ಬರಹ: ರೋನ್ಸ್ ಬಂಟ್ವಾಳ್

ಮುಂಬಯಿ: ಭಾರತ ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯ ಇತಿಹಾಸದಲ್ಲಿ ತುಳು-ಕನ್ನಡಿಗರು ಮೂಡಿಸಿದ ಹೆಜ್ಜೆಗುರುತುಗಳು ಮಹಾನಗರದ ಬೆಳವಣಿಗೆಯಲ್ಲಿ ನಿರ್ಣಾಯಕವಾದುದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆಥಿಕ, ರಾಜಕೀಯ, ಬಾಲಿವುಡ್ ಇನ್ನಿತರ ರಂಗಗಳಲ್ಲೂ ಕನ್ನಡಿಗರು ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಮಹಾರಾಷ್ಟ್ರದ ನೆಲವನ್ನು ಕರ್ಮಭೂಮಿ ಅನ್ನಾಗಿಸಿದರೂ ಇಲ್ಲಿನ ಸಂಸ್ಕೃತಿ ಪರಂಪರೆಗಳಿಗೆ ಸ್ಪಂದಿಸಿ ಸೌಹಾರ್ದತೆಯ ಬದುಕನ್ನು ರೂಪಿಸುತ್ತಾ ತಮ್ಮೂರ, ತಾಯ್ನಾಡ ಸಂಸ್ಕೃತಿ, ದೈವದೇವರುಗಳನ್ನು ಇಲ್ಲಿ ಪ್ರತಿಷ್ಠಾಪಿಸಿ ಸಾಮರಸ್ಯದ ಬಾಳಿಗೆ ತುಳು-ಕನ್ನಡಿಗರು ಪ್ರೇರಕರೂ ಹೆಸರುವಾಸಿಯಾಗಿದ್ದಾರೆ. ಈ ಎಲ್ಲಾ ಶ್ರೇಷ್ಠ ಪರಂಪರೆಯ ಮಧ್ಯೆ ಅನೇಕ ರಾಜಕೀಯ ನಾಯಕರು ಪಕ್ಷ ಭೇದವಿಲ್ಲದೆ ತುಳು-ಕನ್ನಡ ಭಾಷೆ, ಸಂಸ್ಕೃತಿ ಜೊತೆಗೆ ಕರುನಾಡ ನೆಲದ ಕೀರ್ತಿ ಪತಾಕೆಯನ್ನು ಇಲ್ಲಿ ಹಾರಿಸಿದ್ದಾರೆ. ಆ ಪೈಕಿ ಅನೇಕರು ಇದೀಗಲೇ ನಗರಸೇವಕರು, ಮಹಾರಾಷ್ಟ್ರ ರಾಜ್ಯದ ವಿಧಾನ ಸಭೆಗೆ ಪ್ರತಿನಿಧಿಸಿ ಶಾಸಕರೂ, ಸಂಸದರೂ ಸಚಿವರೂ ಆಗಿ ಜನಪ್ರತಿನಿಧಿಗಳಾಗಿ ಮೆರೆದಿದ್ದಾರೆ. ಏತನ್ಮಧ್ಯೆ ಇದೀಗ ಮತ್ತೆ ೨೦೧೯ರ ಸಾಲಿನ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ನೂತನ ಸರಕಾರದಲ್ಲಿ ಸ್ಥಾನ ಗಿಟ್ಟಿಸಿ ಕೊಳ್ಳಲು ಈ ಬಾರಿಯೂ ತುಳು ಕನ್ನಡಿಗ ಸ್ಪರ್ಧಿಗಳು ಅಖಾಡಕ್ಕಿಳಿದಿದ್ದಾರೆ. ಅದರೆ ಈ ಬಾರಿ ಬರೇ ಇಬ್ಬರೇ ತುಳು ಕನ್ನಡಿಗರು ಸ್ಪರ್ಧಿಸುತ್ತಿರುವುದು ವ್ಯಥೆಯೆಣಿಸುತ್ತಿದೆ.

ಹೊರನಾಡ ಕರ್ಮಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿ ಜನತಾ ಸೇವೆಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಈ ಕನ್ನಡಿಗ ನಾಯಕರಿಗೆ ಮಾತೃಭಾಷೆ-ಪ್ರಾದೇಶಿಕ ನೆಲೆಯ ವಿಚಾರ ಎಂದೂ ಅಡ್ಡಿಯಾಗಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಸ್ಪರ್ಧಿಸಲು ಮುಕ್ತ ಅವಕಾಶವಿದೆ ಎನ್ನುವುದನ್ನು ಶಾಬೀತು ಪಡಿಸಿ ರಾಷ್ಟ್ರದ ಪ್ರಜಾಪ್ರಭುತ್ವ ಹಿರಿಮೆಯನ್ನು ಎತ್ತಿಹಿಡಿದ ನಮ್ಮವರು ಮತ್ತೆ ಸ್ಪರ್ಧಾ ಕಣದಲ್ಲಿ ಕಂಗೋಳಿಸುತ್ತಿದ್ದಾರೆ. ಆ ಪೈಕಿ ಭಿವಂಡಿ ಪೂರ್ವದ ವಿಧಾನ ಸಭಾ ಕ್ಷೇತ್ರದಿಂದ ಸಂತೋಷ್ ಎಂ.ಶೆಟ್ಟಿ ಮತ್ತು ಅಂಧೇರಿ ಪೂರ್ವದ ವಿಧಾನ ಸಭಾ ಕ್ಷೇತ್ರದಿಂದ ಜಗದೀಶ್ ಕುಟ್ಟಿ ಅವಿನ್ ಕಣಕ್ಕಿಳಿದಿದ್ದಾರೆ.

ಸಂತೋಷ್ ಎಂ.ಶೆಟ್ಟಿ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಮೂಡುಬೆಳ್ಳೆ ಗ್ರಾಮದ ಹಾಡಿಮನೆ ನಿವಾಸಿ ಮಂಜಯ್ಯ ಶೆಟ್ಟಿ ಮತ್ತು ಶಾಂತಾ ಮಂಜಯ್ಯ ಸುಪುತ್ರರಾದ ಸಂತೋಷ್ ಎಂ.ಶೆಟ್ಟಿ ಅವರು ಭಿವಂಡಿ ಸಂತೋಷ್ ಎಂದೇ ಜನಜನಿತರು. ೨೦೧೪ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯಥಿಯಾಗಿ ಮೊದಲ ಬಾರಿ ಭಿವಂಡಿ ಕ್ಷೇತ್ರದಿಂದ ಸ್ಪರ್ಧಿಸಿರುವ ತುಳು-ಕನ್ನಡಿಗ.

ಮುಂಬಯಿ ಉಪನಗರದ ಭಿವಂಡಿ ನಿಜ್ಹಾಮಪುರ ಸಿಟಿ ಮುನ್ಸಿಪಾಲ್ ಕಾರ್ಪೋರೇಶನ್ (ಭಿವಂಡಿ ನಗರಪಾಲಿಕೆ -ಬಿಎನ್‌ಸಿಎಂಸಿ)ಗೆ 1996ರಿಂದ ಸ್ವತಂತ್ರ ವಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಸಂತೋಷ್ 18 ವರ್ಷಗಳಿಂದ ನಿರಂತರ ನಗರ ಸೇವಕರಾಗಿ ಶ್ರಮಿಸಿದ ಸಮಾಜ ಸೇವಕ. ‘ಭಿವಂಡಿ ಕಾ ಅಣ್ಣಾ’ ಎಂದೇ ಖ್ಯಾತಿಯಲ್ಲಿರುವ ಸಂತೋಷ್ ಬಳಿಕ ಪಕ್ಷೇತರ ಅಭ್ಯಥಿಯಾಗಿ, ಬಿಎನ್‌ಸಿಎಂಸಿನ ಸ್ವತಂತ್ರ ಸಮೂಹ ನಾಯಕರಾಗಿ, ವಿರೋಧ ಪಕ್ಷ ನಾಯಕರಾಗಿ, ಸ್ಥಾಯಿ ಸಮಿತಿ ಕಾರ್ಯಾಧ್ಯಕ್ಷರಾಗಿ, ಮೂರು ಬಾರಿ ಸಾರ್ವಜನಿಕ ಕಾಮಗಾರಿ ಸಮಿತಿ ಕಾರ್ಯಾಧ್ಯಕ್ಷರಾಗಿ, ನೀರು ಸರಬರಾಜು ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ ಯುವ ರಾಜಕಾರಣಿ.

ಭಿವಂಡಿ ವಲಯ ಪೋಲಿಸ್ ಶಾಂತಿ ಸೌಹಾರ್ದ ಸಮಿತಿ ಸದಸ್ಯರಾಗಿದ್ದು, ಸ್ವಾಮಿ ಅಯ್ಯಪ್ಪ ಸೇವಾ ಸಮಿತಿ ಭಿವಂಡಿ ಇದರ ಕಾರ್ಯಾಧ್ಯಕ್ಷರಾಗಿರುವ ಸಂತೋಷ್ ಅವರು ಸ್ವಾಭಿಮಾನ್ ಸೇವಾ ಸಂಸ್ಥೆ ಭಿವಂಡಿ ಜಿಲ್ಲಾಧ್ಯಕ್ಷರಾಗಿಯೂ ದುಡಿದವರು. ಮಹಾರಾಷ್ಟ್ರ ರಾಜ್ಯದ ವಿಶೇಷ ಕಾರ್ಯಕಾರಿ ಸದಸ್ಯರಾಗಿರುವರು. ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ) ತೊರೆದು ಬಿಜೆಪಿ ಅಭ್ಯಥಿಯಾಗಿ ಭಿವಂಡಿಯಿಂದ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಮತ್ತೆ ರಾಷ್ಟ್ರೀಯ ಕಾಂಗ್ರೇಸ್ (ಐ) ಮಾತೃಪಕ್ಷಕ್ಕೆ ಸೇರಿ ಸ್ಪರ್ಧಿಸುತ್ತಿದ್ದಾರೆ. ಪತ್ನಿ ಶಶಿಲತಾ ಸಂತೋಷ ಶೆಟ್ಟಿ ಅವರೂ ಭಿವಂಡಿಯ ನಗರಸೇವಕಿ ಆಗಿದ್ದು, ಈ ಬಾರಿಯಂತೂ ಸಂತೋಷ್ ಗೆಲುವು ನಿಶ್ಚಿತ ಅನ್ನುತ್ತಿದ್ದಾರೆ.

ಜಗದೀಶ್ ಕೆ. ಅವಿನ್
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಕಾರ್ಕಳ ತಾಲೂಕು ನಿಟ್ಟೆ ಅತ್ತೂರು ಶ್ರೀಮೈಲಜಾ ನಿವಾಸಿ ಕುಟ್ಟಿ ಅವಿನ್ ಕುಟ್ಟಿ ಅವಿನ್ ಮತ್ತು ಲೀಲಾ ಕೆ. ಅವಿನ್ ದಂಪತಿ ಸುಪುತ್ರ. ಕುಟ್ಟಿ ಅವಿನ್ ಅವರು ಬೋಂಬೇ ಫೋರ್ಟ್ ಫ್ರೀ ನೈಟ್ ಹೈಸ್ಕೂಲುನಲ್ಲಿ ಕಲಿತು ಮುಂಬಯಿವಾಸಿ ಆಗಿದ್ದವರು. ಅಂತೆಯೇ ಜಗದೀಶ್ ಕುಟ್ಟಿ ಅವಿನ್ ಮುಂಬಯಿ ಗೋರೆಗಾಂ ಅಲ್ಲಿನ ಮುನ್ಸಿಪಾಲಿಟಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬಳಿಕ ಘಾಟ್ಕೋಪರ್ ಅಲ್ಲಿನ ಬಂಟ್ಸ್ ಸಂಘ ಮುಂಬಯಿ ಸಂಚಾಲಿತ ಕರ್ನಾಟಕ ಫ್ರೀ ನೈಟ್ ಹೈಸ್ಕೂಲುನಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಅಂಧೇರಿ ಪೂರ್ವದ ಮರೋಲ್ ಇಲ್ಲಿನ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಇದರ ನಗರಸೇವಕರು. ‘ಚಕಲಾ ಕಾ ಅಣ್ಣಾ’ ಎಂದೇ ಪ್ರಸಿದ್ಧ ಅವಿನ್ ಅವರು ಕಳೆದ ಏಳುವರೆ ವರ್ಷಗಳಿಂದ ಅಂಧೇರಿ ಪೂರ್ವದ ಬಿಎಂಸಿ ವಾರ್ಡ್ 76 ಮತ್ತು 82ಗಳಿಂದ ಕ್ರಮವಾಗಿ ನಗರಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಸಕತ್ವದಲ್ಲಿ ಕ್ಷಿಣಿಸುತ್ತಿರುವ ಕನ್ನಡಿಗರು:
ಮಹಾರಾಷ್ಟ್ರ ರಾಜ್ಯ ಅಸ್ತಿತ್ವದಿಂದಲೇ ಸರಕಾರದ ಆಡಳಿತ್ವದಲ್ಲಿ ತುಳುಕನ್ನಡಿಗರು ಜನಪ್ರತಿನಿಧಿಗಳಾಗಿ ಮೆರೆದಿರುವರು. ಎರಡು ದಶಕಗಳ ಇತ್ತೀಚಿಗಿನ ಕಾಲಾವಧಿಯಲ್ಲಿ ಅಂತೂ ಮಹಾರಾಷ್ಟ್ರ ರಾಜ್ಯದ ವಿಧಾನ ಸಭೆಯಲ್ಲಿ ತುಳು-ಕನ್ನಡಿಗರ ಸ್ಪರ್ಧೆಯೂ ಒಂದು ಮಹತ್ತರದ್ದು. 2009ರ ಚುನಾವಣೆಯಲ್ಲಿ ಬೊರಿವಿಲಿ ಪಶ್ಚಿಮ ಕ್ಷೇತ್ರದಿಂದ ಬಿಜೆಪಿ-ಶಿವಸೇನೆ ಪಕ್ಷಗಳ ಮೈತ್ರಿ ಕೂಟದ ಅಭ್ಯಥಿಯಾಗಿ ಗೋಪಾಲ್ ಸಿ.ಶೆಟ್ಟಿ ಸ್ಪರ್ಧಿಸಿ ಪ್ರಚಂಡ ಗೆಲುವು ಸಾಧಿಸಿ ಶಾಸಕರಾಗಿದ್ದರೂ 2014ರ ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಅಭೂತಪೂರ್ವ ಜಯಭೇರಿ ಗಳಿಸಿ ಸಂಸದರಾಗಿ 2014ರ ಚುನಾವಣೆಯಲ್ಲೂ ತಮ್ಮ ಸ್ಥಾನವನ್ನುಳಿಸಿ ರಾಷ್ಟ್ರ ಮನ್ನಣೆಯ ರಾಜಕಾರಣಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ ಮಣಿಪುರ ಮೂಲತಃ ಸುರೇಶ್ ಹಿರಿಯಣ್ಣ ಶೆಟ್ಟಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಂಧೇರಿ ಪೂರ್ವದ ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ (ಐ) ಪಕ್ಷದ ಅಭ್ಯಥಿsಯಾಗಿ ಒಟ್ಟು ನಾಲ್ಕು ಬಾರಿ ಸ್ಪರ್ಧಿಸಿದ್ದರು (2009-2014ರ ಗೆಲುವುನಲ್ಲಿ ಎರಡು ಬಾರಿ ಸಚಿವರೂ ಆಗಿದ್ದರು) ೨೦೧೪ರ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತ ಗೊಂಡರು. ಉಡುಪಿ ಜಿಲ್ಲೆಯ (ಕಾಪು) ಮುದರಂಗಡಿ ಮಾಣಿಬೆಟ್ಟು ನಿವಾಸಿ ಜಗನ್ನಾಥ್ ಅಚ್ಚಣ್ಣ ಶೆಟ್ಟಿ ೨೦೦೪ರ ವಿಧಾನ ಸಭೆಗೆ ಮಾಟುಂಗಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷದಿಂದ ಶಾಸಕರಾಗಿ ಬಳಿಕ ೨೦೦೯ರಲ್ಲಿ ಕ್ಷೇತ್ರ ವಿಗಂಡನೆಯಿಂದ ರೂಪಿತ ಸಯಾನ್ ಕೋಲಿವಾಡ ಕ್ಷೇತ್ರದಿಂದ ಸ್ಪರ್ಧಿಸಿ ದ್ವಿತೀಯ ಬಾರಿ ಶಾಸಕರಾಗಿದ್ದು, ೨೦೧೪ರಲ್ಲಿ ತೃತೀಯ ಬಾರಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ೨೦೦೯ರ ಚುನಾವಣೆಯಲ್ಲಿ ಕಾರ್ಕಳ ನಿಟ್ಟೆ ಇಲ್ಲಿನ ಬೋಳ ಮರಿಮಾರುಗುತ್ತು ಮೂಲತಃ ಕೃಷ್ಣ ಶ್ರೀಪಾದ ಹೆಗ್ಡೆ ವಿಲೇಪಾರ್ಲೆ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾದರೆ ೨೦೧೪ರಲ್ಲಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ೨೦೦೯ ಮತ್ತು ೨೦೧೪ರಲ್ಲಿ ದಹಿಸರ್ ಕ್ಷೇತ್ರದಿಂದ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ಅಭ್ಯಥಿಯಾಗಿ ಡಾ| ಹರೀಶ್ ಭುಜಂಗ ಶೆಟ್ಟಿ ಸ್ಪರ್ಧಿಸಿದ್ದರು. ೨೦೧೪ರಲ್ಲಿ ಉಡುಪಿ ಅಲ್ಲಿನ ಮೂಡುಬೆಳ್ಳೆ ಮೂಲತಃ ಸಂತೋಷ್ ಎಂ.ಶೆಟ್ಟಿ ಮೊದಲ ಬಾರಿ ಭಿವಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವರಾದರೆ ಈ ಬಾರಿ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷದಿಂದ ಕಣಕ್ಕಿಳಿದು ಗೆಲುವಿನ ಆಶಯದಲ್ಲಿದ್ದಾರೆ.

2009ರಲ್ಲಿ ಕಾಂಗ್ರೆಸ್-ಎನ್‌ಸಿಪಿ-ಆರ್‌ಪಿಐ ಮೈತ್ರಿ ಕೂಟದ ಅಭ್ಯಥಿಯಾಗಿ ಘಾಟ್ಕೋಪರ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಜಾನೆಟ್ ಲಾರೆನ್ಸ್ ಡಿಸೋಜಾ (ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವೆ ಸೆಲಿನ್ ಡಿಸಿಲ್ವಾ ಅವರ ಸುಪುತ್ರಿ), ಗೋರೆಗಾಂವ್ ಪಶ್ಚಿಮ ಕ್ಷೇತ್ರದಿಂದ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ) ಅಭ್ಯಥಿಯಾಗಿ ಶರದ್ ರಾವ್, ಮಲಾಡ್ ಪಶ್ಚಿಮ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿಯಾಗಿ ಡೋಲ್ಫಿ ಡಿಸೋಜಾ, ದಹಿಸರ್ ಪಶ್ಚಿಮ ಕ್ಷೇತ್ರದಿಂದ ಜಾತ್ಯಾತೀತ ಜನತಾದಳದ (ತೃತೀಯ ರಂಗದ) ಉಮೇದುವಾರರಾಗಿ ಎಡ್ವಿನ್ ಬ್ರಿಟ್ಟೋ, ಅಂಧೇರಿ ಪಶ್ಚಿಮ ಕ್ಷೇತ್ರದಿಂದ ಜಾಗೃತ್ ನಾಗರಿಕ್ ಮಂಚ್ ಇದರ (ಸಿಟಿಝನ್ ಕ್ಯಾಂಡಿಡೇಟ್) ಉಮೇದುವಾರ ಆಗಿ ಹ್ಯಾನ್ಸಲ್ ಡಿಸೋಜಾ ಮತ್ತು ಪುಣೆಯ ಕ್ಯಾಂಪ್ ಕ್ಷೇತ್ರದಿಂದ ಕಾಂಗ್ರೆಸ್-ಎನ್‌ಸಿಪಿ-ಆರ್‌ಪಿಐ ಪಕ್ಷಗಳ ಜಂಟಿ ಅಭ್ಯಥಿಯಾಗಿ ಸದಾನಂದ ಎಸ್.ಶೆಟ್ಟಿ, ಮೀರಾ-ಭಯಂದರ್ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿಯಾಗಿ ರವಿರಾಜ್ ರಾಥೋಡ್ ಸ್ಪರ್ಧಿಸಿದ ಕನ್ನಡಿಗರಾಗಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here