ಬಂಟ್ವಾಳ:  ಅಧಿಕಾರ ವಿಕೇಂದ್ರಿಕರಣದಡಿಯಲ್ಲಿ ಬಂಟ್ವಾಳ, ಬೆಳ್ತಂಗಡಿ ಎರಡು ತಾಲೂಕಿಗೆ ಸಂಬಂಧಿಸಿದಂತೆ ಬಂಟ್ವಾಳವನ್ನು ಉಪವಿಭಾಗವನ್ನಾಗಿ ಘೋಷಿಸಿ ಸಹಾಯಕ ಆಯುಕ್ತರ ಕಛೇರಿ ತೆರಯುವಂತೆ ಒತ್ತಾಯಿಸಿ ಬಂಟ್ವಾಳ ತಾಪಂ ಸದಸ್ಯ ಪ್ರಭಾಕರ ಪ್ರಭು ಶಾಸಕದ್ವಯರನ್ನು ಮನವಿ ಸಲ್ಲಿಸಿದ್ದಾರೆ.
ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕು ಮಂಗಳೂರು ಉಪವಿಭಾಗ (ಕಂದಾಯ) ಸಹಾಯಕ ಆಯುಕ್ತರ ಕಛೇರಿ ವ್ಯಾಪ್ತಿಯಲ್ಲಿದ್ದು, ಬೆಳ್ತಂಗಡಿ ತಾಲೂಕು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಕಛೇರಿ ವ್ಯಾಪ್ತಿಗೊಳಪಡುತ್ತದೆ.ಹಾಗೆಯೇ ಬಂಟ್ವಾಳ  ಕ್ಷೇತ್ರ ಸೇರಿದಂತೆ  ತಾಲೂಕಿಗೆ ಸಂಬಂಧಿಸಿದ  ಹಲವಾರು ಗ್ರಾಮಗಳ ಜನರು ತಮ್ಮ ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನು ತಕರಾರು, ಇನ್ನಿತರ ಮೇಲ್ಮನವಿ ಸಲ್ಲಿಸಲು ಹಾಗೂ ವ್ಯವಹಾರಕ್ಕೊಳ ಪಟ್ಟ ಕೆಲಸಗಳಿಗೆ ಮಂಗಳೂರು ಉಪವಿಭಾಗದ ಸಹಾಯಕ ಕಛೇರಿಗೆ ಅಲೆದಾಡಬೇಕಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಸಹಾಯಕ ಆಯುಕ್ತರ ಕಛೇರಿಯು ಈಗಾಗಲೇ ಮಂಗಳೂರು, ಬಂಟ್ವಾಳ ಸೇರಿದಂತೆ ಹೊಸದಾಗಿ ರಚಿಸಲಾದ ಮೂಲ್ಕಿ, ಮೂಡಬಿದ್ರಿ ಮತ್ತು ಉಳ್ಳಾಲ ತಾಲೂಕುಗಳನ್ನು ಹೊಂದಿದ್ದು ವ್ಯಾಪ್ತಿಯು ತುಂಬಾ ವಿಸ್ತಾರವಾಗಿರುತ್ತದೆ. ಅಲ್ಲದೆ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದ್ದು ಜನಸಾಮಾನ್ಯರ ಕೆಲಸ ಕಾರ‍್ಯಗಳು, ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಜಮೀನುಗಳ ಕಡತಗಳೂ ಸಹ ಕೆಲಸದ ಒತ್ತಡದಿಂದಾಗಿ ನಿಧಾನವಾಗುತ್ತಿದೆ ಎಂದು ಪ್ರಭು ಮನವಿಯಲ್ಲಿ ವಿವರಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ದೂರದ ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರ ಕಛೇರಿಗೆ ಹೋಗಬೇಕಾಗಿದ್ದು ಬೆಳ್ತಂಗಡಿ ಜನತೆಗೆ ಸಹ ದೂರದ ಪುತ್ತೂರಿಗೆ ಹೋಗಿ ಬರಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮಗಳು ಬಂಟ್ವಾಳ ತಾಲೂಕಿಗೆ ತುಂಬಾ ಹತ್ತಿರ ಮತ್ತು ಪಕ್ವವಾದ ರೀತಿಯಲ್ಲಿವೆ ಎಂದು ತಿಳಿಸಿರುವ ಅವರು ಕಳೆದ ಹಲವು ವರ್ಷಗಳಿಂದ ಬಂಟ್ವಾಳವನ್ನು  ಕೇಂದ್ರವಾಗಿರಿಸಿಕೊಂಡು ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಿಗೆ ಬಂಟ್ವಾಳದಲ್ಲಿ ಸಹಾಯಕ ಆಯುಕ್ತರ ಕಛೇರಿ ತೆರೆಯಬೇಕೆಂಬ ಬೇಡಿಕೆಗಳಿದ್ದು, ಬಂಟ್ವಾಳ ಮಿನಿವಿಧಾನ ಸೌಧದಲ್ಲಿ ಸ್ಥಳಾವಕಾಶವು ಇದೆ ಎಂದು ಅವರು ತಿಳಸಿದ್ದಾರೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ   ಮುಖ್ಯ ಮಂತ್ರಿಗಳು, ಕಂದಾಯ ಸಚಿವರಿಗೆ ಶಿಫಾರಸ್ಸು ಮಾಡಿ ಅಧಿಕಾರ ವಿಕೇಂದ್ರಿಕರಣದಡಿಯಲ್ಲಿ ಸಹಾಯಕ ಆಯುಕ್ತರ ಕಛೇರಿ ಅಗತ್ಯತೆ ಬಗ್ಗೆ ಮನವರಿಕೆ ಮಾಡಿ ಮಂಜೂರುಗೊಳಿಸಲು ಪ್ರಯತ್ನಿಸುವಂತೆ ತಾಪಂ ಸದಸ್ಯ ಪ್ರಭಾಕರಪ್ರಭು ಅವರು ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಮತ್ತು ಹರೀಶ್ ಪೂಂಜಾ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here