ಬಂಟ್ವಾಳ:  ಕಾರ್ಪೋರೇಟ್ ಸಂಸ್ಥೆಗಳು ಮುಚ್ಚುವ, ರಾಷ್ಟ್ರೀಕೃತ ಬ್ಯಾಂಕ್ ಗಳು  ವಿಲೀನವಾಗುತ್ತಿರುವ  ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳು ತಲೆ ಎತ್ತುತ್ತಿರುವುದು ಸಹಕಾರಿ ರಂಗದ ಶಕ್ತಿಯಾಗಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರಕುಮಾರ್ ಹೇಳಿದ್ದಾರೆ. ಬಿ.ಸಿ.ರೋಡ್-ಧರ್ಮಸ್ಥಳ ಹೆದ್ದಾರಿಯ ಪುಂಜಾಲಕಟ್ಟೆ ಹೃದಯಭಾಗದಲ್ಲಿ ನೂತನವಾಗಿ ಸುಮಾರು 1.60 ಕೋ.ರೂ.ವೆಚ್ಚದಲ್ಲಿ ನಿರ್ಮಾಣವಾದ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ” ಸುಧನ್ವ” ಕಟ್ಟಡದಲ್ಲಿ ಸಂಘದ ಕಚೇರಿಯನ್ನು ಉದ್ಘಾಟಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಹಕಾರಿ ಕ್ಷೇತ್ರದ ಆರ್ಧಶಕ್ತಿಯೇ ನವೋದಯ ಗುಂಪಿನ ಮಹಿಳೆಯರು, ಇಪ್ಪತ್ತು ವರ್ಷಗಳಿಂದ ಈ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದು,ಸಹಕಾರ ಸಂಘಗಳ ಯಶಸ್ಸಿನ ಪಾಲುದಾರರಾಗಿದ್ದಾರೆ ಎಂದರು.     ಪಿಲಾತಬೆಟ್ಟು ಸಹಕಾರ ಸಂಘ ಸಾಲ ನೀಡುವುದು ಮಾತ್ರವಲ್ಲ, ಸಮಾಜದ ಅಭಿವೃದ್ದಿಯಲ್ಲು ತೊಡಗಿಸಿಕೊಂಡಿದೆ. ಸಂಘದ ಹವಾನಿಯಂತ್ರಣ ವ್ಯವಸ್ಥೆಗೆ 5 ಲಕ್ಷ ರೂ.ಪ್ರಕಟಿಸಿದರಲ್ಲದೆ, ಮುಂದೆಯು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಹಕಾರಕ್ಷೇತ್ರದ ಶಕ್ತಿ ತೋರಿಸುವ ದೆಸೆಯಲ್ಲಿ ಅವಿಭಜಿತ ಜಿಲ್ಲೆಯ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ಸಮವಸ್ತ್ರ ನೀಡುವ ಚಿಂತನೆ ಇದೆ ಎಂದ ಅವರು ಸಹಕಾರಿ ಸಂಘಗಳ ಸಿ.ಒ.ಗಳನ್ನು ಪರಸ್ಪರ ವರ್ಗಾವಣೆಗೊಳಿಸುವ ಮೂಲಕ ಎಲ್ಲಾ ಸಹಕಾರಿಸಂಘಗಳನ್ನು ಬಲಿಷ್ಠಗೊಳಿಸುವ ಕುರಿತು ಯೋಚಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಸಭೆಯೊಂದನ್ನು ಕರೆದು ಚರ್ಚಿಸಲಾಗುತ್ತಿದೆ ಎಂದರು.ನೂತನ “ಸುಧನ್ವ” ಕಟ್ಟಡ ಹಾಗೂ ಕೃಷಿ ಉಪಕರಣ ಮಾರಾಟ ವಿಭಾಗವನ್ನು  ಉದ್ಘಾಟಿಸಿ ಮಾತನಾಡಿದ ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಮಾತನಾಡಿ, ಶ್ರೀಮಂತರು ಮಾತ್ರ ಶ್ರೀಮಂತರಾಗುವುದಲ್ಲ, ಸರ್ವಸಾಮಾನ್ಯ ಜನರು ಕೂಡ ಶ್ರೀಮಂತರಾಗಬೇಕು ಎಂದರು.    ತ್ಯಾಗ ಮತ್ತು ಸೇವೆಯ ಹಿನ್ನಲೆಯಲ್ಲಿ ಬೆಳೆದಿರುವ ಪಿಲಾತಬೆಟ್ಟು ವ್ಯ.ಸೇ.ಸ ಸಂಘದ  ಹೊಸ ಕಟ್ಟಡದಿಂದ ಸಮಾಜದ ಜನರ ಸುಖ,ದು:ಖ,ನಲಿವಿನಲ್ಲಿ ಭಾಗಿಯಾಗಲಿ ಆಶಿಸಿದರು.     ಸಂಘದ ಭದ್ರಾತಾ ಕೊಠಡಿಯನ್ನು ಉದ್ಘಾಟಿಸಿ ಹಾಗೂ ಠೇವಣಾತಿ ಪತ್ರ ಬಿಡುಗಡೆಗೊಳಿಸಿದ ಮಂಗಳೂರು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವದ ತೊಟ್ಟಿಲು ,ಹಿರಿಯರ ತಪಸ್ಸಿನ ಫಲವಾಗಿ ಜಿಲ್ಲೆಯ ಸಹಕಾರಿ ರಂಗ ಅದ್ಬುತವಾಗಿ ಬೆಳೆದಿದೆ.ಇದು ಹಿರಿಯರಿಗೆ ಸಂದ ಗೌರವ ಎಂದರು.  ಪಿಲಾತಬೆಟ್ಟು ವ್ಯ.ಸೇ.ಸ.ಸಂಘದಲ್ಲಿ ಕ್ಯಾಂಪ್ಕೋ ಖರೀದಿ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ನಡೆದಿದೆ ಎಂದ ಅವರು ಕ್ಯಾಂಷ್ಕೋದ ಮನವಿ ಮೇರೆಗೆ ಸಹಕಾರಿ ರಂಗಕ್ಕೆ ವಿಧಿಸಲಾಗಿದ್ದ ತೆರಿಗೆಯನ್ನು( ಟಿಡಿಎಸ್) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಂದಿಸಿ ಕೇವಲ 24 ಗಂಟೆಯಲ್ಲಿ ತೆರವುಗೊಳಿಸಿರುವುದು ಅಭಿನಂದನೀಯವಾಗಿದೆ ಎಂದರು.         ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಕೌಶಲ್ಯಾಭಿವೃದ್ದಿಖಾತೆ, ಕಂಪ್ಯೂಟರೀಕರಣವನ್ನು ಉದ್ಘಾಟಿಸಿ ಶುಭಹಾರೈಸಿದರು.ಜಿಪಂ ಸದಸ್ಯ ತುಂಗಪ್ಪ ಬಂಗೇರ ಸ್ವಸಹಾಯ ಸಂಘಗಳ ಠೇವಣಾತಿ ಪತ್ರ ಬಿಡುಗಡೆಗೊಳಿಸಿದರು. ಜಿಪಂ ಸದಸ್ಯ ದ.ಕ.ಜಿಲ್ಲಾ ಕೃಷಿ ಸಹಕಾರ ಸಂಘದ ಅಧ್ಯಕ್ಷ  ರವೀಂದ್ರಕಂಬಳಿ,ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ,ಬಂಟ್ವಾಳ ತಾಲೂಕು ಸಹಕಾರಿ ಅಭಿವೃದ್ದಿ ಅಧಿಕಾರಿ ತ್ರಿವೇಣಿ ರಾವ್,ಪುಂಜಾಲಕಟ್ಟೆಯ ಪ್ರಗತಿಪರ ಕೃಷಿಕ ಉದಯಕುಮಾರ್,ತಾಪಂ ಸದಸ್ಯ ರಮೇಶ್ ಕುಡ್ಮೇರು,ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಡಾ.ಎಂ.ಹರ್ಷ ಸಂಪಿಗೆತ್ತಾಯ,ಪುಂಜಾಲಕಟ್ಟೆ ವಿ.ಎಸ್.ಎಸ್.ಎಸ್.ನ ಮಾಜಿ ಅಧ್ಯಕ್ಷೆ ಪರಮೇಶ್ವರೀ ಪಿ.ಭಟ್,ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಇರ್ವತ್ತೂರು ಗ್ರಾಪಂ ಅಧ್ಯಕ್ಷೆ ಸುಜಾತ,ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿಯವರು ಅತಿಥಿಯಾಗಿ ಭಾಗವಹಿಸಿದ್ದರು.ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ,ನಿರ್ದೇಶಕರಾದ ಸುಂದರ ನಾಯ್ಕ್,ನಾರಾಯಣ ಪೂಜಾರಿ,ಬೂಬ ಸಪಲ್ಯ,ಸಂತೋಷ್ ಕುಮಾರ್ ಶೆಟ್ಟಿ,ದಿನೇಶ್ ಮೂಲ್ಯ,ಸೀತರಾಮ ಶೆಟ್ಟಿ,ಚಂದ್ರಶೇಖರ ಹೆಗ್ಡೆ,ಶಿವಯ್ಯ,ಸರೋಜಿನಿ ಡಿ.ಶೆಟ್ಟಿ,ಹರ್ಷಿಣಿ,ಬ್ಯಾಂಕ್ ಪ್ರತಿನಿಧಿ ಕೇಶವ ಕಿಣಿ ವೇದಿಕೆಯಲ್ಲಿದ್ದರು.   ಸನ್ಮಾನ : ಇದೇ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ,ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರಕುಮಾರ್ ,  ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಿದ ಉದಯಕುಮಾರ್ ಕಟ್ಟೆಮಾರ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ  ಪವರ್ ಲಿಪ್ಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದ ಗ್ರಾಮೀಣ ಪ್ರತಿಭೆ ಋತ್ವಿಕ್   ಅವರನ್ನು ಸನ್ಮಾನಿಸಲಾಯಿತು.  ಹಾಗೆಯೇ ಸಂಘದ ನಿವೃತ್ತ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು,ಸಿಬ್ಬಂದಿಗಳು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಂಡವರನ್ನು   ಗೌರವಿಸಲಾಯಿತು.  ಈ ಸಂದರ್ಭ ಚಿಗುರು ಸ್ವಸಹಾಯ ಸಂಘದ ಉದ್ಘಾಟನೆಯನ್ನು ಡಾ.ಎಂ.ಎನ್.ಆರ್.ಉದ್ಘಾಟಿಸಿದರು. ಸಂಘದ ಅಧ್ಯಕ್ಷ  ಲಕ್ಷ್ಮೀನಾರಾಯಣ ಉಡುಪ ಅವರು ಸ್ವಾಗತಿಸಿದರು.  ಸಂಘದ ಮಾಜಿ ಕಾರ್ಯದರ್ಶಿ  ಬೂಬ ಪೂಜಾರಿ  ಪ್ರಸ್ತಾವನೆಗೈದು 1927 ರಲ್ಲಿ ಅಸ್ತಿತ್ವಕ್ಕೆ ಬಂದ ಪಿಲಾತಬೆಟ್ಟು ವ್ಯ.ಸೇ.ಸ.ಸಂಘ  ಪ್ರಸ್ತುತ ಹೆಮ್ಮರವಾಗಿ ಬೆಳೆದು ಬಂದ ಹಾದಿ ಹಾಗೂ ಕೈಗೊಂಡ ಸಾಮಾಜಿಕ ಚಟುವಟಿಕೆಯನ್ನು  ವಿವರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಅವರು ವೇದಿಕೆಯಲ್ಲಿದ್ದರು. ಕಲಾವಿದ ಎಚ್.ಕೆ.ನಯನಾಡು, ಸಂಘದ ನಿರ್ದೇಶಕ ಪಿ.ಎಂ.ಪ್ರಭಾಕರ್ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here