


ವಿಟ್ಲ: ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ವಿಟ್ಲ ಕಾಶೀಮಠ ಶ್ರೀ ಕಾಶೀ ಮಹಿಳಾ ಮಂಡಲ ಹಾಗೂ ಶ್ರೀ ಕಾಶೀ ಯುವಕ ಮಂಡಲ ವತಿಯಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಯುವ ಸಮ್ಮಿಲನ ಸಾಂಸ್ಕೃತಿಕ ಹಬ್ಬ ಕಾಶಿಮಠದಲ್ಲಿ ಭಾನುವಾರ ನಡೆಯಿತು.
ತರಂಗ ವಾರಪತ್ರಿಕೆ ಮಾಜಿ ಸಂಪಾದಕಿ ಅನಿತಾ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿ, ಮಾಧ್ಯಮ ಮತ್ತು ಮಹಿಳೆಯ ಪ್ರತಿಸ್ಪಂದನ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಮಹಿಳೆಯರ ವಿವಿಧ ಸಮಾಜ ಸೇವೆಗಳ ಮೂಲಕ ದೇಶ ಸುಭದ್ರವಾಗಿದೆ. ಮಹಿಳೆಯರ ಮೇಲೆ ದೊಡ್ಡ ಮಟ್ಟದ ಜವಾಬ್ದಾರಿ ಇದೆ. ಮಹಿಳೆ ದುರ್ಬಲವಲ್ಲ. ಆಕೆಗೆ ಅನ್ಯಾಯವಾದಾಗ ಬೀದಿಗೆ ಇಳಿದು ಹೋರಾಟ ನಡೆಸುವ ಛಲ ಹೊಂದಿದ್ದಾಳೆ. ಮಹಿಳಾ ಮಂಡಲಗಳ ಕಾರ್ಯ ವಿಸ್ತಾರವಾಗಿದೆ. ಮಾಧ್ಯಮರಂಗದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಇಂದು ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಹಳ್ಳಿಯ ಮಹಿಳೆಯರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿವುದು ಶ್ಲಾಘನೀಯವಾಗಿದೆ. ಮಹಿಳೆಯರು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥೆ ಸರಸ್ವತಿ ಕುಮಾರಿ ಪ್ರಬಂಧ ಮಂಡಿಸಿದರು.
ಕಾಶೀ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ.ವಿ, ಕಾಶೀ ಮಹಿಳಾ ಮಂಡಲದ ಅಧ್ಯಕ್ಷೆ ಮೀರಾ ಭಟ್ ಉಪಸ್ಥಿತರಿದ್ದರು.
ಬಳಿಕ ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಸದಸ್ಯರಿಂದ ನೃತ್ಯ, ಹಾಡು, ನೃತ್ಯ ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾಶೀ ಯುವಕ ಮಂಡಲದ ಅಧ್ಯಕ್ಷ ಕೇಶವ ವಿ.ಕೆ ಸ್ವಾಗತಿಸಿದರು. ರಮ್ಯ ಪ್ರಾರ್ಥಿಸಿದರು. ಪಿ.ಎಂ ರೋಹಿನಿ ಪ್ರಸ್ತಾವಿಸಿದರು. ಸಂಘದ ಜತೆ ಕಾರ್ಯದರ್ಶಿ ಅರುಣ ನಾಗರಾಜ್ ವಂದಿಸಿದರು. ಯುವಕ ಮಂಡಲದ ಜತೆ ಕಾರ್ಯದರ್ಶಿ ನವೀನ್ ಕುಮಾರ್ ನಿರೂಪಿಸಿದರು.







