ಇತರರಿಗೆ ಸಹಾಯ ನೀಡದ ಮತ್ತು ಇತರರಿಂದ ಸಹಾಯ ಬೇಡದ ವ್ಯಕ್ತಿಗಳು ಅತೀ ವಿರಳ. ಇತರರ ಸಹಾಯವಿಲ್ಲದೇ ಇದ್ದರೆ ನಮ್ಮ ಬದುಕು ಅರ್ಥಪೂರ್ಣವಾಗದು. ನಮ್ಮ ಸಹಾಯವು ಇತರರ ಬಾಳಿಗೆ ಪೂರಕವಾದರೆ ಅದು ಸಾರ್ಥಕ ಸಹಾಯ. ನಮ್ಮ ಸಹಾಯದಿಂದ ಸಹಾಯಾರ್ಥಿಗೆ ಯಾವುದೇ ರೀತಿಯಲ್ಲಿ ಮಾರಕವೆನಿಸುವುದಾದರೆ ಅಂತಹ ಸಹಾಯ ಮಾಡಲೇ ಬಾರದು. ಸಹಾಯ ಮಾಡುವಾಗ ಸಹಾಯ ಪಡೆಯಬೇಕಾದ ವ್ಯಕ್ತಿಯ ವ್ಯಕ್ತಿತ್ವವನ್ನೂ ಗಮನಿಸಬೇಕಾಗುತ್ತದೆ. ಕಳ್ಳರು, ದರೋಡೆಕೋರರು, ಕೊಲೆಗಾರರು ಮೊದಲಾದವರಿಗೆ ಅವರ ಕೆಲಸದಲ್ಲಾಗಲೀ, ಅವರ ಅಗತ್ಯಗಳಲ್ಲಾಗಲೀ ಸಹಾಯ ಮಾಡಲೇ ಬಾರದು.
ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗೆ ಸಹಾಯ ಮಾಡಬಾರದು. ಅವನಿಗೆ ಸಹಾಯ ಮಾಡುವುದರಿಂದ ಸಹಾಯ ಮಾಡಲು ಹೊರಟವನ ಚಾರಿತ್ರ್ಯವನ್ನು ಅದೇ ಪರೀಕ್ಷಾರ್ಥಿ ಅಂತರಂಗದಲ್ಲೇ ಪ್ರಶ್ನಿಸುತ್ತಾನೆ. ಅವನ ಬಗ್ಗೆ ಹೊಂದಿರುವ ಗೌರವದ ಭಾವನೆ ಪರೀಕ್ಷಾರ್ಥಿಯ ಮನದೊಳಗೆ ಅಳಿದು ಹೋಗುವುದಲ್ಲದೆ ಈತ ಕ್ಷುಲ್ಲಕನೆಂಬ ಭಾವನೆ ಉಳಿದು ಬಿಡುತ್ತದೆ. ನಮ್ಮ ಮಾನವು ಒಬ್ಬ ವಿದ್ಯಾರ್ಥಿಯ ಮುಂದೆ ಹರಾಜಾಗುವುದಲ್ಲದೆ, ಆತ ಇತರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ನಮ್ಮ ಬಗ್ಗೆ ನೀಡುವ ಪ್ರಚಾರ ಸಮಾಜದ ಮುಂದೆ ನಮ್ಮ ಘನತೆಯನ್ನು ಪ್ರಶ್ನಾರ್ಹಗೊಳಿಸುತ್ತದೆ.
ಸಹಕರಿಸುವ ಮನೋಗುಣ ಇಂದು ಮಾಯವಾಗಿದೆ. ಬಸ್ ಬರುವುದು ತಡವಾಗಿ ಬಿಟ್ಟರೆ ಯಾತ್ರಾರ್ಥಿಗಳು ಬಸ್ ನಿಲ್ದಾಣದಲ್ಲಿ ಟಿ.ಸಿ.ಯೊಂದಿಗೆ ಜಗಳ ಆರಂಭಿಸುತ್ತಾರೆ. ಹೋಟೆಲ್ ಮಾಣಿಯು ಹೋಟೆಲಿಗೆ ಬಂದಿರುವ ಗ್ರಾಹಕನಿಗೆ ಆತ ಹೇಳಿದುದನ್ನು ತರುವುದರಲ್ಲಿ ತಡಮಾಡಿದರೆ ಆ ಮಾಣಿ ಕಿವಿ ಮುಚ್ಚುವಂತಹ ಬೈಗುಳಗಳನ್ನು ಕೇಳಬೇಕಾಗುತ್ತದೆ. ನಮ್ಮಲ್ಲಿರುವ ಅವಸgದ ಗುಣವು ನಮ್ಮ ಸಹಕರಿಸುವ ಗುಣವನ್ನು ಕುಂದಿಸುತ್ತದೆ. ಮದುವೆಗೆ ಬಂದ ಅತಿಥಿಗಳು ತನಗೆ ಸರಿಯಾದ ಆಸನ ದೊರೆಯಲಿಲ್ಲ, ಆತಿಥ್ಯ ದೊರೆಯಲಿಲ್ಲ ಎಂದು ಉಗಿಯುವುದುಂಟು. ಪಾಪ! ಯಜಮಾನನಾದವನು ಬರುವವರ ನಿಖರ ಸಂಖ್ಯೆಯನ್ನು ಊಹಿಸಲಸಾಧ್ಯ. ಇದ್ದ ವ್ಯವಸ್ಥೆಯೊಳಗೆ ಸಹಕರಿಸುವ ಗುಣವು ನಮಗಿದ್ದರೆ ನಮ್ಮ ವ್ಯಕ್ತಿತ್ವವು ಗೌರವಾರ್ಹವಾಗುತ್ತದೆ.
ರೇಷನ್ ಅಂಗಡಿ, ನೀರಿನ ನಳ, ಬಸ್ ಹತ್ತುವುದು, ಟಿಕೆಟ್‌ಗಳನ್ನು ಪಡೆಯವುದು ಮೊದಲಾದ ಅನೇಕ ಸಂದರ್ಭಗಳಲ್ಲಿ ಸರತಿಯ ಸಾಲಿನಲ್ಲಿ ನಿಲ್ಲುವುದು ನಮ್ಮ ಶಿಸ್ತನ್ನು ತೋರಿಸುತ್ತದೆ. ಸಹಕರಿಸ ಬಲ್ಲವರಿಗೆ ಮಾತ್ರವೇ ಇಲ್ಲಿ ಶಿಸ್ತನ್ನು ಪಾಲಿಸಲು ಸಾಧ್ಯವಾಗುತ್ತದೆ. ತಾಳ್ಮೆ ಕೆಟ್ಟವನಿಗೆ, ದುರಹಂಕಾರಿಗೆ ಸರತಿಯ ಸಾಲು ಮುಜುಗರ ತರುತ್ತದೆ. ಅವನು ಸಾಲಿನ ಮುಂಭಾಗದಿಂದ ನುಸುಳುವ ಪ್ರಯತ್ನ ಮಾಡುತ್ತಾನೆ. ಸಹಕರಿಸುವ ಗುಣವಿರದವರು ಇತರರ ಅಸಹನೆಗೊಳಗಾಹುತ್ತಾರೆ. ಪರಸ್ಪರ ಸಹಕರಿಸುವುದರೊಂದಿಗೆ ಸರತಿ ಸಾಲಿನ ಶಿಷ್ಠಾಚಾರವನ್ನು ಪಾಲಿಸ ಬಲ್ಲವನೇ ಗೌರವಾರ್ಹನಾಗುತ್ತಾನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಅಸಹಕಾರ ತೋರಿದ ನೆರೆ ರಾಜ್ಯದ ಸಿನೇಮಾ ಹೀರೋ, ರಾಜಕೀಯ ನೇತಾರ ನಿಂದನೆಗೊಳಗಾಗಿ ಝೀರೋ ಆದುದು ಸಹಕರಿಸುವ ಗುಣದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ನಮ್ಮಲ್ಲಿ ಸಹಾಯ ಮಾಡುವ ಗುಣ ಬಲಿಯಲಿ. ಸಹಕಾರ ತತ್ವ ಸಮಾಜವನ್ನು ಎಷ್ಟು ಬಲಿಷ್ಠಗೊಳಿಸುತ್ತಿದೆ ಎಂಬುದನ್ನು ನಿತ್ಯ ಅನುಭವಿಸುವ ನಾವು ಸಹಕರಿಸುವಲ್ಲಿ ಹಿಂಜರಿಯುವುದು ಬೇಡ. ಸಹಾಯ ಸಹಕಾರಗಳಿಂದ ನಾವು ಬಲಿಷ್ಠರಾಗುತ್ತೇವೆಯೇ ವಿನಹ ದುರ್ಬಲರಾಗುವುದಿಲ್ಲ. ನಾವು ಸಹಕಾರಿಗಳಾಗೋಣ.

 

 

-ರಮೇಶ ಎಂ ಬಾಯಾರು

ಎಂ.ಎ; ಬಿಎಡ್: ರಾಜ್ಯಪ್ರಶಸ್ತಿ ಪುರಸ್ಕೃತ

ನಿವೃತ್ತ ಅಧ್ಯಾಪಕರು ನಂದನ ಕೇಪು 9448626093

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here