

ವಿಟ್ಲ: ಶ್ರೀ ದೇವತಾ ಸಮಿತಿ ವತಿಯಿಂದ ನಡೆಯಲಿರುವ 48 ನೇ ವರ್ಷದ ಶಾರದಾ ಮಹೋತ್ಸವ ವಿಟ್ಲದ ಅನಂತ ಸದನದಲ್ಲಿ ಶನಿವಾರ ಆರಂಭಗೊಂಡಿತು.
ಬೆಳಗ್ಗೆ ವಿಟ್ಲದ ಚಂದ್ರನಾಥ ಸ್ವಾಮೀ ಜೈನ ಬಸದಿಯಿಂದ ವಿಟ್ಲ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಬಳಿಕ ವೇದಮೂರ್ತಿ ಮಂಜೇಶ್ವರ ವಿಕಾಸ ಭಟ್ ಅವರ ನೇತೃತ್ವದಲ್ಲಿ ಅನಂತ ಸದನದಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಸಲಾಯಿತು.
ದೇವತಾ ಸಮಿತಿ ಅಧ್ಯಕ್ಷ ಎಂ. ರಾಧಾಕೃಷ್ಣ ನಾಯಕ್ ಧ್ವಜಾರೋಹಣಗೈದರು. ಸಭಾ ಕಾರ್ಯಕ್ರಮವನ್ನು ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ವಿಟ್ಲ ವರ್ತಕರ ಸಂಘದ ಗೌರವಾಧ್ಯಕ್ಷ ಜಗನ್ನಾಥ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ರಾಧಾಕೃಷ್ಣ ಭಟ್ ಅವರು ಮಾತನಾಡಿ ಸಂಸ್ಕಾರಯುತವಾದ ಮನಸ್ಸು ಹೊಂದಿರುವುದೇ ನಿಜವಾದ ಸಂಪತ್ತು. ಒಳ್ಳೆಯ ಮನಸ್ಸಿನ ವ್ಯಕ್ತಿಗಳ ಮುಖದಲ್ಲಿ ಭಗವಂತನನ್ನು ಕಾಣುವ ಕಾರ್ಯವಾಗಬೇಕು. ಬದುಕಿನಲ್ಲಿ ಬೇಕು ಎಂಬುದನ್ನು ತ್ಯಾಗ ಮಾಡಿ, ಇರುವ ಸಂಪತ್ತಿಗೆ ತೃಪ್ತಿಪಡಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯಿ ಹಾಗೂ ಜೇಸಿ ಆಂಗ್ಲ ಮಾಧ್ಯಮ ಶಾಲೆಗೆ ದ್ವಿತೀಯ ಸ್ಥಾನ ಪಡೆದ ನವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಮಲೇಶಿಯಾದಲ್ಲಿ ನಡೆದ ಕರಾಟೆಯಲ್ಲಿ ಸಾಧನೆಗೈದ ಅನುಷ್ಕಾ, ನಿಧಿ ಎಂ.ಎಸ್, ತೇಜಸ್, ರಂಜಿತ್, ಸಂಜಯಕುಮಾರ್, ಪವನ್ಕುಮಾರ್, ನಿವೇದಿತಾ ಹಾಗೂ ಕರಾಟೆ ತರಬೇತುದಾರ ಮಾಧವ ಅವರನ್ನು ಸನ್ಮಾನಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ವಿಟ್ಲ ಜೇಸಿಐ ಅಧ್ಯಕ್ಷ ಬಾಲಕೃಷ್ಣ, ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಉದ್ಯಮಿ ರಾಜಾರಾಮ್ ಬಲಿಪಗುಳಿ ಉಪಸ್ಥಿತರಿದ್ದರು.
ಪ್ರೇಮಾನಂದ ಭಟ್ ಪ್ರಾರ್ಥಿಸಿದರು. ದೇವತಾ ಸಮಿತಿ ಅಧ್ಯಕ್ಷ ಎಂ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಗೋಕುಲದಾಸ್ ಶೆಣೈ ವಂದಿಸಿದರು. ರಮಾನಾಥ ವಿಟ್ಲ ಸನ್ಮಾನಿತರ ಪರಿಚಯಿಸಿದರು. ಮಂಗೇಶ್ ಭಟ್ ನಿರೂಪಿಸಿದರು.








