ಬಂಟ್ವಾಳ: ತುಂಬೆ ಸಮೀಪದ ತಲಪಾಡಿ ಧಕ್ಕೆಯಿಂದ ಆನ್‌ಲೈನ್ ಮೂಲಕ ಪೂರೈಕೆಯಾಗುತ್ತಿರುವ ಮರಳಿಗೆ ದಿನೇ, ದಿನೇ ಬೇಡಿಕೆ ಕಡಿಮೆಯಾಗತೊಡಗಿದೆ. ತುಂಬೆ ಅಣೆಕಟ್ಟಿನ ಸಮೀಪದ ತೆಗೆಯಲಾದ ಉತ್ತಮ ಗುಣಮಟ್ಟದ ಮರಳು ಡಿಕೆ ಸ್ಯಾಂಡ್ ಬಜಾರ್.ಕಾಂ ಮೂಲಕ ಮಾರಾಟಕ್ಕೆ ಲಭ್ಯವಿದ್ದರೂ ಕಳೆದ ತಿಂಗಳಿನಲ್ಲಿ ಮರಳು ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮರಳುಗಾರಿಕೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸುಲಭ ನಿರ್ವಹಣೆಗಾಗಿ ಅಂದಿನ ದ.ಕ. ಜಿಲ್ಲಾಧಿಕಾರಿ ನೇತೃತ್ವದ ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಹಾಗೂ ಭೂವಿಜ್ಞಾನ ಮತ್ತು ಗಣಿ ಇಲಾಖೆಯ ಅಧೀನದಲ್ಲಿ ಆನ್‌ಲೈನ್ ಬುಕ್ಕಿಂಗ್ ಮೂಲಕ ಮರಳು ಪಡೆಯಯಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ತುಂಬೆ ವೆಂಟೆಡ್ ಡ್ಯಾಂನಿಂದ ಸುಮಾರು 500 ಮೀಟರ್ ದೂರದಲ್ಲಿ ತಲಪಾಡಿ ಬಳಿ ನದಿಯಿಂದ ಡ್ರೆಜ್ಜಿಂಗ್ ಮೂಲಕ ಮೇಲೆತ್ತಲ್ಪಟ್ಟ ಮರಳನ್ನು ಪಕ್ಕದ ವಿಶಾಲವಾದ 2 ಯಾರ್ಡ್‌ನಲ್ಲಿ ಸಂಗ್ರಹಿಸಿ, ಆನ್‌ಲೈನ್ ಮೂಲಕ ಕಡಿಮೆ ದರಲ್ಲಿ ಸಾರ್ವಜನಿಕರಿಗೆ ವಿತರಣೆಯಾಗುತ್ತಿತ್ತು. ಆದರೆ, ದ.ಕ.ಜಿಲ್ಲೆಯಲ್ಲಿ ಸಿಆರ್‌ಝಡ್ ಮರಳು ಮಾಫಿಯ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದರಿಂದ ಡಿಕೆ ಸ್ಯಾಂಡ್ ಬಝಾರ್‌ನಿಂದ ಆನ್‌ಲೈನ್ ಮೂಲಕ ವಿತರಣೆಯಾಗುತ್ತಿರುವ ಮರಳು ಬೇಡಿಕೆ ಕುಸಿದಿದೆ.

 

 

ಬೇಡಿಕೆ ಕಡಿಮೆಯಾಗಲು ಕಾರಣವೇನು?:
ನಾನ್ ಸಿಆರ್‌ಝಡ್ ಭಾಗದ ಮರಳಿನ ಗುಣಮಟ್ಟ ಉತ್ತಮವಾಗಿದ್ದು, ಇದಕ್ಕೆ ಹೋಲಿಸಿದರೆ ಸಿಆರ್‌ಝಡ್ ಭಾಗದಲ್ಲಿರುವ ಮರಳು ಉಪ್ಪು ನೀರಿನ ಮರಳಾಗಿದ್ದು, ಕಡಿಮೆ ಗುಣಮಟ್ಟದ್ದಾಗಿದೆ. ನಾನ್ ಸಿಆರ್‌ಝಡ್ ಭಾಗದ ಮರಳು ಕಾಮಗಾರಿಗೂ ಹೆಚ್ಚು ಸುರಕ್ಷಿತವಾಗಿದೆ. ತುಂಬೆಯಲ್ಲಿ 80 ಸಾವಿರಕ್ಕೂ ಅದಿಮೆಟ್ರಿಕ್ ಟನ್ ಮರಳಿದೆ ಎಂದು ಅಂದಾಜಿಸಲಾಗಿದ್ದು, ಜೂನ್‌ನಲ್ಲಿ ಮರಳು ಡ್ರೆಜ್ಜಿಂಗ್ ಶುರು ಮಾಡಲಾಗಿತ್ತು. ಎರಡು ತಿಂಗಳ ಹಿಂದೆ ತುಂಬೆಯ ಮರಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಇದರಿಂದ ದಿನಾಲೂ ನೂರಾರು ಟಿಪ್ಪರ್, ಲಾರಿಗಳು ಈ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದವು. ಮರಳಿನ ಬೇಡಿಕೆ ಹೆಚ್ಚಾದರಿಂದ ಯಾರ್ಡ್‌ನಲ್ಲಿ ಮರಳಿನ ಕೊರತೆ ಉಂಟಾದ ಬಳಿಕ ದಿನಕ್ಕೆ 100 ಬುಕ್ಕಿಂಗ್‌ಗಳಿಗೆ ಮಾತ್ರ ಮರಳು ಪೂರೈಕೆ ಮಾಡಲಾಗುತ್ತಿದ್ದವು. ಬಳಿಕ ಮತ್ತಷ್ಟು ಬೇಡಿಕೆ ಹಿನ್ನೆಲೆಯಲ್ಲಿ ದಿನಕ್ಕೆ ಒಂದು ಮೊಬೈಲ್ ನಂಬರಿಗೆ ಒಂದೇ ಲೋಡ್ ಮರಳು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತಲಪಾಡಿ ದಕ್ಕೆಯ ಎರಡೂ ಯಾರ್ಡ್‌ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮರಳನ್ನು ಶೇಖರಣೆ ಮಾಡಿದರೂ ಸಿಆರ್‌ಝಡ್ ಮರಳು ತೆಗೆಯಲು ಅನುಮತಿ ನೀಡಿದ ನಂತರ ಇಲ್ಲಿನ ಮರಳಿಗೆ ಬೇಡಿಕೆ ಕಡಿಮೆಯಾಗಿದೆ.

ಜಿಲ್ಲೆಯ ಎಲ್ಲ ಪಿಡಿಒಗಳಿಗೆ ತರಬೇತಿ
ಇದೀಗ ಆನ್‌ಮೂಲಕ ಮೂಲಕ ನೋಂದಣಿ ಪ್ರಕ್ರಿಯೆ ನಿರಂತವಾಗಿ ನಡೆಯುತ್ತಿದೆ. ಆದರೆ, ಇತ್ತೀಚೆಗೆ ದಿನಗಳಲ್ಲಿ ಬುಕ್ಕಿಂಗ್ ಕಡಿಮೆಯಾಗುತ್ತಿವೆ. ಸಿಆರ್‌ಝಡ್‌ನಲ್ಲಿ ಮರಳು ಪೂರೈಕೆ ಪ್ರಾರಂಭವಾಗದೇ ಸಂದರ್ಭದಲ್ಲಿ ತುಂಬೆ ದಕ್ಕೆಯಿಂದ ದಿನಕ್ಕೆ ನೂರು ಲೋಡ್‌ಗಳಷ್ಟು ಮರಳು ಪೂರೈಕೆಯಾಗುತ್ತಿತ್ತು. ಇದೀಗ ಸಿಆರ್‌ಝಡ್‌ನಲ್ಲಿ ಮರಳು ಸಿಗುವುದರಿಂದ ಜನರು ಸ್ಥಳೀಯ ದಕ್ಕೆಯಿಂದ ಮರಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅದಲ್ಲದೆ, ಜನರಿಗೆ ಆನ್‌ಲೈನ್ ಮರಳು ಪೂರೈಕೆ ಬಗ್ಗೆ ಸರಿಯಾದ ಮಾಹಿತಿ, ಪ್ರಚಾರ ಇಲ್ಲದಿರುವುದು ಇನ್ನೊಂದು ಕಾರಣ. ಪ್ರತಿಯೊಬ್ಬರು ಮರಳು ತಲುಪಬೇಕೆನ್ನುವ ಉದ್ದೇಶದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಹಾಗೂ ಗ್ರಾಪಂ ಪಿಡಿಒಗಳಿಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದ್ದು, ಇಂದಿನಿಂದ ಮಂಗಳೂರಿನ ಜಿಪಂ ಕಚೇರಿ ಹಾಗೂ ಪುತ್ತೂರಿನಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದೆ.
-ಪದ್ಮಶ್ರೀ, ಉಪನಿರ್ದೇಶಕಿ
ಗಣಿ ಮತ್ತು ಭೂವಿಜ್ಞಾನ ಇಲಾಖೆ

ಮರಳು ಪೂರೈಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಮೊದಲಿದ್ದ ಜಿಲ್ಲಾಧಿಕಾರಿ ಅವರು ಈ ಹೊಸ ಯೋಜನೆಯು ಪ್ರಾರಂಭದಲ್ಲಿ ಯಶಸ್ಸು ಕಂಡಿದೆ. ಇದೀಗ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತಿರುವುದರಿಂದ ತುಂಬೆ ಸ್ಯಾಂಡ್ ಬಜಾರ್‌ಗೆ ಬೇಡಿಕೆ ಕಡಿಮೆಯಾಗಿದೆ. ತುಂಬೆಯಲ್ಲಿ 5500 ರೂ.ಗೆ 10 ಟನ್ ಮರಳು ನೀಡಿದರೆ, ಉಳಿದ ಕಡೆಗಳಲ್ಲಿ ಲಾರಿ ತುಂಬಾ ಮರಳು ನೀಡುವುದರಿಂದ ಲಾರಿ ಚಾಲಕರು, ಗುತ್ತಿಗೆದಾರರು, ಮನೆ ಮಾಲಕರು, ಬಿಲ್ಡರ್ಸ್‌ಗಳು ಹೆಚ್ಚು ಮರಳು ಸಿಗುವ ಮುಖ ಮಾಡಿದ್ದಾರೆ.
-ಬೊಂಡಾಲ ಚಿತ್ತರಂಜನ್ ಶೆಟ್ಟಿ,
ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಇಂಟೆಕ್)

ಡಿಕೆ ವೆಬ್‌ಸೈಟ್‌ನಲ್ಲಿ ಹೊಸ ಫೀಚರ್:
ಡಿಕೆ ಸ್ಯಾಂಡ್ ಬಜಾರ್ ವೆಬ್‌ಸೈಟ್‌ನಲ್ಲಿ ಹೊಸ ಫೀಚರ್‍ಸ್ ಅನ್ನು ಸೇರಿಸಲಾಗಿದೆ. ಈ ಮೊದಲು ಬುಕ್ಕಿಂಗ್ ಸ್ಯಾಂಡ್, ಟ್ರ್ಯಾಕ್ ಆರ್ಡರ್ ಹಾಗೂ ಸೆಟ್ಟಿಂಗ್ ವ್ಯವಸ್ಥೆ ಇತ್ತು. ಇದೀಗ ಗುತ್ತಿಗೆದಾರರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ “ಬಲ್ಕ್” ಎಂಬ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ. ದೊಡ್ಡ ಗುತ್ತಿಗೆದಾರರು, ಬಿಲ್ಡರ್‌ಗಳು ಮತ್ತಿತರ ಮರಳು ಬಳಕೆದಾರರಿಗೆ ದಿನಕ್ಕೆ ನೂರಾರು ಲೋಡ್ ಮರಳು ಬೇಕಾಗುತ್ತವೆ. ಇದಕ್ಕಾಗಿ ಸಂಬಂಧಪಟ್ಟವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪೂರಕ ದಾಖಲೆಗಳನ್ನು ನೀಡಿ ಅಲ್ಲಿಂದ ಪರವಾನಿಗೆ ಪಡೆದುಕೊಂಡು ಬಲ್ಕ್ ಮೂಲಕ ಸುಲಭವಾಗಿ ಮರಳು ಪಡೆಯಬಹುದಾಗಿದೆ ಎಂದು ವೆಬ್‌ಸೈಟ್, ಆಪ್ ಡೆವಲಪ್‌ನ ಇಂಜಿಯರ್ ಅವರು ಮಾಹಿತಿ ನೀಡುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here