ಯಾದವ ಕುಲಾಲ್
ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ಪ್ರಮುಖ ಪೇಟೆ ಪ್ರದೇಶವಾಗಿರುವ ಬಿ.ಸಿ.ರೋಡ್.  ಇಲ್ಲಿ ನಗರ ಸೌಂದರ್‍ಯೀಕರಣಕ್ಕೆ ನಾನಾ ಯೋಜನೆಗಳು ಸಿದ್ಧವಾಗಿದೆ. ಆದರೆ ಇಲ್ಲಿಂದ ಅರ್ದ ಕಿ.ಮೀ. ದೂರದಲ್ಲಿರುವ ಕೈಕಂಬ ಜಂಕ್ಷನ್‌ನಲ್ಲಿ  ರಸ್ತೆ ಬದಿಯಲ್ಲೇ ಅನಧಿಕೃತ ಮೀನಿನ ಮಾರ್ಕೆಟ್ ಕಾರ್ಯಾಚರಿಸುವುದರಿಂದ ಪರಿಸರ ದುರ್ನಾತ ಬೀರುತ್ತಿದೆ. ಇದು ಮೀನು ಮಾರಾಟಗಾರರ ತಪ್ಪಲ್ಲ. ತಮ್ಮ ಜೀವನ ನಡೆಸುಲು ಒಂದು ಕಾಯಕವನ್ನು ಅವಲಂಬಿಸಬೇಕಾಗಿರುವುದು ಅನಿವಾರ್ಯ. ಆದರೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಬಿ.ಸಿ.ರೋಡು-ಕೈಕಂಬದಲ್ಲಿ ಯಾವುದೇ ಶಾಶ್ವತವಾದ ಮೀನಿನ ಮಾರ್ಕೆಟ್ ನಿರ್ಮಾಣ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಬಿ.ಸಿ.ರೋಡು ಕೈಕುಂಜೆ ಎಂಬಲ್ಲಿ ಪುರಸಭೆಯ ವತಿಯಿಂದ ಕಟ್ಟಡ ನಿರ್ಮಾಣ ಮಾಡಿ ಅಲ್ಲಿ ಮೀನು ಮಾರ್ಕೆಟ್ ಮಾಡಿತ್ತು. ಆ ಸಮಯದಲ್ಲಿ ಈಗ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣವಿರುವ ಪ್ರದೇಶ ಮತ್ತು ಕೈಕಂಬದ ಎಂ.ಕೆ.ಟವರ್‍ಸ್ ಬಳಿ ಮೀನಿನ ವ್ಯಾಪಾರಿಗಳು ಮೀನಿನ ವ್ಯಾಪಾರ ಮಾಡುತ್ತಿದ್ದು, ಕೈಕುಂಜೆಯಲ್ಲಿ ಜನ ಸಂಚಾರ ಇಲ್ಲ ಮತ್ತು ವ್ಯಾಪಾರಕ್ಕೆ ಯೋಗ್ಯ ಸ್ಥಳವೂ ಅಲ್ಲ ಎಂಬ ಕಾರಣವನ್ನು ನೀಡಿ ಯಾರೂ ಮೀನಿನ ಮಾರ್ಕೆಟ್ ಸ್ಥಳಾಂತರ ಮಾಡಲು ಒಪ್ಪಲಿಲ್ಲ. ಆ ನಂತರ ಕೆಲವು ವರ್ಷಗಳ ಕಾಲ ಆ ಕಟ್ಟಡ ಬಳಕೆಯಿಲ್ಲದೆ ಇತ್ತು. ಬಳಿಕ ಅದನ್ನು ದುರಸ್ಥಿಗೊಳಿಸಿ ಈಗ ಗ್ಯಾರೇಜ್ ಹಾಗೂ ದಿನಸಿ ಅಂಗಡಿ ವ್ಯಾಪಾರ ನಡೆಯುತ್ತಾ ಇದೆ. ಬಿ.ಸಿ.ರೋಡು-ಕೈಕಂಬದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನೂತನ ಕಟ್ಟಡಗಳ ನಿರ್ಮಾಣವಾಗಿರುವುದರಿಂದ ಬೆಳಿಗ್ಗಿನ ಹೊತ್ತು ಎಂ.ಕೆ. ಟವರ್‍ಸ್ ಬಳಿ ವ್ಯಾಪಾರ ಮಾಡುತ್ತಿದ್ದು, ಪರ್ಲಿಯಾ ನರ್ಸಿಂಗ್ ಹೋಂ ಬಳಿ ಕೆಲವು ವ್ಯಾಪಾರಿಗಳು ಸಂಜೆ ವೇಳೆ ಮೀನಿನ ಮಾರಾಟ ಪ್ರಾರಂಭ ಮಾಡಿದರು. ಪರ್ಲಿಯಾ ಆಸ್ಪತ್ರೆಯ ಬಳಿ ಖಾಸಗಿ ಸ್ಥಳವಾದ್ದರಿಂದ ಅದರ ವಿರುದ್ಧ ದಿಕ್ಕಿನಲ್ಲಿ ಮೀನಿನ ಅಂಗಡಿ ತೆರೆದರು. ಮೊದಲಿಗೆ ಕೇವಲ ಒಂದು ಮೀನಿನ ಅಂಗಡಿ ಇದ್ದು ಆದರೆ ಕ್ರಮೇಣ ಹೆಚ್ಚುತ್ತಾ ಹೋಗಿದೆ. ಈಗ ಕೈಕಂಬ ಬಸ್ಸು ನಿಲ್ದಾಣದಿಂದ ಮಿತ್ತಬೈಲಿನ ವರೆಗೂ ಮೀನು ಮಾರಾಟಗಾರರು ಮಾರಾಟ ಮಾಡುತ್ತಿದ್ದಾರೆ. ಸಂಜೆಗೆ ಮಾತ್ರ ಸೀಮಿತವಾಗಿದ್ದ ಮೀನಿನ ಮಾರಾಟ ಈಗ ನಿರಂತರವಾಗಿ ಬೆಳಿಗ್ಗೆಯಿಂದ ರಾತ್ರಿವರೆಗೂ ನಡೆಯುತ್ತಾ ಇದೆ.
ನಿಲ್ದಾಣದ ಬಳಿಯೇ ಮೀನು ಮಾರುಕಟ್ಟೆ : ಮಂಗಳೂರಿನಿಂದ ಧರ್ಮಸ್ಥಳ, ಉಪ್ಪಿನಂಗಡಿ ಹಾಗೂ ಪುತ್ತೂರು ಕಡೆಗಳಿಗೆ ತೆರಳುವ ಬಸ್‌ಗಳಿಗೆ ಇದೇ ಮೀನು ಮಾರುಕಟ್ಟೆ ಸಮೀಪ ನಿಲುಗಡೆ ಇರುವುದರಿಂದ ಪ್ರಯಾಣಿಕರಿಗೆ ಈ ಪ್ರದೇಶದಲ್ಲಿ ಬಸ್ಸಿಗೆ ನಿಲ್ಲಲೂ ಕಷ್ಟವಾಗುತ್ತಿದೆ. ಹೆದ್ದಾರಿಯಿಂದ ಕೇವಲ ಒಂದೆರಡು ಅಡಿಗಳಷ್ಟು ಮಾತ್ರ ದೂರದಲ್ಲಿರುವ ಇಲ್ಲಿನ ಮೀನು ಮಾರುಕಟ್ಟೆಗೆ ಬೆಳಗ್ಗಿನ ಟ್ರಾಫಿಕ್ ನಿಬಿಡತೆಯ ಸಮಯದಲ್ಲೇ ಘನ ವಾಹನಗಳಲ್ಲಿ ಮೀನು ತಂದು ಹೆದ್ದಾರಿಯಲ್ಲೇ ನಿಲ್ಲಿಸಿ ಕೆಳಗಿಸುತ್ತಿರುವುದರಿಂದ ಸಹಜವಾಗಿಯೇ ಇಲ್ಲಿ ಟ್ರಾಫಿಕ್ ಜಾಂ ಸಮಸ್ಯೆ ಕಂಡು ಬರುತ್ತಿದೆ. ಇಲ್ಲಿ ಖಾಸಗಿ ಆಸ್ಪತ್ರೆಯೂ ಇದ್ದು ಜನ ಸಂಚಾರ ಹೆಚ್ಚಿರುವುದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಮೀನು ಪೆಟ್ಟಿಗೆಯಿಂದ ಹೊರಬರುವ ತ್ಯಾಜ್ಯ ಹಾಗೂ ದುರ್ವಾಸನೆಯುಕ್ತ ಮಲಿನ ನೀರು ಕೂಡಾ ಅಲ್ಲೇ ಬಿಡುತ್ತಿರುವುದರಿಂದ ಅದು ನಿರಂತರವಾಗಿ ಮಾರ್ಕೆಟ್‌ನ ಹಿಂದುಗಡೆ ಇರುವ ಖಾಸಗಿ ಸ್ಥಳಕ್ಕೆ ಹರಿದು ಬರುತ್ತಿದೆ.  ಇದರಿಂದಾಗಿ ನಿತ್ಯವೂ ಈ ಪರಿಸರ ದುರ್ವಾಸನೆ ಬೀರುತ್ತಿರುತ್ತದೆ. ಪರಿಸರದ ಸ್ವಚ್ಛತೆಯ ಬಗ್ಗೆ ಯಾವುದೇ ರೀತಿಯ ಗಮನ ಹರಿಸದೆ ಇರುವುದರಿಂದ ಇಲ್ಲಿನ ಸಾರ್ವಜನಿಕರಿಗೆ ಹಾಗೂ ನಿತ್ಯ ಇಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಪಾಲಿಗೆ ಸಂಕಷ್ಟ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಈ ಮೀನು ಮಾರುಕಟ್ಟೆ ಇರುವುದರಿಂದ ಹೆದ್ದಾರಿ ಇಲಾಖೆ ಕೂಡಾ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ರಸ್ತೆಯ ಬದಿಯಲ್ಲೇ ಈ ಮಾರುಕಟ್ಟೆ ಇರುವುದರಿಂದ ಇಲ್ಲಿಗೆ ಬರುವ ಗಾಹಕರು ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಮೀನು ಖರೀದಿಗೆ ಬರುತ್ತಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಮಿತಿ ಮೀರಿದ ವೇಗದಲ್ಲಿ ನಿರಂತರವಾಗಿರುವುದರಿಂದ ಕೆಲವೊಮ್ಮೆ ವಾಹನ ನಿಲ್ಲಿಸುವ ವೇಳೆ ಅಥವಾ ಇನ್ನು ಕೆಲವೊಮ್ಮೆ ಮೀನು ಖರೀದಿಸಿ ವಾಹನ ಚಾಲಕರು ಹಿಂತಿರುಗಿ ಬಂದು ಮರಳಿ ವಾಹನವೇರುವ ವೇಳೆ ಏಕಾಏಕಿ ಹಿಂದಿನಿಂದ ಶರವೇಗದಲ್ಲಿ ಬರುವ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತಗಳು ಸಂಭವಿಸುವ ಅಪಾಯಕರ ಸನ್ನಿವೇಶ ಅಲ್ಲಿದೆ.
ಈ ಹಿಂದೆ ಬಿ.ಸಿ.ರೋಡು, ಕೈಕಂಬ ಪೇಟೆಯಲ್ಲಿ ಅನಧಿಕೃತ ಗೂಡಂಗಡಿ, ಜೋಪಡಿಗಳ ತೆರವು ಕಾರ್ಯಾಚರಣೆ ವೇಳೆ ಇಲ್ಲಿನ ಮೀನು ಮಾರುಕಟ್ಟೆಯನ್ನೂ ತೆರವುಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಕೈಕಂಬ ಪರಿಸರದಲ್ಲಿ ಅನಧಿಕೃತ ಮೀನು ಮಾರಾಟಗಾರರ ಸಂಖ್ಯೆ ಹೆಚ್ಚಾಗಿದೆ. ಬದುಕಲು ಯಾವುದೇ ಉದ್ಯೋಗ, ಉದ್ಯಮವನ್ನು ನಡೆಸುವುದು ಮಾನವ ಧರ್ಮ. ಅದಕ್ಕಾಗಿ ತಾಲೂಕಾಡಳಿತ ಇಲ್ಲವೇ ಬಂಟ್ವಾಳ ಪುರಸಭೆ ಜನರಿಗೆ ಬದುಕುವಂತೆ ಮಾಡಲು ಯೋಗ್ಯವಾದ ಪರಿಸರವನ್ನು ನಿರ್ಮಾಣ ಮಾಡಬೇಕು. ಬಿ.ಸಿ.ರೋಡು ಅಥವಾ ಕೈಕಂಬ ಪರಿಸರದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಮೀನಿನ ವ್ಯಾಪಾರಿಗಳಿಗೊಂದು ಶಾಶ್ವತವಾದ ಸ್ಥಳ ನಿಗದಿ ಪಡಿಸಿ ಅಲ್ಲೇ ವ್ಯಾಪಾರ ಮಾಡುವಂತಹ ವ್ಯವಸ್ಥೆ ಮಾಡಬೇಕಾಗಿದೆ. ಇದರಿಂದಾಗಿ ಮಾರಾಟಗಾರರಿಗೂ ಒಳಿತಾಗುತ್ತದೆ ಜೊತೆಗೆ ಸಾರ್ವಜನಿಕರಿಗೂ ಪ್ರಯೋಜನವಾಗುತ್ತದೆ.
****
ಬಿ.ಸಿ.ರೋಡು ಇಲ್ಲವೇ ಕೈಕಂಬ ಪರಿಸರದಲ್ಲಿ ಶಾಶ್ವತವಾದ ಮೀನಿನ ಮಾರುಕಟ್ಟೆ ಅಗತ್ಯ. ಈಗಾಗಲೇ ಬಿ.ಸಿ.ರೋಡು ನಗರ ಸುಂದರೀಕರಣದ ಬಗ್ಗೆ ಎಲ್ಲಾ ಕಡೆ ಮಾತುಕತೆಯಾಗುತ್ತಾ ಇದೆ. ಅದರ ಜೊತೆಗೆ ಇಲ್ಲಿನ ಜನರಿಗೆ ಸೌಂದರ್ಯದ ಜೊತೆಗೆ ದೈನಂದಿನ ಚಟುವಟಿಕೆಗೆ ಪೂರಕವಾಗುವಂತಹ ಯೋಜನೆಗಳು ರೂಪುಗೊಳ್ಳಲಿ. ಬಿ.ಸಿ.ರೋಡು ನಾನಾ ಊರುಗಳ ಕೊಂಡಿಯಾಗಿದೆ. ಆದುದರಿಂದ ಇಲ್ಲಿಯೂ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣದ ಯೋಜನೆಯೂ ರೂಪುಗೊಂಡರೆ ರಸ್ತೆ ಬದಿಯಲ್ಲಿ ಮೀನುಮಾರಾm ಮಾಡುವವರಿಗೆ ಒಂದು ಶಾಶ್ವತವಾದ ಬದುಕು ನೀಡಿದಂತಾಗುತ್ತದೆ.
– ಶ್ರೀಮತಿ ಸುನಂದ, ಬಿ.ಸಿ.ರೋಡು
******
ಬಿ.ಸಿ.ರೋಡಿನ ಸೌಂದರ್ಯ ವೃದ್ಧಿಯ ಕಾಮಗಾರಿಯ ನೀಲಿನಕಾಶೆ ತಯಾರಾಗಿದ್ದು ಮುಂದಿನ ವಾರದಿಂದಲೇ ಕೆಲಸಗಳು ಆರಂಭಗೊಳ್ಳಲಿದೆ. ಇದರ ಜೊತೆಗೆ ಇಲ್ಲಿನ ಜನರಿಗೆ ಸಹಕಾರಿಯಾಗುವಂತೆ ಮೀನು ಮಾರುಕಟೆಗೆ ಸೂಕ್ತ ಸ್ಥಳವನ್ನು ಗೊತ್ತು ಪಡಿಸಿ ಶಾಶ್ವತವಾದ ಮೀನು ಮಾರುಕಟ್ಟೆ ನಿರ್ಮಾಣ ಮಾಡುವ ಅಲೋಚನೆಯಲ್ಲಿದ್ದೇವೆ. ಇದರಿಂದ ಜನರಿಗೂ ಅನುಕೂಲ ಅದರ ಜೊತೆಗೆ ಹಲವಾರು ವರ್ಷಗಳಿಂದ ಮೀನು ಮಾರುವ ಕಾಯಕವನ್ನೇ ಅವಲಂಬಿಸಿರುವ ಕುಟುಂಬಕ್ಕೂ ಸೂಕ್ತ ನೆಲೆ ಕಲ್ಪಿಸಿದಂತಾಗುವುದು.
– ರಾಜೇಶ್ ನಾಯಕ್, ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here