

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಈಗಾಗಲೇ ಘನತ್ಯಾಜ್ಯ, ಸ್ಮಶಾನ, ದಫನ ಭೂಮಿ, ನಿವೇಶನ ಇತ್ಯಾದಿ ಸಾರ್ವಜನಿಕ ಉದ್ದೇಶಗಳಿಗೆ ಗ್ರಾಮ ಪಂಚಾಯತ್ ಗಳು ಗುರುತಿಸಿ ಬೇಡಿಕೆ ಸಲ್ಲಿಸಿರುವ ಜಮೀನು ಕಾದಿರಿಸುವಿಕೆ ಕಡತಗಳು ಕಂದಾಯ ಇಲಾಖೆಯ ವಿವಿಧ ಹಂತಗಳಲ್ಲಿ ವಿಳಂಬವಾಗುತ್ತಿರುವುದರಿಂದ ಗ್ರಾಮಸ್ಥರ ಮೂಲಭೂತ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ತೊಂದರೆಯಾಗುತ್ತಿರುವುದರ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಕಂದಾಯ ಸಚಿವ ಆರ್.ಅಶೋಕ್ ರವರಿಗೆ ಮನವಿ ಸಲ್ಲಿಸಲಾಯಿತು. ಮನವಿಗೆ ಉತ್ತರಿಸಿದ ಸಚಿವರು ಈ ಸಂಬಂಧಿತ ವಿಷಯಗಳ ಬಗ್ಗೆ ಪ್ರಥಮ ಆದ್ಯತೆ ನೀಡಿ ಸಂಬಂಧಪಟ್ಟವರಿಗೆ ಸೂಚಿಸಿ ಸರಕಾರದ ಮಟ್ಟದಲ್ಲೂ ವಿಶೇಷ ಗಮನ ಹರಿಸುವುದಾಗಿ ಭರವಸೆ ನೀಡಿದರು. ಪಂಚಾಯತ್ ಪ್ರತಿನಿಧಿಗಳ ರಾಜ್ಯ ಒಕ್ಕೂಟದ ಪ್ರತಿನಿಧಿ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಒಕ್ಕೂಟದ ಸದಸ್ಯರಾದ ಪವಿತ್ರ ಪೂಂಜಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








