ಇನ್ನೊಂದು ಭೂಮಿಯನ್ನು ಹುಡುಕುತ್ತಾ ಹೊರಟ
ಬಾಹ್ಯಾಕಾಶ ನೌಕೆ
ಭೂಮಿಯ ಹೋಲುವ ಗ್ರಹಕ್ಕೆ ತಲುಪಿಬಿಟ್ಟಿತ್ತು..!

ಅಲ್ಲಿ
ಹುಟ್ಟಿದ ಜೀವಿ ಸಾಯುತ್ತಲೇ
ಇರಲಿಲ್ಲ.,
ಹುಟ್ಟು ಮಾತ್ರ ಆಗುತ್ತಲೇ ಇತ್ತು.
ಪಾಪ ಪುಣ್ಯದ ಭಯವೇ ಇರಲಿಲ್ಲ..,
ನೀ ನೂರು ವರುಷ ಬಾಳು ಎಂಬ ಆಶೀರ್ವಾದವೂ ಇಲ್ಲ..!

ಅಪ್ಪಿ ತಪ್ಪಿ
ಕೈ ಕಟ್ಟಾಗಿ ಹೋದರೆ
ಮತ್ತೊಂದು ಕೈ ಅದೇ ಜಾಗದಲ್ಲಿ ಬೆಳೆಯುತ್ತಿತ್ತು
ಕಾಲು ತುಂಡಾದರೂ ಅಷ್ಟೇ..
ಅಷ್ಟೆಲ್ಲಾ ಯಾಕೆ ತಲೆ ಹೋದರೂ
ಇನ್ನೊಂದು ಬರುತ್ತಿತ್ತು..
ಥೇಟ್ ಹಾರರ್ ಮೂವಿಗಳಂತೆ..!
ಹಸಿವು ಕೂಡ ಇಲ್ಲಿ ಸಾಯಿಸಲಾರದು,
ಉಸಿರು ಕೂಡಾ ಇಲ್ಲಿ ನಿಲ್ಲಲಾರದು.

ಆದರೂ ಅಲ್ಲಿ ನಿರ್ದಿಷ್ಟ ಜನಸಂಖ್ಯೆ..!
ಕಾರಣ
ಹುಡುಕುತ್ತ ಸಾಗಿದವನಿಗೆ
ದೊರಕಿದ್ದು ವಿಚಿತ್ರ ಪ್ರಪಂಚ..!?

ಅಲ್ಲೇ ಹತ್ತಿರದಲ್ಲಿತ್ತು
ಸಾವಿನ ಗ್ರಹ..!
ಭೂಮಿಗೆ ಚಂದ್ರನಿದ್ದಂತೆ.
ನೂರು ವರುಷ ಆದ ಮರುದಿನವೇ
ಆ ಗ್ರಹದೊಳಗೆ ಸಾಗುತ್ತಿದ್ದರು..
ಅಲ್ಲಿಗೆ ಹೋದ ಕೆಲವೇ ಹೊತ್ತಿನಲ್ಲಿ
ದೇಹವೆಲ್ಲ ಭಸ್ಮ..!
ಇಲ್ಲಿ ದುಡಿಯುತ್ತಿದ್ದದ್ದು
ಹಣ ಸಂಪಾದಿಸುತ್ತಿದ್ದದ್ದು
ಕೇವಲ ಸಾವಿಗಾಗಿ..!
ಅಲ್ಲಿಗೆ ಹೋಗ ಬೇಕಾದರೆ ಇಂತಿಷ್ಟು ಹಣ ಕಟ್ಟಬೇಕು.
ಆತ್ಮಹತ್ಯೆಗೂ ಹಣ..!

ಬದುಕಿನ ಉತ್ಸಾಹ
ಕಡಿಮೆಯಾಗದಿರಲೆಂದೇ
ಈ ಸಾವು….!

 

✍ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here