


ದುರ್ಗಮ ಪ್ರಪಾತದೊಳಗೂ
ನಾ ಸವೆಸುವೆ ದಾರಿಯ
ಪಡೆದು ಪರಕಾಯ ಪ್ರವೇಶ
ನನ್ನೊಳಗೆ ಮನೋಸ್ಥೈರ್ಯ
ಏನೇ ಆಗಲಿ
ನಾ ಆಗೇ ಆಗುವೆ ಸೈನಿಕ
ದೇಶ ರಕ್ಷಣೆಯೇ
ಎಂದಿಗೂ ನನ್ನ ಕಾಯಕ
ತೀವ್ರವಾಗಿದ್ದರೂ ಸೆಣಸಾಟ
ಸೆಡ್ಡು ಹೊಡೆಯದೆ ಬಿಡಲಾರೆ
ನುಸುಳಿ ದಂಗೆ ಎದ್ದವರ
ಬೆನ್ನೆತ್ತಿ ಮಣಿಸದೆ ಇರಲಾರೆ
ಕತ್ತೆತ್ತಿ ಸಂಭ್ರಮಿಸಲು
ಹಗಲು ರಾತ್ರಿಯೆಂದು ನೋಡದೆ
ರಾಷ್ಟ್ರಧ್ವಜವ ಮೇಲೆತ್ತುವೆ
ಎಂದೆಂದೂ ಕೆಳಗಿಳಿಸದೆ
ಬೆಚ್ಚಿ ಬೀಳುವಂತೆ ಶತ್ರುಗಳು
ಸಿಂಹಸ್ವಪ್ನವಾಗಿ ಕಾಡುವೆ
ಒಳಮರ್ಮಗಳ ಅರಿತು
ಹೆಬ್ಬುಲಿಯಾಗಿ ಎಗರಿಬಿಡುವೆ
ಯುದ್ದಭೂಮಿಯಲ್ಲಿ ತಾಂಡವ ನೃತ್ಯ
ತಾಳುವೆ ರುದ್ರನ ರೋಷ ಆವೇಶ
ದೇಶ ಶಾಂತಿಯ ಸಂರಕ್ಷಣೆ
ರೋಮ ರೋಮಗಳಲ್ಲಿಯ ಭಾವವೇಶ
ಭೀತಿಯ ತೊಡೆದು ಹಾಕಿ
ನಿವಾರಿಸುವೆ ಆತಂಕಗಳ
ಹಿಮ್ಮೆಟ್ಟಿಸಿ ಶತ್ರುಗಳ
ಅನುಸರಿಸುವೆ ಪ್ರತಿತಂತ್ರಗಳ
ಹೋರಾಡುವೆ ಅದೇನೇ ಆದರೂ
ಕುರುಹು ಆಗಲಿ ಕೆಚ್ಚೆದೆಯ
ಚಾಣಾಕ್ಷತೆಯ ಛಲದೆದುರು
ಒಲಿದು ಬರುವಂತೆ ವಿಜಯ
*ಬಸವರಾಜ ಕಾಸೆ*







