

ಬಂಟ್ವಾಳ: ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ಅವರು ದಸರಾ ಸಂದರ್ಭದಲ್ಲಿ ವೇಷಹಾಕಿ ಸಂಗ್ರಹಗೊಂಡ ಎಲ್ಲಾ ಮೊತ್ತವನ್ನು ಕ್ಯಾನ್ಸರ್ ರೋಗಿಯ ಚಿಕಿತ್ಸೆಗಾಗಿ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಅವರು ಇದೇ ಮೊದಲ ಬಾರಿಗೆ ವೇಷ ಹಾಕಿದ್ದು, ಪ್ರಾರಂಭದಲ್ಲೇ ತನಗೆ ಸಂಗ್ರಹಗೊಂಡ ಮೊತ್ತ 7200 ರೂ.ಗಳನ್ನು ಯಾರಾದರೂ ಅಸಾಯಕರಿಗೆ ನೀಡುವ ಸಂಕಲ್ಪ ತೊಟ್ಟಿದ್ದರು.
ಅದರಂತೆ ಖಾಯಿಲೆಯಿಂದ ಬಳಲುತ್ತಿರುವ ಬೋಳಂತೂರು ನಿವಾಸಿ ಸುಮತಿ ಸಪಲಿಗ ಅವರಿಗೆ ಸೋಮವಾರ ನೆಟ್ಲ ಶ್ರೀ ನಿಟಿಲಾಕ್ಷ ಕ್ಷೇತ್ರದಲ್ಲಿ ದೇವದಾಸ್ ಅವರು ಮೊತ್ತವನ್ನು ಹಸ್ತಾಂತರಿಸಿದರು.
ನೆಟ್ಲ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಕಾರಂತ, ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ತುಳುನಾಡು ಪೊರ್ಲು ಸೇವಾ ಟ್ರಸ್ಟ್ನ ನೀತು ಪೂಜಾರಿ ಅಜಿಲಮೊಗರು, ಸತೀಶ್ ಗೌಡ ಕುದ್ಕುಂಜ ಉಪಸ್ಥಿತರಿದ್ದರು.
ಅಸಹಾಯಕರಿಗೆ ನೆರವಾಗುವ ಉದ್ದೇಶದಿಂದ ಈ ಬಾರಿ ಪ್ರಥಮ ವರ್ಷ ತಾನು ಮಹಿಷಾಸುರನ ವೇಷಹಾಕಿ ಮೂರು ದಿನಗಳ ಕಾಲ ಮನೆ ಮನೆಗೆ ತೆರಳಿದ್ದೇನೆ. ಮುಂದೆ ಪ್ರತಿವರ್ಷವೂ ಇದೇ ರೀತಿ ನೆರವಾಗುವ ಉದ್ದೇಶವಿದೆ. ಪ್ರಸ್ತುತ ತುಳುನಾಡು ಪೊರ್ಲು ಸೇವಾ ಟ್ರಸ್ಟ್ನ ನೀತು ಅವರ ಮೂಲಕ ತಿಳಿದುಕೊಂಡು ಸುಮತಿ ಸಪಲಿಗ ಅವರಿಗೆ ಮೊತ್ತವನ್ನು ಹಸ್ತಾಂತರಿಸಿದ್ದೇನೆ ಎಂದು ದೇವದಾಸ್ ತಿಳಿಸಿದ್ದಾರೆ.








