

ಆಸೆಯ ತ್ಯಾಗವೇ ಆನಂದದ ಉಗಮವಾಗಿದೆ. ಸನಾತನ ಸಂಸ್ಕೃತಿಯನ್ನು ಉಳಿಸಿದಾಗ ನೂತನ ಸಂಸ್ಕೃತಿ ಬೆಳಗಬಹುದು. ಕಲೆಯ ಆರಾಧನೆ ದೇವಾರಾಧನೆಗೆ ಸಮಾನವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಅವರು ಬುಧವಾರ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ಲಲಿತ ಪಂಚಮಿ ಮಹೋತ್ಸವ, ಶ್ರೀ ಚಂಡಿಕಾಯಾಗ, ಶ್ರೀ ಹನುಮಗಂಗಾ ಪುಷ್ಕರಿಣಿ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ನವರಾತ್ರಿಯಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಸಮ್ಮಿಲಿತ ದೇವಿಯರ ಆರಾಧನೆಯಾಗುತ್ತದೆ ಹೊಂದಾಣಿಕೆಯ ಸೇವೆ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಭಕ್ತರ ಸೇವೆ ಇಲ್ಲಿ ಸಂಪನ್ನವಾಗಿದೆ ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಶ್ರೀಗುರುದೇವಾನುಗ್ರಹ ಪ್ರಶಸ್ತಿ: ವಿದುಷಿ ಸಾವಿತ್ರಿ ಈಶ್ವರ ಭಟ್ ಅಮೈ, ಚಿತ್ರನಟ, ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ, ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮಕುಮಾರ್ ಕಟೀಲು, ತುಳು ನಾಟಕ ರಚನೆಗಾರ, ನಿರ್ದೇಶಕ, ನಿರ್ಮಾಪಕ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ.ಯ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತಬೈಲ್, ಅವರಿಗೆ ಸ್ವಾಮೀಜಿಯವರು ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಿದರು.
ಚಿಕ್ಕಮಗಳೂರು ಬಸವನಹಳ್ಳಿ ಠಾಣೆಯ ಸಬ್ಇನ್ಸ್ಪೆಕ್ಟರ್ ನಂದಿನಿ ಶೆಟ್ಟಿ, ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಯೀಶ್ವರಿ ಪಟ್ಲ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ನಿತ್ಯಾನಂದ ಶೆಟ್ಟಿ ಮನವಳಿಕೆ, ಒಡಿಯೂರು ಜೈ ಗುರುದೇವಾ ಕಲಾಕೇಂದ್ರದ ಅಧ್ಯಕ್ಷರಾದ ಸುಬ್ರಹ್ಮಣ್ಯ ಟಿ., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾ. ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಒಡಿಯೂರು ಶ್ರೀ ಗುರುದೇವ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಪ್ರೌಢಶಾಲಾ ಶಿಕ್ಷಕಿ ಸವಿತಾರವರು ಶ್ರೀ ಗುರುದೇವಾನುಗ್ರಹ ಪುರಸ್ಕೃತರ ಪರಿಚಯ ಓದಿದರು.
ಇದೇ ಸಂದರ್ಭದಲ್ಲಿ ಶ್ರೀ ಹನುಮಗಂಗಾ ಪುಷ್ಕರಣಿಯ ಪ್ರಾಯೋಜಕರಾದ ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ ದಂಪತಿಗಳನ್ನು, ತಾಂತ್ರಿಕ ನಿರ್ವಹಣೆ ಮಾಡಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಶೋಕ್ ಕುಮಾರ್ ಎ. ಅವರನ್ನು ಸ್ವಾಮೀಜಿಯವರು ಗೌರವಿಸಿದರು. ಪ್ರಮೀಳ ಬಾಕ್ರಬೈಲ್ ಹಾಗೂ ಶೋಭಾ ಬಾಕ್ರಬೈಲ್ ಅವರಿಗೆ ನೆರೆ ಪರಿಹಾರ ವಿತರಿಸಲಾಯಿತು.
ರೇಣುಕಾ ಎಸ್ ಶೆಟ್ಟಿ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ವಂದಿಸಿದರು.
ಬೆಳಗ್ಗೆ ಒಡಿಯೂರು ಶ್ರೀಗಳವರ ದಿವ್ಯ ಕಲ್ಪನಾಶಕ್ತಿಯ ಅನಾವರಣವಾಗಿ ಶ್ರೀಸಂಸ್ಥಾನದಲ್ಲಿ ನಿರ್ಮಾಣಗೊಂಡ ’ಶ್ರೀಹನುಮಗಂಗಾ ಪುಷ್ಕರಿಣಿ ಲೋಕಾರ್ಪಣೆಗೊಳಿಸಲಾಯಿತು. ಮಧ್ಯಾಹ್ನ ಶ್ರೀ ಚಂಡಿಕಾ ಮಹಾಯಾಗದ ಪುರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ, ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ’ಚಂದ್ರಾವಳಿ ವಿಲಾಸ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸಂಜೆ ಸಾರ್ವಜನಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ಭದ್ರಕಾಳಿಗೆ ವಿಶೇಷ ಪೂಜೆ ನಡೆಯಿತು.







