆ ಪದವಿ ಪೂರ್ವ ಕಾಲೇಜು
*********








