* ಮೌನೇಶ ವಿಶ್ವಕರ್ಮ

ಬಂಟ್ವಾಳ: ದೇಶದ ಆರ್ಥಿಕತೆ ಕುಸಿದಿದೆ ಎಂಬ ಕೂಗು ಒಂದೆಡೆ ಕೇಳಿಬರುತ್ತಿದ್ದರೆ, ಒಂದು ಪಪ್ಪಾಯಿಯನ್ನು ವೃದ್ಧರೊಬ್ಬರು ಹತ್ತುಸಾವಿರದ ನೂರು ರೂ ಗೆ ಖರೀದಿಸಿದ್ದಾರೆ ಎಂದರೆ ನೀವು ನಂಬುತ್ತೀರಾ… ಹೌದು ನಂಬಲೇ ಬೇಕು.


ಈ ಸ್ವಾರಸ್ಯಕರ ಘಟನೆ ನಡೆದಿರುವುದು ಬಂಟ್ವಾಳ ತಾಲೂಕಿನಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ನಲ್ಲಿ .
2019 ಅಕ್ಟೋಬರ್ ತಿಂಗಳನ್ನು ಮಿಷನ್ ಸಂಡೆಗಳಾಗಿ ಆಚರಿಸುವಂತೆ
ಪೋಪ್ ಫ್ರಾನ್ಸಿಸ್ ರವರ ಆದೇಶದ ಮೇರೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ರವರ ಮಾರ್ಗದರ್ಶನದಲ್ಲಿ ಬೊರಿಮಾರ್ ಚರ್ಚ್ ನಲ್ಲಿ ಅ.27ರ ಭಾನುವಾರ
ಮಿಷನ್ ಸಂಡೆಯನ್ನು ಆಚರಿಸಲಾಯಿತು. ಇದರಂತೆ
ಬೊರಿಮಾರ್ ಧರ್ಮಕೇಂದ್ರಕ್ಕೆ ಸೇರಿದ ಸಮಸ್ತ ಕ್ರೈಸ್ತ ಭಕ್ತಾದಿಗಳು ಇಂದು ಬಲಿಪೂಜೆಗೆ ಆಗಮಿಸುವಾಗ ತಮ್ಮ ತಮ್ಮ ತೋಟದಲ್ಲಿ ಬೆಳೆದ ತರಕಾರಿ ಹಣ್ಣು-ಹಂಪಲುಗಳ ಜೊತೆಯಲ್ಲಿ ಕೋಳಿ, ಹೆರೆಮಣೆ ಸಹಿತ ಹಲವು ವಸ್ತುಗಳನ್ನು ಹೊತ್ತುತಂದು ಕಾಣಿಕೆಯಾಗಿ ಸಮರ್ಪಿಸಿದರು. ಪೂಜೆಯ ಬಳಿಕ ಎಲ್ಲಾ ಕ್ರೈಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಯಿತು. ಈ ವೇಳೆ ಪಪ್ಪಾಯಿಯೊಂದನ್ನು 85 ವರ್ಷ ಪ್ರಾಯದ ಬೊನವೆಂಚರ್ ಪುತ್ತಾಮ್ ಪಿಂಟೊ ರವರು 10,100 ರೂ ನೀಡಿ ಖರೀದಿಸುವ ಮೂಲಕ ಗಮನಸೆಳೆದರು. ಬೊರಿಮಾರ್ ಚರ್ಚ್ ನಲ್ಲಿ ಧರ್ಮಗುರುಗಳಾಗಿರುವ ವಂದನೀಯ ಗ್ರೆಗರಿ ಪಿರೇರಾ ರವರು ಈಗಾಗಲೇ ಚರ್ಚ್ ನಲ್ಲಿ ಪಪ್ಪಾಯಿ ಕೃಷಿ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದು, ಅವರ ಮೇಲಿನ ಪ್ರೀತಿ ಹಾಗೂ ಮಿಷನ್ ಸಂಡೇ ಕಾರ್ಯಕ್ರಮದ ಅಭಿಮಾನದಿಂದ ಪಪ್ಪಾಯಿಯನ್ನು ದುಬಾರಿ ಬೆಲೆ ನೀಡಿ ಖರೀದಿಸಿರುವುದಾಗಿ ಬೊನವೆಂಚರ್ ಪಿಂಟೋ ಹೇಳಿಕೊಂಡಿದ್ದಾರೆ.
ಉಳಿದಂತೆ ಒಂದು ಹೆರೆಮಣೆ 6,600ರೂ, ಒಂದು ಕೋಳಿ 3,500 ರೂ.,9 ಸೀಯಾಳ 4,200, 1 ಬಾಳೆ ಗೊನೆ 1,250 ಹಾಗೂ ಬಾಳೆ ಎಲೆ 1,200 ರೂ ಗೆ ಸೇರಿದಂತೆ ಹಲವಾರು ವಸ್ತುಗಳ ಹರಾಜು ನಡೆಸಲಾಯಿತು. ಒಟ್ಟು 1,24,000 ರೂ ಮೊತ್ತ ಸಂಗ್ರಹವಾಯಿತು. ಚರ್ಚ್ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ಮತ್ತು ಅಲೆಕ್ಸ್ ಮೊರಾಸ್ ರವರು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

*ಏನಿದು ಮಿಷನ್ ಸಂಡೇ..?*
ಧರ್ಮಕೇಂದ್ರ ವ್ಯಾಪ್ತಿಯ ಬಡಕುಟುಂಬಗಳಿಗೆ ನೆರವಾಗಬೇಕು ಎನ್ನುವ ಆಶಯ ಹೊ‌ಂದಿರುವ ಈ ಕಾರ್ಯಕ್ರಮ ಮಿಷನ್ ಸಂಡೇ ಹೆಸರಿನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಚರ್ಚ್ ವ್ಯಾಪ್ತಿಯ ಕ್ರೈಸ್ತ ಬಾಂಧವರಿಂದ ವಸ್ತುಗಳನ್ನು ಕಾಣಿಕೆಯಾಗಿ‌ ಸ್ವೀಕರಿಸಿ ಬಡವರಿಗೆ ಹಂಚುವ ಮೂಲಕ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ. ಅದರಂತೆ ಬೊರಿಮಾರ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರ ವಿನಂತಿಯ ಮೇರೆಗೆ ಪ್ರತೀ ಕುಟುಂಬದವರು ವಿವಿಧ ತರಕಾರಿಗಳನ್ನು, ವಸ್ತುಗಳನ್ನು ಕಾಣಿಕೆಯಾಗಿ ನೀಡಿ, ಹರಾಜಿನಲ್ಲಿ ಪಡೆದು ಮಿಷನ್ ಸಂಡೆಯ ಉದ್ದೇಶವನ್ನು ಅರ್ಥಪೂರ್ಣಗೊಳಿಸಿದ್ದಾರೆ. ಸಂಗ್ರಹವಾದ ಮೊತ್ತವನ್ನು ಬಡವರ ಏಳಿಗೆಗೆ ಬಳಸಿಕೊಳ್ಳುವುದಾಗಿ ಚರ್ಚ್ ಪಾಲನಾ ಸಮಿತಿ ತಿಳಿಸಿದೆ.
……

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here